ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಇತ್ತೀಚಿಗೆ ಟಿ20 ಸರಣಿ ನಡೆದಿತ್ತು. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಆಟಗಾರರು ಅಮೊಘ ಪ್ರದರ್ಶನ ನೀಡಿ, ಭರವಸೆ ಮೂಡಿಸಿದ್ದಾರೆ. ಹರಿಣಗಳ ನಾಡಿನಲ್ಲಿ ಟೀಮ್ ಇಂಡಿಯಾದ ಆರಂಭಿಕ ಸಂಜು ಸ್ಯಾಮ್ಸನ್ ಹಾಗೂ ಮಧ್ಯಮ ಕ್ರಮಾಂಕದ ಆಟಗಾರ ತಿಲಕ್ ವರ್ಮಾ ಎರಡು ಶತಕಗಳನ್ನು ಸಿಡಿಸಿ ಸಂಭ್ರಮಸಿದ್ದಾರೆ. ಇವರ ಈ ಅಬ್ಬರದ ಪ್ರದರ್ಶನದ ಬಲವಾಗಿ ಈಗ ಅವರ ಟಿ20 ಶ್ರೇಯಾಂಕದಲ್ಲೂ ಏರಿಕೆ ಆಗಿದೆ.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಅಮೋಘ ಪ್ರದರ್ಶನ ನೀಡಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿರುವ ತಿಲಕ್ ವರ್ಮಾ, ಅಬ್ಬರಿಸಿದ್ದಾರೆ. ಒಂದೇ ಸರಣಿಯಲ್ಲಿ ಎರಡು ಶತಕ ಬಾರಿಸುವ ಮೂಲಕ ಚುಟುಕು ಫಾರ್ಮೆಟ್‌ನ ಹೊಸ ಸ್ಟಾರ್ ರೀತಿ ಮಿಂಚಿದ್ದಾರೆ. ಇವರ ಈ ಆರ್ಭಟಕ್ಕೆ ಐಸಿಸಿ ಶ್ರೇಯಾಂಕದಲ್ಲೂ ಭರ್ಜರಿ ಬಡ್ತಿ ಸಿಕ್ಕಿದೆ. ತಿಲಕ್ 69 ಸ್ಥಾನಗಳನ್ನು ಏರಿಕೆ ಕಂಡಿದ್ದು, ಸದ್ಯ ಮೂರನೇ ಸ್ಥಾನದಲ್ಲಿದ್ದಾರೆ. ಭಾರತದ ಪರ ಬ್ಯಾಟಿಂಗ್ ಶ್ರೇಯಾಂಕದಲ್ಲಿ ತಿಲಕ್ ವರ್ಮಾ ಉತ್ತಮ ಸಾಧನೆಯಾಗಿದೆ.

ತಿಲಕ್ ವರ್ಮಾ ಅವರು ಭಾರತದ ಪರ ಶ್ರೇಷ್ಠ ಶ್ರೇಯಾಂಕ ಹೊಂದಿರುವ ಆಟಗಾರ. ಇವರು ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್ ಅವರಿಗಿಂತಲೂ ಉತ್ತಮ ಸಾಧನೆ ಮಾಡಿದ್ದಾರೆ. ಸದ್ಯ ಇವರ ಬುಟ್ಟಿಯಲ್ಲಿ 806 ಅಂಕಗಳಿದ್ದು, ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ಮಿಸ್ಟರ್ 360 ಡಿಗ್ರಿ ಖ್ಯಾತಿಯ ಸೂರ್ಯಕುಮಾರ್ ಯಾದವ್ ಶ್ರೇಯಾಂಕದಲ್ಲಿ ನಷ್ಟ ಅನುಭವಿಸಿದ್ದಾರೆ. ಇವರು 788 ರೇಟಿಂಗ್‌ನೊಂದಿಗೆ ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ.

ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್, ಸರಣಿಯಲ್ಲಿ ಎರಡು ಶತಕ ಬಾರಿಸಿರುವ ಸಂಜು ಶ್ರೇಯಾಂಕದಲ್ಲಿ ಭರ್ಜರಿ ಬಡ್ತಿ ಪಡೆದಿದ್ದಾರೆ. ಸಂಜು 17 ಸ್ಥಾನ ಬಡ್ತಿ ಪಡೆದಿದ್ದು, 22ನೇ ಸ್ಥಾನದಲ್ಲಿದ್ದಾರೆ. ಇವರು 598 ಅಂಕಗಳನ್ನು ಕಲೆ ಹಾಕಿದ್ದಾರೆ. ಮುಂದಿನ ಸರಣಿಯಲ್ಲೂ ಸಂಜು ಅವರ ಬ್ಯಾಟಿಂಗ್ ಹೀಗೆಯೇ ಮುಂದುವರೆದರೆ, ಶ್ರೇಯಾಂಕದಲ್ಲಿ ಹೆಚ್ಚಿನ ಲಾಭವನ್ನು ಪಡೆಯಲಿದ್ದಾರೆ.
ಟಿ20 ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ನಂಬರ್ 1 ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಉಳಿದಂತೆ ಇಂಗ್ಲೆಂಡ್‌ನ ಫಿಲ್ ಸಾಲ್ಟ್ ಎರಡನೇ ಸ್ಥಾನದಲ್ಲಿದ್ದಾರೆ. ಟೀಮ್ ಇಂಡಿಯಾದ ಯಶಸ್ವಿ ಜೈಸ್ವಾಲ್ ಒಂದು ಸ್ಥಾನ ಕುಸಿತ ಕಂಡಿದ್ದು 8ನೇ ಸ್ಥಾನ ತಲುಪಿದ್ದಾರೆ.
ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಟಿ20 ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದಿದ್ದಾರೆ. ಇವರು ದಕ್ಷಿಣ ಆಫ್ರಿಕಾ ವಿರುದ್ಧ ಸ್ಥಿರ ಪ್ರದರ್ಶನ ನೀಡಿದ ಫಲವಾಗಿ ಎರಡು ಸ್ಥಾನ ಜಿಗಿತ ಕಂಡಿದ್ದು, 244 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸ್ಥಿರ ಪ್ರದರ್ಶನ ನೀಡಿದ್ದ ಅರ್ಷದೀಪ್ ಸಿಂಗ್ ಶ್ರೇಯಾಂಕದಲ್ಲಿ ಬಡ್ತಿ ಪಡೆದಿದ್ದು, ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ. ಮೂರು ಸ್ಥಾನ ಜಿಗಿತ ಕಂಡಿರುವ ಇವರು 656 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದ್ದಾರೆ. ಸ್ಪಿನ್ ಬೌಲರ್ ರವಿ ಬಿಷ್ಣೋಯಿ 8, ಅಕ್ಷರ್ ಪಟೇಲ್ 13ನೇ ಸ್ಥಾನದಲ್ಲಿದ್ದಾರೆ.