ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಆಟಗಾರರ ಆರ್ಭಟ ಮುಂದುವರೆದಿದೆ. ಭಾರತ ಡಿ ವಿರುದ್ಧ ತಿಲಕ್ ವರ್ಮಾ ಹಾಗೂ ಪ್ರಥಮ್ ಸಿಂಗ್ ಶತಕ ಬಾರಿಸಿ ಅಬ್ಬರಿಸಿದ್ದಾರೆ. ಈ ಮೂಲಕ ಭಾರತ ಎ ಸವಾಲಿನ ಗುರಿಯನ್ನು, ಎದುರಾಳಿ ಭಾರತ ಡಿ ತಂಡಕ್ಕೆ ನೀಡಿದೆ.
ಶನಿವಾರ ಮೂರನೇ ದಿನದಾಟವನ್ನು 1 ವಿಕೆಟ್‌ಗೆ 115 ರನ್‌ಗಳಿಂದ ಮುಂದುವರೆಸಿದೆ ಭಾರತ ಎ ಭರ್ಜರಿ ಆಟದ ಪ್ರದರ್ಶನ ನೀಡಿ 3 ವಿಕೆಟ್‌ಗೆ 380 ರನ್ ಸೇರಿಸಿ ಡಿಕ್ಲೇರ್ ಮಾಡಿಕೊಂಡಿತು. ಸವಾಲಿನ ಗುರಿಯನ್ನು ಹಿಂಬಾಲಿಸುತ್ತಿರುವ ಭಾರತ ಡಿ ತಂಡ ದಿನದಾಟದಂತ್ಯಕ್ಕೆ 1 ವಿಕೆಟ್‌ಗೆ 62 ರನ್ ಸೇರಿಸಿತ್ತು. ಯಶ್ ದುಬೆ (ಅಜೇಯ 15) ಹಾಗೂ ರಿಕಿ ಬುಯಿ (ಅಜೇಯ 44) ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ ಡಿ ಗೆಲುವಿನಗೆ 426 ರನ್‌ಗಳ ಅವಶ್ಯಕತೆ ಇದೆ. ಇನ್ನು ಭಾರತ ಎ ತಂಡದ ಜಯಕ್ಕೆ 9 ವಿಕೆಟ್ ಬೇಕಿದೆ.

ಕೊನೆಯ ದಿನದಾಟದಲ್ಲಿ ಭಾರತ ಡಿ ತಂಡ ಮೊದಲಾವಧಿಯಲ್ಲಿ ಎಚ್ಚರಿಕೆಯ ಆಟವನ್ನು ಆಡಿ ವಿಕೆಟ್ ಬೀಳದಂತೆ ಕಾಯ್ದುಕೊಳ್ಳುವಲ್ಲಿ ಸಫಲವಾದರೆ, ಪಂದ್ಯವನ್ನು ಡ್ರಾ ಮಾಡಿಕೊಳ್ಳಬಹುದು.
ಭಾರತ ಎ ತಂಡದ ಪರ ಪ್ರಥಮ್ ಸಿಂಗ್ ಹಾಗೂ ತಿಲಕ್ ವರ್ಮಾ ಜೋಡಿ ಎರಡನೇ ವಿಕೆಟ್‌ಗೆ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿಯನ್ನು ಕಟ್ಟಿ ಹಾಕಲು ಶ್ರೇಯಸ್ ಅಯ್ಯರ್ ಪಡೆ ವಿಫಲವಾಯಿತು. ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಮಾಡಿದ ಜೋಡಿ ಭಾರತ ಎ ತಂಡ ಬಿಗ್ ಸ್ಕೋರ್ ಕಲೆ ಹಾಕುವಲ್ಲಿ ಮಹತ್ವದ ಪಾತ್ರವನ್ನು ವಹಿಸಿತು. ಈ ಜೋಡಿ ಎರಡನೇ ವಿಕೆಟ್‌ಗೆ ಶತಕದ ಜೊತೆಯಾಟವನ್ನು ನೀಡಿತು.

ಅರ್ಧಶತಕದೊಂದಿಗೆ ಮೂರನೇ ದಿನದ ಆಟವನ್ನು ಆರಂಭಿಸಿದ ಪ್ರಥಮ್ ಸಿಂಗ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 189 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್ ಸಹಾಯದಿಂದ 122 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು.
ಮುಂಬೈ ತಂಡದ ಭರವಸೆಯ ಬ್ಯಾಟರ್ ತಿಲಕ್ ವರ್ಮಾ ಸೊಗಸಾದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 193 ಎಸೆತಗಳಲ್ಲಿ 9 ಬೌಂಡರಿ ಒಳಗೊಂಡಂತೆ ಅಜೇಯ 111 ರನ್ ಸಿಡಿಸಿ ತಂಡಕ್ಕೆ ನೆರವಾದರು. ಭಾರತ ಎ ತಂಡ 3 ವಿಕೆಟ್‌ಗೆ 380 ರನ್ ಗಳಿಸಿದ್ದಾಗ ಪಂದ್ಯವನ್ನು ಡಿಕ್ಲೇರ್ ಮಾಡಿಕೊಳ್ಳಲಾಯಿತು. ಭಾರತ ಎ ತಂಡದ ಪರ ಶಾಶ್ವತ್ ರಾವತ್ ಅಜೇಯ 64 ರನ್ ಬಾರಿಸಿದರು.
ಭಾರತ ಡಿ ತಂಡದ ಪರ ಸೌರಭ್ ಕುಮಾರ್ ಎರಡು ವಿಕೆಟ್ ಪಡೆದು ಬೀಗಿದರು.
ಭಾನುವಾರ ಪಂದ್ಯದ ಕೊನೆಯ ದಿನವಾಗಿದ್ದು ಕುತೂಹಲ ಹೆಚ್ಚಿಸಿದೆ. ಈಗಾಗಲೇ ಭಾರತ ಎ ಹಾಗೂ ಭಾರತ ಡಿ ತಂಡಗಳು ತಲಾ ಒಂದೊಂದು ಸೋಲು ಕಂಡಿದ್ದು, ಮೊದಲ ಗೆಲುವಿನ ಹಾರ ಯಾರಿಗೆ ಬೀಳುತ್ತದೆ ಎಂಬುದು ಕುತೂಹಲ ಮೂಡಿಸಿದೆ.