ಮುಂಬರುವ ಭಾರತ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ನ್ಯೂಜಿಲೆಂಡ್ ತಂಡದಲ್ಲಿ ದೊಡ್ಡ ಬದಲಾವಣೆಯಾಗಿದೆ. ನ್ಯೂಜಿಲೆಂಡ್ ತಂಡವು ಅಕ್ಟೋಬರ್ 16 ರಿಂದ 3 ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದೆ.
ಈ ಸರಣಿಗೂ ಮುನ್ನ ವೇಗದ ಬೌಲರ್ ಟಿಮ್ ಸೌಥಿ ನ್ಯೂಜಿಲೆಂಡ್‌ನ ಟೆಸ್ಟ್ ನಾಯಕತ್ವವನ್ನು ತೊರೆದಿದ್ದಾರೆ. ಶ್ರೀಲಂಕಾ ವಿರುದ್ಧದ ಹೀನಾಯ ಸೋಲಿನ ನಂತರ ಸೌಥಿ ಈ ನಿರ್ಧಾರ ಕೈಗೊಂಡಿದ್ದಾರೆ. ಅವರು ಎರಡು ಬಾರಿ ನಾಯಕತ್ವ ವಹಿಸಿಕೊಳ್ಳುವ ಮೂಲಕ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಿದ್ದಾರೆ.

ಟಿಮ್ ಸೌಥಿ ಅವರು ಟೆಸ್ಟ್ ನಾಯಕತ್ವ ತ್ಯಜಿಸಿದ ನಂತರ ಅವರ ಸ್ಥಾನಕ್ಕೆ ಸ್ಟಾರ್ ಬ್ಯಾಟರ್ ಟಾಮ್ ಲ್ಯಾಥಮ್ ಅವರಿಗೆ ಪಟ್ಟ ಕಟ್ಟಲಾಗಿದೆ. ಈಗಾಗಲೇ ಲ್ಯಾಥಮ್ ಅವರು ಏಕದಿನ ಮತ್ತು ಟಿ20 ತಂಡಗಳ ನಾಯಕರಾಗಿದ್ದು, ಭಾರತ ವಿರುದ್ಧ ಟೆಸ್ಟ್ ಸರಣಿಯಿಂದ ನ್ಯೂಜಿಲೆಂಡ್ ತಂಡವನ್ನು ಮೂರು ಮಾದರಿಯಲ್ಲೂ ಮುನ್ನಡೆಸಲಿದ್ದಾರೆ.
2022ರ ಕೊನೆಯಲ್ಲಿ ಸ್ಟಾರ್ ಬ್ಯಾಟರ್ ಕೇನ್ ವಿಲಿಯಮ್ಸನ್ ನಾಯಕತ್ವದಿಂದ ಕೆಳಗಿಳಿದ ನಂತರ ಟಿಮ್ ಸೌಥಿ ಅವರು ನ್ಯೂಜಿಲೆಂಡ್ ಟೆಸ್ಟ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರು. ಅವರು 14 ಟೆಸ್ಟ್ ಪಂದ್ಯಗಳಲ್ಲಿ ನ್ಯೂಜಿಲೆಂಡ್ ತಂಡದ ನಾಯಕರಾಗಿದ್ದರು. ತಮ್ಮ ನಾಯಕತ್ವದಲ್ಲಿ ತಲಾ 6 ಪಂದ್ಯಗಳಲ್ಲಿ ಸೋಲು-ಗೆಲುವು ತಂಡವನ್ನು ಮುನ್ನಡಸಿದ್ದು, 2 ರಲ್ಲಿ ಡ್ರಾ ಸಾಧಿಸಿದ್ದಾರೆ. ಇದರಲ್ಲಿ ಶ್ರೀಲಂಕಾ ವಿರುದ್ಧದ ಇತ್ತೀಚಿನ 0-2 ಸೋಲು ಕೂಡ ಸೇರಿದೆ.
ನನ್ನ ವೃತ್ತಿಜೀವನದುದ್ದಕ್ಕೂ ತಂಡವೇ ನನಗೆ ಮೊದಲು. ಹೀಗಾಗಿ ತಂಡದ ಹಿತದೃಷ್ಟಿಯಿಂದ ನಾನು ನಾಯಕತ್ವದಿಂದ ಕೆಳಗಿಳಿಯುತ್ತಿದ್ದೇನೆ. ವಿಶೇಷ ಮಾದರಿಯಲ್ಲಿ ಬ್ಲ್ಯಾಕ್ ಕ್ಯಾಪ್ಸ್ ತಂಡದ ನಾಯಕತ್ವ ವಹಿಸಿರುವುದು ನನಗೆ ದೊಡ್ಡ ಗೌರವ ಮತ್ತು ಸೌಭಾಗ್ಯ ತಂದಿದೆ ಎಂದು ಟಿಮ್ ಸೌಥಿ ಹೇಳಿದ್ದಾರೆ.
ತಂಡಕ್ಕೆ ಸೇವೆ ಸಲ್ಲಿಸುವ ಮಾರ್ಗವೆಂದರೆ ಮುಂದಿನ ದಿನಗಳಲ್ಲಿ ನ್ಯೂಜಿಲೆಂಡ್ ಟೆಸ್ಟ್ ತಂಡದ ಪರ ಉತ್ತಮ ಪ್ರದರ್ಶನ ನೀಡುವ ಮೂಲಕ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆಯುತ್ತೇನೆ. ಹೊಸ ನಾಯಕನಾದ ಲ್ಯಾಥಮ್ ಅವರಿಗೆ ಶುಭ ಹಾರೈಸುತ್ತೇನೆ. ಹಲವು ವರ್ಷಗಳಿಂದ ಅವರು ನನಗಾಗಿ ಮಾಡಿದಂತೆ ಅವರ ಪ್ರಯಾಣದಲ್ಲಿ ಬೆಂಬಲವಾಗಿ ನಾನು ಇರುತ್ತೇನೆ ಎಂದು ಟಿಮ್ ಸೌಥಿ ತಿಳಿಸಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶ ನಡುವೆ ಅಕ್ಟೋಬರ್ 6 ರಂದು ಟಿ20 ಸರಣಿಯು ಪ್ರಾರಂಭವಾಗಲಿದೆ. ಬಾಂಗ್ಲಾದೇಶ ವಿರುದ್ಧ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಮ್ ಇಂಡಿಯಾ 3 ಪಂದ್ಯಗಳನ್ನು ಆಡಲಿದೆ. ಇದಾದ ಬಳಿಕ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಈ ಸರಣಿ ಭಾರೀ ಕುತೂಹಲ ಮೂಡಿಸಿದೆ.
ನ್ಯೂಜಿಲೆಂಡ್ ಸೋಲಿಸುವ ಮೂಲಕ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಟಿಕೆಟ್ ಗಿಟ್ಟಿಸಿಕೊಳ್ಳುವ ತವಕದಲ್ಲಿದೆ. ಅಕ್ಟೋಬರ್ 16 ರಿಂದ 20 ರವರೆಗೆ ಬೆಂಗಳೂರಿನಲ್ಲಿ ಭಾರತ ಮತ್ತ ನ್ಯೂಜಿಲೆಂಡ್ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಎರಡನೇ ಪಂದ್ಯ ಅಕ್ಟೋಬರ್ 24 ರಿಂದ 28 ರವರೆಗೆ ಪುಣೆಯಲ್ಲಿ ನಡೆಯಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ನ್ಯೂಜಿಲೆಂಡ್ ಎದುರಿಸಲಿದೆ.