ಟೀಮ್ ಇಂಡಿಯಾ ಟಿ20 ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದು, ಸೂಪರ್ 8 ಹಂತಕ್ಕೆ ಅರ್ಹತೆ ಪಡೆದಿದೆ. ಲೀಗ್ ಹಂತದಲ್ಲಿ ಆಡಿರುವ ನಾಲ್ಕು ಪಂದ್ಯಗಳನ್ನು ಗೆದ್ದಿರುವ ಟೀಮ್ ಇಂಡಿಯಾ ಮುಂದಿನ ಹಂತಕ್ಕೆ ಅಜೇಯವಾಗಿ ಮುನ್ನಡೆದಿದೆ. ತಂಡದ ಸ್ಟಾರ್ ಆಟಗಾರರು ಭರ್ಜರಿ ಪ್ರದರ್ಶನ ನೀಡುತ್ತಿರುವುದು ತಂಡದ ಚಿಂತೆಯನ್ನು ದೂರ ಮಾಡಿದೆ. ಪ್ರತಿ ಪಂದ್ಯದಲ್ಲಿ ಒಬ್ಬ ಆಟಗಾರ ಜವಾಬ್ದಾರಿಯುತ ಆಟವನ್ನು ಆಡುತ್ತಿದ್ದಾರೆ. ಈಗ ಎಲ್ಲರ ಚಿತ್ತ ಭಾನುವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಸೂಪರ್ 8 ಹಂತದ ಪಂದ್ಯದ ಮೇಲೆ ನೆಟ್ಟಿದೆ.
ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಲೀಗ್ ಹಂತದಲ್ಲಿ ಅಜೇಯ ಓಟವನ್ನು ಮುಂದುವರಿಸಿವೆ. ಸೂಪರ್ 8 ಹಂತದಲ್ಲಿ ದೊಡ್ಡ ತಂಡಗಳ ನಡುವಿನ ಕಾಳಗ ಎಲ್ಲರ ಗಮನ ಸೆಳೆದಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಭಾರತ, ದಕ್ಷಿಣ ಆಫ್ರಿಕಾಕ್ಕಿಂತಲೂ ಬಲಿಷ್ಠವಾಗಿದೆ. ಆದರೆ ದಕ್ಷಿಣ ಆಫ್ರಿಕಾ ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದೆ. ಉಭಯ ತಂಡಗಳ ಭರ್ಜರಿ ಫೈಟ್ ವೇಳೆ ಟೀಮ್ ಇಂಡಿಯಾ ಸ್ಟಾರ್ ಪ್ಲೇಯರ್ ತಿಲಕ್ ವರ್ಮಾ ಅವರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿರಲಿವೆ.

ಟೀಮ್ ಇಂಡಿಯಾದ ಯುವ ಆಟಗಾರ ತಿಲಕ್ ವರ್ಮಾ, ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಅಬ್ಬರಿಸಿರುವ ಆಟಗಾರ. ಇವರು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ತಂಡಕ್ಕೆ ಆಧಾರವಾಗಿದ್ದಾರೆ. ತಂಡದ ಪರಿಸ್ಥಿತಿಗೆ ಅನುಗುಣವಾಗಿ ತಿಲಕ್ ಬ್ಯಾಟ್ ಮಾಡುತ್ತಾರೆ. ಅದರಲ್ಲೂ ತಿಲಕ್ ವರ್ಮಾ ಅವರಿಗೆ ದಕ್ಷಿಣ ಆಫ್ರಿಕಾ ಎಂದರೆ ನೆಚ್ಚಿನ ಎದುರಾಳಿ. ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ 10 ಪಂದ್ಯಗಳಲ್ಲಿ ತಿಲಕ್, 2 ಶತಕ ಹಾಗೂ 2 ಅರ್ಧಶತಕಗಳನ್ನು ಸಿಡಿಸಿ ಅಬ್ಬರಿಸಿದ್ದಾರೆ. ಅಲ್ಲದೆ 70ರ ಸರಾಸರಿಯಲ್ಲಿ 496 ರನ್ ಸಿಡಿಸಿದ್ದಾರೆ.
ಸೂಪರ್ 8 ಹಂತದ ಪಂದ್ಯದಲ್ಲಿ ತಿಲಕ್ ವರ್ಮಾ 4 ರನ್ ಬಾರಿಸುತ್ತಿದ್ದಂತೆ ಹೊಸ ದಾಖಲೆಯನ್ನು ಬರೆಯಲಿದ್ದಾರೆ. ಉಭಯ ದೇಶಗಳ ನಡುವಣ ಟಿ20 ಕ್ರಿಕೆಟ್‌ನಲ್ಲಿ 500 ರನ್‌ಗಳ ಕ್ಲಬ್ ಸೇರುವ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಸಿಕೊಳ್ಳಲಿದ್ದಾರೆ. ಇವರಿಗೂ ಮೊದಲು ಭಾರತದ ಪರ ಈ ಸಾಧನೆಯನ್ನು ಯಾರು ಮಾಡಿಲ್ಲ. ಹೀಗಾಗಿ ಇವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ತಿಲಕ್ ವರ್ಮಾ, 10 ಪಂದ್ಯ, 496 ರನ್
ರೋಹಿತ್ ಶರ್ಮಾ, 18 ಪಂದ್ಯ, 429 ರನ್
ಸೂರ್ಯಕುಮಾರ್ ಯಾದವ್, 15 ಪಂದ್ಯ, 406 ರನ್
ವಿರಾಟ್ ಕೊಹ್ಲಿ, 14 ಪಂದ್ಯ, 394 ರನ್
ಹಾರ್ದಿಕ್ ಪಾಂಡ್ಯ, 20 ಪಂದ್ಯ, 373 ರನ್
23 ವರ್ಷದ ತಿಲಕ್ ವರ್ಮಾ ಟಿ20 ವಿಶ್ವಕಪ್‌ನಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಇವರು ಆಡಿದ 4 ಪಂದ್ಯಗಳಲ್ಲಿ 26ರ ಸರಾಸರಿಯಲ್ಲಿ 106 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 11 ಬೌಂಡರಿ, 3 ಸಿಕ್ಸರ್‌ಗಳು ಸೇರಿವೆ. 2023ರಲ್ಲಿ ತಿಲಕ್ ವರ್ಮಾ ಚೊಚ್ಚಲ ಬಾರಿಗೆ ಟೀಮ್ ಇಂಡಿಯಾ ಪರ ಟಿ20 ಪಂದ್ಯಗಳಿಗೆ ಪದಾರ್ಪಣೆ ಮಾಡಿದರು. ಅಲ್ಲಿಂದ ಈ ವರೆಗೆ ಅವರು ಹಿಂತುರಿಗಿ ನೋಡಲೇ ಇಲ್ಲ. ಭಾರತದ ಪರ 44 ಟಿ20 ಪಂದ್ಯಗಳನ್ನು ಆಡಿರುವ ತಿಲಕ್ 46ರ ಸರಾಸರಿಯಲ್ಲಿ 1289 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 2 ಶತಕ ಹಾಗೂ 6 ಅರ್ಧಶತಕಗಳು ಸೇರಿವೆ. ಇನ್ನು ಭಾರತದ ಪರ 5 ಏಕದಿನ ಪಂದ್ಯಗಳನ್ನು ಆಡಿದ ಅನುಭವ ಸಹ ತಿಲಕ್ ಅವರದ್ದಾಗಿದೆ.