ಏಷ್ಯಾ ಕಪ್ ಟಿ20 ಪಂದ್ಯ ಇಂದಿನಿಂದ ಆರಂಭವಾಗಲಿದೆ. ಈ ಟೂರ್ನಿಗೆ ಯುಎಇ ಸಿದ್ಧವಾಗಿದೆ. ಮೂರನೇ ಆವೃತ್ತಿಯ ಏಷ್ಯಾ ಕಪ್ ಚಾಂಪಿಯನ್ ಯಾರು ಎಂಬ ಪ್ರಶ್ನೆಗೆ ಸೆ.28 ರಂದು ಉತ್ತರ ಸಿಗಲಿದೆ. ಈ ಟೂರ್ನಿಯಲ್ಲಿ ಈಗಾಗಲೇ ಹಲವು ಸ್ಟಾರ್ ಆಟಗಾರರು ಆಡಿ ಸೈ ಎನಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ಸಹ ಈ ಟೂರ್ನಿಯ ಚಾಂಪಿಯನ್ ಪಟ್ಟದ ಮೇಲೆ ಕಣ್ಣು ನೆಟ್ಟಿದ್ದಾರೆ. ಭಾರತ ಸೆ.10 ರಂದು ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ವೇಳೆ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಹೆಚ್ಚು ಬಾರಿ ತಂಡವನ್ನು ಮುನ್ನಡೆಸಿದ ಆಟಗಾರರು ಯಾರು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಇದಕ್ಕೆ ಉತ್ತರ ಇಲ್ಲಿದೆ.
ಏಷ್ಯಾ ಕಪ್ ಟಿ20 ಟೂರ್ನಿ ಈಗ ಮೂರನೇ ಆವೃತ್ತಿಗೆ ಕಾಲಿಡುತ್ತಿದೆ. ಈ ಹಿಂದೆ ಹಲವು ಸ್ಟಾರ್ ನಾಯಕರು ತಂಡವನ್ನು ಮುನ್ನಡೆಸಿದ್ದಾರೆ. ಆದರೆ ಅತಿ ಹೆಚ್ಚು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ಕೀರ್ತಿ ಯುಎಇ ತಂಡದ ಮಾಜಿ ಆಟಗಾರ ಅಮ್ಜದ್ ಜಾವೇದ್ ಅವರಿಗೆ ಸಲ್ಲುತ್ತದೆ. ಇವರು ಏಳು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಆದರೆ ಇವರು ಕೇವಲ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. ಆದರೆ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ನಾಯಕರಲ್ಲಿ ಇವರಿಗೆ ಅಗ್ರ ಸ್ಥಾನ.

ಪಾಕಿಸ್ತಾನ ತಂಡದ ಬಾಬರ್ ಅಜಮ್ ಸಹ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಇವರು 6 ಬಾರಿ ತಂಡವನ್ನು ಮುನ್ನಡೆಸಿದ್ದು, ಈ ವೇಳೆ ಪಾಕ್ 3 ಸೋಲು, 3 ಗೆಲುವು ಕಂಡಿದೆ. ಇವರಿಗೆ ಗೆಲುವಿನ ಶೇಕಡಾ ವಾರು 50 ಆಗಿದೆ. ಇನ್ನು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಶ್ರೀಲಂಕಾದ ಭರವಸೆಯ ಆಟಗಾರ ದಾಸುನ್ ಶನಕ ಹೆಸರು ಕಾಣಿಸಿಕೊಳ್ಳುತ್ತದೆ. ಇವರು ಸಹ ಚುಟುಕು ಏಷ್ಯಾ ಕಪ್‌ನಲ್ಲಿ 6 ಬಾರಿ ತಂಡವನ್ನು ಮುನ್ನಡೆಸಿದ್ದಾರೆ. ಅಲ್ಲದೆ 5 ಪಂದ್ಯಗಳಲ್ಲಿ ಜಯ ದಾಖಲಿಸಿದ್ದಾರೆ.
ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಈ ವೇಳೆ ಧೋನಿ 5 ಪಂದ್ಯದ ಮುಂದಾಳತ್ವ ವಹಿಸಿಕೊಂಡಿದ್ದಾರೆ. ವಿಶೇಷ ಎಂದರೆ ಧೋನಿ ಸಾರಥ್ಯದಲ್ಲಿ ಟೀಮ್ ಇಂಡಿಯಾ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಇವರ ಗೆಲುವಿನ ಶೇಕಡಾ ವಾರು ನೂರಕ್ಕೆ ನೂರು ಆಗಿದೆ. ಈ ದಾಖಲೆಯನ್ನು ಅಳಿಸುವುದು ಸದ್ಯ ಕಷ್ಟ. ಆದರೆ ಅಸಾಧ್ಯವೇನು ಅಲ್ಲ.

ಏಷ್ಯಾ ಕಪ್‌ನಲ್ಲಿ ಅತಿ ಹೆಚ್ಚು ಬಾರಿ ತಂಡವನ್ನು ಮುನ್ನಡೆಸಿದ ನಾಯಕರ ಪಟ್ಟಿಯಲ್ಲಿ ಬಾಂಗ್ಲಾದೇಶದ ಮಶ್ರಫೆ ಮೊರ್ತಾಜಾ ಅವರಿಗೂ ಸ್ಥಾನ. ಇವರು 5 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, 3 ರಲ್ಲಿ ಗೆಲುವಿನ ದಡ ದಾಟಿಸಿದ್ದಾರೆ.