ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಸದ್ಯ ಟೆಸ್ಟ್ ಸರಣಿ ನಡೆಯುತ್ತಿದೆ. ಈ ಸರಣಿ ಮುಗಿದ ಬಳಿಕ ಉಭಯ ದೇಶಗಳ ನಡುವಣ ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿ ಆರಂಭವಾಗುವುದಕ್ಕೂ ಮುನ್ನವೇ ಟೀಮ್ ಇಂಡಿಯಾಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಸ್ಟಾರ್ ಆಟಗಾರರು ಈ ಸರಣಿಯಿಂದ ಹೊರ ನಡೆದಿದ್ದು, ಆಯ್ಕೆದಾರರ ಚಿಂತೆ ದುಪ್ಪಟ್ಟು ಆಗಿದೆ. ಇನ್ನು ಎಲ್ಲರ ಕಣ್ಣುಗಳು ಕನ್ನಡಿಗ ಕೆಎಲ್ ರಾಹುಲ್ ಅವರ ಮೆಲೆ ನೆಟ್ಟಿವೆ.
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿ ನವೆಂಬರ್ 30 ರಿಂದ ಆರಂಭವಾಗಲಿದೆ. ಈ ಸರಣಿಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕ್ಯಾಚ್ ಹಿಡಿಯುವ ವೇಳೆ ಗಾಯಕ್ಕೆ ತುತ್ತಾಗಿದ್ದ ಶ್ರೇಯಸ್ ಅಯ್ಯರ್ ಹೊರಗುಳಿಯಲಿದ್ದಾರೆ. ಇವರು ಚೇತರಿಕೆಗೆ ಇನ್ನು ತಿಂಗಳುಗಳು ಬೇಕಾಗುತ್ತದೆ. ಈಗ ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್ ಸಹ ಏಕದಿನ ಸರಣಿಯಿಂದ ಹೊರ ನಡೆಯಲಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ಆತಿಥೇಯ ತಂಡದ ಪಾಳಯದಲ್ಲಿ ಚಿಂತೆ ಆರಂಭವಾಗಿದೆ.

ಶುಭಮನ್ ಗಿಲ್ ಕೋಲ್ಕತ್ತಾ ಟೆಸ್ಟ್ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಕುತ್ತಿಗೆಯ ಗಾಯಕ್ಕೆ ಒಳಗಾಗಿದ್ದರು. ಬಳಿಕ ಅವರನ್ನು ಮೈದಾನದಿಂದ ಹೊರಗಡೆ ಕರೆದುಕೊಂಡು ಹೋಗಲಾಯಿತು. ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಪರಿಣಾಮ ಇವರು ಎರಡನೇ ಟೆಸ್ಟ್‌ನಲ್ಲೂ ತಂಡದ ಭಾಗವಾಗಿರಲಿಲ್ಲ. ಈಗ ಇವರು ಏಕದಿನ ಸರಣಿಗೂ ಅಲಭ್ಯರಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಇವರು ಡಿಸೆಂಬರ್ 9 ರಿಂದ ಆರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ವೇಳೆಗೆ ಚೇತರಿಸಿಕೊಂಡು ತಂಡ ಸೇರಲಿದ್ದಾರೆ.
ದುರದೃಷ್ಟವಶಾತ್ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಗಿಲ್ ಅಲಭ್ಯರಾಗಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಆಯ್ಕೆ ಸಮಿತಿ ಶೀಘ್ರದಲ್ಲಿ ಸಭೆ ಸೇರಲಿದ್ದು, ತಂಡವನ್ನು ಪ್ರಕಟಿಸಲಿದೆ. ಈ ವೇಳೆ ನಾಯಕನ ಸ್ಥಾನಕ್ಕಾಗಿ ಕೆಎಲ್ ರಾಹುಲ್, ಅಕ್ಷರ್ ಪಟೇಲ್, ರಿಷಭ್ ಪಂತ್ ಅವರನ್ನು ಪರಿಗಣಿಸಬಹುದು.
ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ರಿಷಭ್ ಪಂತ್ ಪಂತ್ ಅವರು ಮುನ್ನಡೆಸಿದ್ದರು. ಈ ಮೂಲಕ ಟೀಮ್ ಇಂಡಿಯಾ ಮುನ್ನಡೆಸಿದ ಎರಡನೇ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಭಾರತ ತಂಡವನ್ನು ಏಕದಿನ ಸರಣಿಯಲ್ಲೂ ಮುನ್ನಡೆಸಬಹುದು. ಈ ವೇಳೆ ಕನ್ನಡಿಗ ಕೆಎಲ್ ರಾಹುಲ್ ಅವರ ಅನುಭವವನ್ನು ಸಹ ಆಯ್ಕೆ ಸಮಿತಿ ಪರಿಗಣಿಸುವ ಸಾಧ್ಯತೆ ಇದೆ.

ಶುಭಮನ್ ಗಿಲ್ ಅನುಪಸ್ಥಿತಿಯ ಲಾಭ ಪಡೆಯಲು ಯಶಸ್ವಿ ಜೈಸ್ವಾಲ್ ತಯಾರಾಗಿದ್ದಾರೆ. ಇವರು ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಬಹುದು. ಇನ್ನು ಶ್ರೇಯಸ್ ಅಯ್ಯರ್ ಬದಲಿಗೆ ನಾಲ್ಕನೇ ಕ್ರಮಾಂಕದಲ್ಲಿ ರಿಷಭ್ ಪಂತ್, ತಿಲಕ್ ವರ್ಮಾ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.