ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ದಶಕಗಳ ಬಳಿಕ ರಣಜಿ ಟೂರ್ನಿ ಆಡಲಿದ್ದಾರೆ. ಈ ಮೊದಲು ಅವರು ರಣಜಿ ಟ್ರೋಫಿ ಆಡಿದ್ದಾಗ ಇಷ್ಟ ಖ್ಯಾತಿ ಹೊಂದಿರಲಿಲ್ಲ. ಆದರೆ ಈಗ ಇವರನ್ನು ಎಲ್ಲರೂ ಗುರುತಿಸುವ ಹಾಗೆ ಆಗಿದೆ. ವಿರಾಟ್ ಕೊಹ್ಲಿ ಜ.30 ರಿಂದ ನಡೆಯುವ ರಣಜಿ ಟ್ರೋಫಿ ಪಂದ್ಯದಲ್ಲಿ ಕಣಕ್ಕೆ ಇಳಿಯಲಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಅಂಗಳದಲ್ಲಿ ಆತಿಥೇಯ ತಂಡ ರೇಲ್ವೆ ತಂಡದ ಸವಾಲು ಎದುರಿಸಲಿದೆ.
ದೆಹಲಿಯ ಯುವ ಆಟಗಾರರಿಗೆ ಇದು ಐತಿಹಾಸಿಕ ಪಂದ್ಯವಾಗಿರಲಿದೆ. ಟೀಮ್ ಇಂಡಿಯಾದ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ, ದೇಶೀಯ ಟೂರ್ನಿಯನ್ನು ಆಡಲಿದ್ದಾರೆ. ವಿರಾಟ್ ಜೊತೆ ಆಡುವು ಅನುಭವವನ್ನು ಯುವ ಆಟಗಾರರು ಪಡೆಯಲಿದ್ದಾರೆ. ವಿರಾಟ್ ರಣಜಿ ಆಡುತ್ತಿರುವುದರಿಂದ ಸುರಕ್ಷತೆಯನ್ನು ಹೆಚ್ಚಿಸಲಾಗಿದೆ.

ವಿರಾಟ್ ಕೊಹ್ಲಿ ಆಡುವುದನ್ನು ಗಮನದಲ್ಲಿಟ್ಟುಕೊಂಡು, ಡಿಡಿಸಿಎ ಮತ್ತು ದೆಹಲಿ ಪೊಲೀಸರು ಕ್ರೀಡಾಂಗಣದಲ್ಲಿ ಭದ್ರತೆ ಹೆಚ್ಚಿಸಿದ್ದಾರೆ. ಸಾಮಾನ್ಯವಾಗಿ ರಣಜಿ ಪಂದ್ಯಗಳಿಗೆ 10-12 ಖಾಸಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ, ಆದರೆ ಈ ಬಾರಿ ಅವರ ಸಂಖ್ಯೆ ಹೆಚ್ಚಾಗಲಿದೆ. ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಣಜಿ ಪಂದ್ಯವನ್ನು ನೋಡಲು ಬರುವುದರಿಂದ ಈ ವ್ಯವಸ್ಥೆಯನ್ನು ಮಾಡಲಾಗಿದೆ. ಅಭಿಮಾನಿಗಳು ಅಂಗಳ ಪ್ರವೇಶಿಸುವ ಮೊದಲು ಕಟ್ಟು ನಿಟ್ಟಿನ ಭಧ್ರತಾ ತಪಾಸಣೆಗೆ ಒಳ ಪಡುತ್ತಾರೆ.
ಈ ಬಗ್ಗೆ ಮಾತನಾಡಿರುವ ಡಿಡಿಸಿಎ ಸಚಿವರು, ವಿರಾಟ್ ಕೊಹ್ಲಿ ರಣಜಿ ಟೂರ್ನಿ ಆಡುತ್ತಿರುವುದು ಯುವ ಆಟಗಾರರಿಗೆ ಒಳ್ಳೆಯ ಸುದ್ದಿ. ಈ ತಂಡದಲ್ಲಿನ ಕೆಲವೇ ಆಟಗಾರರು ವಿರಾಟ್ ಕೊಹ್ಲಿ ಜೊತೆಗೆ ಆಡಿದ್ದಾರೆ. ಈ ಅವಕಾಶವನ್ನು ಬಳಸಿಕೊಳ್ಳಲು ಅವರು ಸಹ ಸಿದ್ಧರಾಗಿದ್ದಾರೆ ಎಂದಿದ್ದಾರೆ.
ಬಿಸಿಸಿಐ ಅಂತಾರಾಷ್ಟ್ರೀಯ ಟೂರ್ನಿಗಳಿಗೆ ನೀಡದಷ್ಟೇ ಮಹತ್ವವನ್ನು ದೇಶೀಯ ಟೂರ್ನಿಗಳಿಗೆ ನೀಡುವಂತೆ ಸೂಚಿಸಿತ್ತು. ಇದರಿಂದಾಗಿ ಸ್ಟಾರ್ ಆಟಗಾರರು ಸಹ ದೇಶೀಯ ಟೂರ್ನಿಗಳಲ್ಲಿ ಕಾಣಿಸಿಕೊಳ್ಳುವ ಹಾಗೆ ಆಗಿದೆ. ಈಗಾಗಲೇ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ರವೀಂದ್ರ ಜಡೇಜಾ ರಣಜಿ ಪಂದ್ಯದಲ್ಲಿ ಆಡಿದ್ದಾರೆ. ಈಗ ವಿರಾಟ್ ದೆಹಲಿ ಪರ ಆಡಲಿದ್ದಾರೆ. ಜ.23 ರಂದು ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ವಿರಾಟ್ ಆಡಿರಲಿಲ್ಲ. ಜ.30 ರಂದು ರೈಲ್ವೇಸ್ ವಿರುದ್ದದ ಪಂದ್ಯದಲ್ಲಿ ವಿರಾಟ್ ಅಂಗಳ ಪ್ರವೇಶಿಸಲಿದ್ದಾರೆ.
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ರಣಜಿ ಟ್ರೋಫಿಯಲ್ಲಿ ಆಯುಷ್ ಬದೋನಿ ಅವರ ನಾಯಕತ್ವದಲ್ಲಿ ಆಡಲಿದ್ದಾರೆ. ಹೀಗಾಗಿ ಕುತೂಹಲ ಮನೆ ಮಾಡಿದೆ.
ರಣಜಿ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಉತ್ತಮ ಅಂಕಿ ಅಂಶವನ್ನು ಹೊಂದಿದ್ದಾರೆ. ಇವರು 2006-07ರಲ್ಲಿ ತಮಿಳು ನಾಡು ವಿರುದ್ಧ ಪದಾರ್ಪಣೆ ಮಾಡಿದ್ದರು. ಈ ವರೆಗೆ 23 ಪಂದ್ಯಗಳಲ್ಲಿ ಬ್ಯಾಟ್ ಮಾಡಿರುವ ವಿರಾಟ್ 5 ಶತಕ ಸೇರಿದಂತೆ 1574 ರನ್ ಸಿಡಿಸಿದ್ದಾರೆ. ಇವರು 2012ರಲ್ಲಿ ಉತ್ತರ ಪ್ರದೇಶ ವಿರುದ್ಧ ತಮ್ಮ ರಣಜಿ ಟ್ರೋಫಿಯ ಕೊನೆಯ ಪಂದ್ಯವನ್ನು ಆಡಿದ್ದರು.
ದೆಹಲಿ ತಂಡ: ಆಯುಷ್ ಬದೋನಿ (ನಾಯಕ), ವಿರಾಟ್ ಕೊಹ್ಲಿ, ಪ್ರಣವ್ ರಾಜವಂಶಿ, ಸನತ್ ಸಂಗ್ವಾನ್, ಅರ್ಪಿತ್ ರಾಣಾ, ಮಾಯಾಂಕ್ ಗುಸೇನ್, ಶಿವಂ ಶರ್ಮಾ, ಸುಮಿತ್ ಮಾಥುರ್, ವಂಶ್ ಬೇಡಿ (ವಿಕೆಟ್ ಕೀಪರ್), ಮಣಿ ಗ್ರೆವಾಲ್, ಹರ್ಷ್ ತ್ಯಾಗಿ, ಸಿದ್ಧತ್ ಶರ್ಮಾ, ನವದೀಪ್ ಸೈನಿ, ಯಶ್ ಧುಲ್ ಮತ್ತು ಗಗನ್ ವ್ಯಾಟ್ಸ್.