ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಟಿ20 ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಶತಕ ಬಾರಿಸಿ ಇತಿಹಾಸದ ಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತೀಚಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಎರಡು ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದ್ದ ಟೀಮ್ ಇಂಡಿಯಾದ ಮಿಡ್ಲ್ ಆರ್ಡರ್ ಬ್ಯಾಟರ್, ದೇಶೀಯ ಟೂರ್ನಿಯಲ್ಲೂ ಇದೇ ಸ್ಥಿರ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಶನಿವಾರದಿಂದ ಆರಂಭವಾದ ಸೈಯದ್ ಮುಷ್ತಾಕ್ ಅಲಿ ಕ್ರಿಕೆಟ್ ಟೂರ್ನಿಯಲ್ಲಿ ತಿಲಕ್ ವರ್ಮಾ ಶಕತ ಬಾರಿಸಿ ದಾಖಲೆ ನಿರ್ಮಿಸಿದ್ದಾರೆ.
ತಿಲಕ್ ವರ್ಮಾ ಅವರು ಟಿ20 ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೊದಲ ಪ್ಲೇಯರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಪುರುಷರ ಹಾಗೂ ಮಹಿಳಾ ಕ್ರಿಕೆಟ್‌ನಲ್ಲಿ ಯಾರು ಮಾಡದ ಸಾಧನೆ ಮಾಡಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಹೈದರಾಬಾದ್ ಪರ ಬ್ಯಾಟ್ ಮಾಡಿದ ಸ್ಟಾರ್ ಬ್ಯಾಟರ್ ಅಬ್ಬರಿಸಿದರು. ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 248 ರನ್ ಕಲೆ ಹಾಕಿತು. ಇದರಲ್ಲಿ ತಿಲಕ್ ವರ್ಮಾ ಪಾತ್ರ ದೊಡ್ಡದು. ಸವಾಲಿನ ಗುರಿ ಬೆನ್ನಟ್ಟಿದ ಮೇಘಾಲಯ 15.1 ಓವರ್‌ಗಳಲ್ಲಿ 69 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಹೈದರಾಬಾದ್ 179 ರನ್‌ಗಳ ಅಮೋಘ ಜಯ ದಾಖಲಿಸಿತು.

ತಿಲಕ್ ವರ್ಮಾ ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಇವರು ಮೂರನೇ ಪಂದ್ಯದಲ್ಲಿ ಶತಕ ಬಾರಿಸಿದ ಬಳಿಕ, ಸೂರ್ಯಕುಮಾರ್ ಯಾದವ್, ತಿಲಕ್ ಮೂರನೇ ಕ್ರಮಾಂಕದಲ್ಲಿ ಆಡಬೇಕು ಎಂದು ತಮ್ಮ ಇಂಗಿತವನ್ನು ವ್ಯಕ್ತ ಪಡಿಸಿದ್ದಾಗಿ ತಿಳಿಸಿದ್ದರು. ತಿಲಕ್ ವರ್ಮಾ ಸೆಂಚುರಿಯನ್ ಮತ್ತು ಜೋಹಾನ್ಸ್‌ಬರ್ಗ್‌ನಲ್ಲಿ ಶತಕಗಳನ್ನು ಗಳಿಸಿದರು. ಈ ಮೂಲಕ ಸರಣಿ ಗೆಲುವಿನಲ್ಲಿ ತಮ್ಮದೇ ಆದ ಯೋಗದಾನ ನೀಡಿದರು. ಈ ಸರಣಿಯ ನಾಲ್ಕು ಪಂದ್ಯಗಳಲ್ಲಿ ಟೀಮ್ ಇಂಡಿಯಾ 3-1 ರಿಂದ ಗೆದ್ದು ಬೀಗಿದೆ.
ಹೈದರಾಬಾದ್ ತಂಡದ ಆರಂಭಿಕ ರಾಹುಲ್ ಸಿಂಗ್ ಸೊನ್ನೆ ಸುತ್ತಿದ್ದರು. ಎರಡನೇ ವಿಕೆಟ್‌ಗೆ ತನ್ಮಯ್ ಅಗರ್‌ವಾಲ್ ಹಾಗೂ ತಿಲಕ್ ವರ್ಮಾ ಜೋಡಿ ಸೊಗಸಾದ ಜೊತೆಯಾಟವನ್ನು ನೀಡಿ ತಂಡಕ್ಕೆ ಶತಕದ ಕಾಣಿಕೆ ನೀಡಿದರು. ತನ್ಮಯ್ 23 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ ಸಹಾಯದಿಂದ 55 ರನ್ ಬಾರಿಸಿ ತಂಡಕ್ಕೆ ಆಧರವಾದರು. ಎರಡನೇ ವಿಕೆಟ್‌ಗೆ ಈ ಜೋಡಿ 9 ಓವರ್ ಬ್ಯಾಟಿಂಗ್ ಮಾಡಿ 122 ರನ್‌ಗಳನ್ನು ಸೇರಿಸಿತು. ತಿಲಕ್ ವರ್ಮಾ ಜಸ್ಟ್ 67 ಎಸೆತಗಳಲ್ಲಿ 14 ಬೌಂಡರಿ, 10 ಸಿಕ್ಸರ್ ಸಹಾಯದಿಂದ 151 ರನ್ ಸಿಡಿಸಿ ಅಬ್ಬರಿಸಿದರು.

ಮಧ್ಯಮ ಕ್ರಮಾಂಕದ ರಾಹುಲ್ ಬುದಿ 30 ರನ್ ಸಿಡಿಸಿ ತಂಡಕ್ಕೆ ನೆರವಾದರು. ಮೇಘಾಲಯ ಪರ ದೀಪು ಸಂಗಮ್ 2 ವಿಕೆಟ್ ಪಡೆದರು.
ಮೇಘಾಲಯ ಪರ ಅರ್ಪಿತ್ ಭತೇವಾರ (27) ಹಾಗೂ ಜಸ್ಕಿರತ್ ಸಿಂಗ್ ಸಚ್ದೇವ (16) ಮಾತ್ರ ಡಬಲ್ ಡಿಜಿಟ್ ಮುಟ್ಟಿದರು. ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಹೈದರಾಬಾದ್ ಪರ ಅನಿಕೇತರೆಡ್ಡಿ 4, ತನಯ್ ತ್ಯಾಗರಾಜನ್ 3 ವಿಕೆಟ್ ಕಬಳಿಸಿದರು.