ಮಾರ್ಚ್ 22 ರಿಂದ ಪ್ರಾರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ಟೂರ್ನಿಗಾಗಿ ಉತ್ಸಾಹವು ಉತ್ತುಂಗದಲ್ಲಿದೆ. ಶ್ರೀಮಂತ ಲೀಗ್‌ನಲ್ಲಿ ಆಟಗಾರರು ಮಿಂಚಲು ಸಜ್ಜಾಗುತ್ತಿದ್ದಾರೆ. ಬೌಲರ್‌ಗಳು ಬ್ಯಾಟರ್‌ಗಳನ್ನು ಕಟ್ಟಿಹಾಕಲು ತಂತ್ರಗಳನ್ನು ರೂಪಿಸುತ್ತಿದ್ದಾರೆ, ಆದರೆ ಬ್ಯಾಟರ್‌ಗಳು ಬೌಲರ್‌ಗಳ ಬೆವರಿಳಿಸಲು ಕಠಿಣ ಅಭ್ಯಾಸ ಮಾಡುತ್ತಿದ್ದಾರೆ. ಈ ಬಾರಿ ಕೆಲವು ಬ್ಯಾಟರ್‍ಗಳ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಬ್ಯಾಟರ್‍ಗಳು ಐಪಿಎಲ್ 2025ರಲ್ಲಿ ಅಬ್ಬರಿಸಲಿದ್ದಾರೆ.
ಐಪಿಎಲ್ 2025ರಲ್ಲಿ ಬ್ಯಾಟಿಂಗ್ ಮೂಲಕ ಎಲ್ಲರನ್ನು ರಂಜಿಸಲು ಟಾಪ್-5 ಬ್ಯಾಟರ್‍ಗಳು ತಯಾರಾಗುತ್ತಿದ್ದಾರೆ. ಈ ವರ್ಷ ಐಪಿಎಲ್‌ನಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನದ ಮೂಲಕ ದಾಖಲೆಯ ಪುಟಕ್ಕೆ ಸೇರಲು ಸಜ್ಜಾಗಿರುವ ಈ ಟಾಪ್-5 ಬ್ಯಾಟರ್‍ಗಳ ಬಗ್ಗೆ ಇಲ್ಲಿದೆ ಮಾಹಿತಿ.

ಮುಂಬೈ ಇಂಡಿಯನ್ಸ್ ತಂಡದ ಸ್ಪೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಐಪಿಎಲ್ 2025ರಲ್ಲಿ ದಾಖಲೆಗಳನ್ನು ಸೃಷ್ಟಿಸಲು ಸಜ್ಜಾಗಿದ್ದಾರೆ. ಸೂರ್ಯಕುಮಾರ್ ಯಾದವ್ 360 ಡಿಗ್ರಿ ಬ್ಯಾಟರ್. ಅವರು ಮೈದಾನದ ಎಲ್ಲೆಡೆ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸುವಲ್ಲಿ ನಿಪುಣರು. ಐಪಿಎಲ್ 2025 ರಲ್ಲಿ, ಸೂರ್ಯಕುಮಾರ್ ಯಾದವ್ ಬಿರುಸಿನ ಬ್ಯಾಟಿಂಗ್ ಮೂಲಕ ಬೌಲರ್‌ಗಳಿಗೆ ಬೆವರಿಳಿಸಬಹುದು. ಮುಂಬೈ ಇಂಡಿಯನ್ಸ್ ತಂಡದ ಪರ ಐಪಿಎಲ್ 2024ರಲ್ಲಿ ಆಡಿದ 11 ಪಂದ್ಯಗಳಲ್ಲಿ 34.50 ಸರಾಸರಿಯಲ್ಲಿ 345 ರನ್ ಗಳಿಸಿದ್ದರು. ಇದರಲ್ಲಿ ಒಂದು ಶತಕ ಮತ್ತು 3 ಅರ್ಧಶತಕಗಳು ಸೇರಿವೆ. ಅವರ ಅತ್ಯುತ್ತಮ ಸ್ಕೋರ್ ಅಜೇಯ 102 ರನ್‌ಗಳು.
ಯಶಸ್ವಿ ಜೈಸ್ವಾಲ್ ಪಂದ್ಯದ ಗತಿಯನ್ನು ಕ್ಷಣಮಾತ್ರದಲ್ಲಿ ಬದಲಾಯಿಸಬಲ್ಲ ಬ್ಯಾಟರ್. ಯಶಸ್ವಿ ಜೈಸ್ವಾಲ್ ಐಪಿಎಲ್ 2025 ರಲ್ಲಿ ಅತಿಹೆಚ್ಚು ರನ್ ಕಲೆ ಹಾಕಬಲ್ಲ ಬ್ಯಾಟರ್‍ಗಳ ಪಟ್ಟಿಯಲ್ಲಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದ ಪರ ಆರಂಭಿಕ ಬ್ಯಾಟರ್ ಆಗಿರುವ ಯಶಸ್ವಿ ಜೈಸ್ವಾಲ್ ಐಪಿಎಲ್ 2024ರಲ್ಲಿ ಆಡಿದ 16 ಪಂದ್ಯಗಳಲ್ಲಿ 31.07 ಸರಾಸರಿಯಲ್ಲಿ 1 ಶತಕ ಮತ್ತು 1 ಅರ್ಧಶತಕವನ್ನು ಒಳಗೊಂಡಂತೆ 435 ರನ್ ಗಳಿಸಿದರು. ಅವರ ಅತ್ಯುತ್ತಮ ಸ್ಕೋರ್ ಅಜೇಯ 104 ರನ್. ಯಶಸ್ವಿ ಜೈಸ್ವಾಲ್ ಅತ್ಯಂತ ವೇಗವಾಗಿ ರನ್ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ.
ಆರ್ಸಿಬಿ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಐಪಿಎಲ್ 2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಲಿದ್ದಾರೆ. ಐಪಿಎಲ್‌ನಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಸದ್ದು ಮಾಡಿದ್ದಾರೆ. ಕಳೆದ ವರ್ಷ ಐಪಿಎಲ್‌ನಲ್ಲಿ ಫಾಫ್ ಡು ಪ್ಲೆಸಿಸ್ 15 ಪಂದ್ಯಗಳಲ್ಲಿ 29.20 ಸರಾಸರಿಯಲ್ಲಿ 4 ಅರ್ಧಶತಕಗಳು ಸೇರಿದಂತೆ 438 ರನ್ ಗಳಿಸಿದ್ದರು. ಅವರ ಅತ್ಯುತ್ತಮ ಸ್ಕೋರ್ 64 ರನ್‌ಗಳು. ಐಪಿಎಲ್ 2025 ರಲ್ಲಿ ಫಾಫ್ ಡು ಪ್ಲೆಸಿಸ್ ತಮ್ಮ ಬ್ಯಾಟಿಂಗ್ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರೆ, ಡೆಲ್ಲಿ ಕ್ಯಾಪಿಟಲ್ಸ್ ಚಾಂಪಿಯನ್ ಆಗಲಿದೆ.
ಐಪಿಎಲ್ 2025 ರಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್‌ಮನ್ ಗಿಲ್ ದಾಖಲೆಗಳನ್ನು ಸೃಷ್ಟಿಸಲು ತಯಾರಾಗಿದ್ದಾರೆ. ಕಳೆದ ವರ್ಷದ ಐಪಿಎಲ್‌ನಲ್ಲಿ 12 ಪಂದ್ಯಗಳಲ್ಲಿ 38.73ರ ಸರಾಸರಿಯಲ್ಲಿ ಶುಭಮನ್ ಗಿಲ್ 426 ರನ್ ಗಳಿಸಿದ್ದರು. ಇದರಲ್ಲಿ 1 ಶತಕ ಮತ್ತು 2 ಅರ್ಧಶತಕಗಳು ಸೇರಿವೆ. ಅವರ ಅತ್ಯುತ್ತಮ ಸ್ಕೋರ್ 104 ರನ್. ಇತ್ತೀಚೆಗೆ, ಶುಭಮನ್ ಗಿಲ್ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಅದ್ಭುತ ಪ್ರದರ್ಶನ ನೀಡಿದರು. 5 ಪಂದ್ಯಗಳಲ್ಲಿ 188 ರನ್ ಗಳಿಸಿದರು. ಭಾರತದ ಭವಿಷ್ಯದ ನಾಯಕನಾಗಿ ಶುಭಮನ್ ಗಿಲ್ ಅವರನ್ನು ನೋಡಲಾಗುತ್ತಿದೆ.
ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಮೊದಲ ಬಾರಿಗೆ ಚಾಂಪಿಯನ್ ಮಾಡಲು ಪಣ ತೊಟ್ಟಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಆರ್‍ಸಿಬಿ ಮೂರು ಬಾರಿ ಫೈನಲ್ ತಲುಪಿದೆ, ಆದರೆ ಒಂದೇ ಒಂದು ಟ್ರೋಫಿಯನ್ನು ಎತ್ತಿ ಹಿಡಿಯಲು ಸಾಧ್ಯವಾಗಿಲ್ಲ. ಮೂರು ಬಾರಿಯೂ ರನ್ನರ್ ಅಪ್ ಆಗಿದೆ. ಐಪಿಎಲ್ 2025ರಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದು, ಆರೆಂಜ್ ಕ್ಯಾಪ್ ಗೆದ್ದಿದ್ದರು. ವಿರಾಟ್ ಕೊಹ್ಲಿ 15 ಪಂದ್ಯಗಳಲ್ಲಿ 61.75 ಸರಾಸರಿಯಲ್ಲಿ 741 ರನ್ ಗಳಿಸಿದ್ದರು. ಇದರಲ್ಲಿ 1 ಶತಕ ಮತ್ತು 5 ಅರ್ಧಶತಕಗಳು ಸೇರಿವೆ. ಅವರ ಅತ್ಯುತ್ತಮ ಸ್ಕೋರ್ ಅಜೇಯ 113 ರನ್‌ಗಳು. ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ಐಪಿಎಲ್ 2025 ರಲ್ಲಿ ರನ್ ಹೊಳೆ ಹರಿಸಲು ಸಜ್ಜಾಗಿದ್ದಾರೆ.