ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗೆ ಕೇವಲ ಎರಡು ದಿನಗಳ ಮಾತ್ರ ಬಾಕಿ ಉಳಿದಿವೆ. ಫೆಬ್ರವರಿ 19 ರಂದು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಈ ಮೆಗಾ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಎಂಟು ತಂಡಗಳಲ್ಲಿ ಹೊಸ ಆಟಗಾರರು ಹೆಚ್ಚು ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಪಂದ್ಯದ ಗತಿಯನ್ನು ಬದಲಾಯಿಸಬಲ್ಲ ಆಟಗಾರರಲ್ಲಿ ಕನಿಷ್ಠ ಪಕ್ಷ ಯಾವುದೇ ಹೊಸ ಮುಖ ಹೊರಹೊಮ್ಮುವ ಸಾಧ್ಯತೆ ಬಹಳ ಕಡಿಮೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಮಿಂಚಲಿರುವ ಹಲವು ಸ್ಟಾರ್ ಆಟಗಾರರಿದ್ದಾರೆ. ಆದರೆ ಈ ಮೆಗಾ ಟೂರ್ನಿಯಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಸದ್ದು ಮಾಡಬಲ್ಲ ಟಾಪ್-5 ಸ್ಪೋಟಕ ಬ್ಯಾಟರ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.

ಶುಭಮನ್ ಗಿಲ್ : ಭಾರತ ತಂಡ ಯುವ ಸ್ಟಾರ್ ಬ್ಯಾಟರ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ವಿರಾಟ್ ಕೊಹ್ಲಿಯಿಂದ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಆಟಗಾರನಾಗಲು ಗಿಲ್ ಸೂಕ್ತವಾಗಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಗಿಲ್ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ಅವರು ಇನ್ನೂ ಗಿಲ್ ಅವರನ್ನು ಮಾರ್ಗದರ್ಶನ ಮಾಡುತ್ತಿದ್ದಾರೆ. ಈ ಎಲ್ಲಾ ಅನುಭವದೊಂದಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಗಿಲ್ ಅಬ್ಬರಿಸಲಿದ್ದಾರೆ.
ಟ್ರಾವಿಸ್ ಹೆಡ್: ಕಳೆದ ಕೆಲವು ವರ್ಷಗಳಿಂದ ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟರ್ ಟ್ರಾವಿಸ್ ಹೆಡ್ ವಿಶ್ವ ಕ್ರಿಕೆಟ್‌ನಲ್ಲಿ ಅಬ್ಬರಿಸುತ್ತಿದ್ದಾರೆ. ಇತ್ತೀಚಿನ ನಾಕೌಟ್ ಪಂದ್ಯಗಳಲ್ಲಿ ಅವರು ಭಾರತ ತಂಡದ ಕನಸಿಗೆ ಅಡ್ಡಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಪಾಕಿಸ್ತಾನದ ಬ್ಯಾಟಿಂಗ್ ಸ್ನೇಹಿ ಪಿಚ್‌ಗಳಲ್ಲಿ ಹೆಡ್ ಮತ್ತೊಮ್ಮೆ ಉಗ್ರ ರೂಪ ತಾಳಲಿದ್ದಾರೆ.
ಸಲ್ಮಾನ್ ಅಲಿ ಅಘಾ: ಇತ್ತೀಚೆಗೆ ಪಾಕಿಸ್ತಾನ ತಂಡಕ್ಕೆ ಸಲ್ಮಾನ್ ಅಲಿ ಅಘಾ ಉತ್ತಮ ರನ್ ಗಳಿಸುತ್ತಿದ್ದಾರೆ. ಅವರ ಬ್ಯಾಟಿಂಗ್ ನೋಡಿದವರು ಚಾಂಪಿಯನ್ಸ್ ಟ್ರೋಫಿಯಲ್ಲಿ ಮಿಂಚು ಹರಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ನ್ಯೂಜಿಲೆಂಡ ಮತ್ತು ದಕ್ಷಿಣ ಆಫ್ರಿಕಾ ತ್ರಿಕೋನ ಸರಣಿಯಲ್ಲಿ ಸಲ್ಮಾನ್ ಸ್ಥಿರ ಪ್ರದರ್ಶನ ನೀಡಿದ್ದಾತರೆ. ಹೀಗಾಗಿ ತವರಿನಲ್ಲಿ ಸಲ್ಮಾನ್ ಬಿಗ್ ಸ್ಕೋರ್ ಇನ್ನಿಂಗ್ಸ್ ಆಡಲಿದ್ದಾರೆ.
ಡ್ವೇನ್ ಕಾನ್ವೆ: ನ್ಯೂಜಿಲೆಂಡ್ ತಂಡದ ಸ್ಟಾರ್ ಬ್ಯಾಟರ್ ಡ್ವೇನ್ ಕಾನ್ವೆ ಅವರ ಏಕದಿನ ವೃತ್ತಿಜೀವನವು ಚಿಕ್ಕದಾಗಿದ್ದು, ಅವರು ಕೇವಲ 33 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಆದರೆ ಇಷ್ಟು ಕಡಿಮೆ ಸಮಯದಲ್ಲಿ ಅವರು ತಮ್ಮ ಸಾಮರ್ಥ್ಯದಿಂದ ಪಂದ್ಯವನ್ನು ತಿರುಗಿಸಬಹುದು ಎಂದು ತೋರಿಸಿದ್ದಾರೆ. ಅವರು ಸ್ಪಿನ್ನರ್‌ಗಳ ವಿರುದ್ಧ ಅದ್ಭತವಾಗಿ ಬ್ಯಾಟರ್ ಬೀಸಿದ್ದಾರೆ. ಪಿಚ್‌ಗಳ ಪರಿಸ್ಥಿತಿಗೆ ತಕ್ಕಂತೆ ಕಾನ್ವೆ ರನ್ ಗಳಿಸುವಲ್ಲಿ ಮುಂದಿದ್ದಾರೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿಯಲ್ಲಿಯೂ ಅವರಿಂದ ಬಿಗ್ ಇನ್ನಿಂಗ್ಸ್ ನಿರೀಕ್ಷಿಸಲಾಗುತ್ತಿದೆ.
ಹೆನ್ರಿಕ್ ಕ್ಲಾಸೆನ್: ದಕ್ಷಿಣ ಆಫ್ರಿಕಾದ ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ಹೆನ್ರಿಕ್ ಕ್ಲಾಸೆನ್ ಟಿ20 ಆಗಿರಲಿ ಅಥವಾ ಏಕದಿನ ಆಗಿರಲಿ, ಪಂದ್ಯದ ಗತಿಯನ್ನು ಬದಲಾಯಿಸಬಲ್ಲ ಆಟಗಾರ. ಹೆನ್ರಿಕ್ ಕ್ಲಾಸೆನ್ ಚೆಂಡನ್ನು ಬೌಂಡರಿಯ ಆಚೆ ಕಳುಹಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದಿಲ್ ರಶೀದ್ ಮತ್ತು ಆಡಮ್ ಜಂಪಾ ವಿರುದ್ಧ ಕ್ಲಾಸೆನ್ ಅವರ ಬ್ಯಾಟಿಂಗ್ ನೋಡಲೇಬೇಕಾದ ಸಂಗತಿ. ಇದನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ.