ಈ ವರ್ಷ ಅಂದರೆ 2024ರ ಇಸವಿಯಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ಹಲವು ರೋಮಾಂಚಕಾರಿ ಘಟನೆಗಳು ನಡೆದಿವೆ. ಇದರಲ್ಲಿ ಅನೇಕ ಬೌಲರ್‌ಗಳು ಸಾಧನೆಯ ಶಿಖರವನ್ನು ಏರಿದ್ದಾರೆ. ಆದರೆ ಈ ವರ್ಷದ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿರುವ ಭಾರತದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ಅವರು ತಮ್ಮ ಮಾರಕ ಬೌಲಿಂಗ್‌ನಿಂದ ಹಲವು ದಾಖಲೆಗಳನ್ನು ಮುರಿದ್ದಾರೆ. ಇಲ್ಲಿಯವರೆಗೆ ಆಡಿದ ಪಂದ್ಯಗಳ ಆಧಾರದ ಮೇಲೆ ಈ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.
ಜಸ್ಪ್ರೀತ್ ಬುಮ್ರಾ
ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಈ ವರ್ಷ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಈ ವರ್ಷ ಇಲ್ಲಿವರೆಗೆ ಆಡಿರುವ 12 ಪಂದ್ಯಗಳಲ್ಲಿ 294.4 ಓವರ್‌ಗಳನ್ನು ಬೌಲಿಂಗ್ ಮಾಡಿದ್ದು, 62 ವಿಕೆಟ್‌ಗಳನ್ನು ಪಡೆದಿದ್ದಾರೆ. 45 ರನ್‌ಗೆ 6 ವಿಕೆಟ್ ಪಡೆದಿರುವ ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಭಾರತ ಹಲವು ಪಂದ್ಯಗಳನ್ನು ಗೆಲ್ಲುವಲ್ಲಿ ಅವರ ಪ್ರದರ್ಶನ ಪ್ರಮುಖ ಪಾತ್ರ ವಹಿಸಿದ್ದಾರೆ.

ಗಸ್ ಅಟ್ಕಿನ್ಸನ್
ಇಂಗ್ಲೆಂಡ್‌ನ 6 ಅಡಿ 2 ಇಂಚು ಎತ್ತರದ ವೇಗದ ಬೌಲರ್ ಗಸ್ ಅಟ್ಕಿನ್ಸನ್ ಒಟ್ಟು 52 ವಿಕೆಟ್‌ಗಳನ್ನು ಪಡೆದು ಈ ವರ್ಷ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ. 2024ರಲ್ಲಿ ಗಸ್ ಅಟ್ಕಿನ್ಸನ್ ಅವರ ಅತ್ಯುತ್ತಮ ಪ್ರದರ್ಶನ 45 ರನ್‌ಗೆ 7 ವಿಕೆಟ್.
ಶೋಯೆಬ್ ಬಶೀರ್
ಇಂಗ್ಲೆಂಡ್‌ನ ಯುವ ಆಫ್-ಸ್ಪಿನ್ನರ್ ಶೋಯೆಬ್ ಬಶೀರ್ ಅವರು ಈ ವರ್ಷ ಟೆಸ್ಟ್ ಕ್ರಿಕೆಟ್ ಅತಿಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 2024 ರಲ್ಲಿ ಅವರು 15 ಟೆಸ್ಟ್ ಪಂದ್ಯಗಳಲ್ಲಿ 49 ವಿಕೆಟ್‌ಗಳನ್ನು ಪಡೆದಿದ್ದಾರೆ.
ಮ್ಯಾಟ್ ಹೆನ್ರಿ
ನ್ಯೂಜಿಲೆಂಡ್‌ನ ಬಲಗೈ ಸ್ಟಾರ್ ವೇಗದ ಬೌಲರ್ ಮ್ಯಾಟ್ ಹೆನ್ರಿ ಕೂಡ 2024 ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. 48 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ. ಇತ್ತೀಚೆಗೆ ತವರಿನಲ್ಲಿ ಭಾರತ ತಂಡವನ್ನು ನ್ಯೂಜಿಲೆಂಡ್ ಸೋಲಿಸುವಲ್ಲಿ ಮ್ಯಾಟ್ ಹೆನ್ರಿ ಪ್ರಮುಖ ಪಾತ್ರವಹಿಸಿದ್ದರು.
ಪ್ರಭಾತ್ ಜಯಸೂರ್ಯ
ಶ್ರೀಲಂಕಾದ ಎಡಗೈ ಸ್ಟಾರ್ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಅವರ ಹೆಸರು 2024ರಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದವರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಈ ವರ್ಷ ಇದುವರೆಗೆ ಅವರು 48 ವಿಕೆಟ್‌ಗಳನ್ನು ಪಡೆದಿದ್ದಾರೆ.
ರವಿಚಂದ್ರನ್ ಅಶ್ವಿನ್
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಗಬ್ಬಾ ಟೆಸ್ಟ್ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಅಶ್ವಿನ್ ಈ ವರ್ಷ 11 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಒಟ್ಟು 47 ವಿಕೆಟ್ ಪಡೆದಿದ್ದಾರೆ. ಅವರ ಅತ್ಯುತ್ತಮ ಪ್ರದರ್ಶನ 88 ರನ್‌ಗೆ 6 ವಿಕಟ್ ಪಡೆದಿರುವುದು. ಹಲವು ಟೆಸ್ಟ್ ಪಂದ್ಯಗಳಲ್ಲಿ ಭಾರತದ ಗೆಲುವಿನಲ್ಲಿ ಅಶ್ವಿನ್ ಪ್ರಮುಖ ಪಾತ್ರ ವಹಿಸಿದ್ದರು.
ರವೀಂದ್ರ ಜಡೇಜಾ
ಭಾರತದ ಎಡಗೈ ಸ್ಟಾರ್ ಸ್ಪಿನ್ನರ್ ರವೀಂದ್ರ ಜಡೇಜಾ ಅವರು ಈ ವರ್ಷ ಇಲ್ಲಿಯವರೆಗೆ 11 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 44 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅದ್ಭುತ ಪ್ರದರ್ಶನ ನೀಡಿದ್ದಾರೆ. ತವರಿನ ಪಂದ್ಯಗಳಲ್ಲಿ ಜಡೇಜಾ ಬೌಲಿಂಗ್ ಪ್ರದರ್ಶನ ಉತ್ತಮವಾಗಿದೆ.
ಅಸಿತಾ ಫೆರ್ನಾಂಡೊ
ಶ್ರೀಲಂಕಾದ ಬಲಗೈ ವೇಗದ ಬೌಲರ್ ಅಸಿತಾ ಫೆರ್ನಾಂಡೊ 2024ರಲ್ಲಿ 9 ಟೆಸ್ಟ್ ಪಂದ್ಯಗಳಲ್ಲಿ 37 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ 102 ರನ್‌ಗಳಿಗೆ 5 ವಿಕೆಟ್‌ಗಳು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಪ್ರವಾಸಿ ನ್ಯೂಜಿಲೆಂಡ್ ತಂಡವನ್ನು ಶ್ರೀಲಂಕಾ ಸೋಲಿಸಿ ಟೆಸ್ಟ್ ಸರಣಿ ಗೆಲ್ಲುವಲ್ಲಿ ಅಸಿತಾ ಫೆರ್ನಾಂಡೊ ಕೊಡುಗೆ ಮರೆಯುವಂತಿಲ್ಲ.
ವಿಲಿಯಂ ಪೀಟರ್ ಓ'ರೂರ್ಕ್
ನ್ಯೂಜಿಲೆಂಡ್‌ನ ಬಲಗೈ ವೇಗದ ಬೌಲರ್ ವಿಲಿಯಂ ಪೀಟರ್ ಓ'ರೂರ್ಕ್ 2024 ರಲ್ಲಿ 10 ಪಂದ್ಯಗಳಲ್ಲಿ 36 ವಿಕೆಟ್‌ಗಳನ್ನು ಪಡೆದು ಮಿಂಚಿದ್ದಾರೆ. ಈ ಪಟ್ಟಿಯಲ್ಲಿ 9ನೇ ಸ್ಥಾನ ಪಡೆಯುವಲ್ಲಿ ಓ'ರೂರ್ಕ್ ಯಶಸ್ವಿಯಾಗಿದ್ದಾರೆ.
ಜೋಶ್ ಹ್ಯಾಜಲ್‌ವುಡ್
ಆಸ್ಟ್ರೇಲಿಯಾದ ಬಲಗೈ ಸ್ಟಾರ್ ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ಈ ಟಾಪ್-10 ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ. ಆಡಿದ 7 ಪಂದ್ಯಗಳಲ್ಲಿ 35 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2024 ರಲ್ಲಿ ಹ್ಯಾಜಲ್‌ವುಡ್ ಕೂಡ ಗಾಯಗಳೊಂದಿಗೆ ಹೋರಾಡಿದ್ದು, ಇದರಿಂದಾಗಿ ಅವರ ವಿಕೆಟ್‌ಗಳ ಸಂಖ್ಯೆ ಕಡಿಮೆಯಾಗಿವೆ.