U-19 World Cup 2024: ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಸತತ 5ನೇ ಬಾರಿ ಫೈನಲ್ ತಲುಪಿದ ಭಾರತ
ಮಂಗಳವಾರ, ಜನವರಿ 6ರಂದು ಬೆನೋನಿಯಲ್ಲಿ ನಡೆದ 2024ರ ಅಂಡರ್-19 ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 2 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದ ಭಾರತ ತಂಡ ಸತತ 5ನೇ ಬಾರಿ ಫೈನಲ್ ತಲುಪಿದ್ದು, ಚಾಂಪಿಯನ್ ಪಟ್ಟಕ್ಕೆ ಕೇವಲ ಒಂದೇ ಹೆಜ್ಜೆ ಬಾಕಿ ಇದೆ.
ಭಾರತ ತಂಡದ ಗೆಲುವಿಗೆ ಸಚಿನ್ ಧಾಸ್ ಅವರ 96 ರನ್ ಮತ್ತು ನಾಯಕ ಉದಯ್ ಸಹಾರನ್ ಅವರ 81 ರನ್‌ಗಳ ಪ್ರದರ್ಶನವು 2024ರ ಅಂಡರ್-19 ವಿಶ್ವಕಪ್ ಫೈನಲ್ ತಲುಪಲು ಸಹಾಯ ಮಾಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಲುವಾನ್-ಡ್ರೆ ಪ್ರಿಟೋರಿಯಸ್ ಮತ್ತು ರಿಚರ್ಡ್ ಸೆಲೆಟ್ಸ್ವೇನ್ ಅವರ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 244 ರನ್‌ಗಳನ್ನು ಕಲೆಹಾಕಿತು.
245 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಭಾರತ ತಂಡ ಸಚಿನ್ ಧಾಸ್ ಮತ್ತು ಉದಯ್ ಸಹಾರನ್ ಅಮೋಘ ಬ್ಯಾಟಿಂಗ್ ಸಹಾಸದಿಂದ 48.5 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 248 ರನ್ ಗಳಿಸಿ 2 ವಿಕೆಟ್‌ಗಳ ಅಂತರದಿಂದ ಗೆಲುವಿನ ದಡ ಸೇರಿತು.
245 ರನ್‌ಗಳ ಚೇಸಿಂಗ್ ಆರಂಭಿಸಿದ ಭಾರತ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಆರಂಭಿಕ ಬ್ಯಾಟರ್ ಆದರ್ಶ್ ಸಿಂಗ್ ಡಕ್ ಔಟ್ ಆದರು. ನಂತರ ಬಂದ ಮುಶೀರ್ ಖಾನ್ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಈ ವೇಳೆ 12 ರನ್ ಗಳಿಸಿ ಆಡುತ್ತಿದ್ದ ಮತ್ತೊಬ್ಬ ಆರಂಭಿಕ ಬ್ಯಾಟರ್ ಅರ್ಶಿನ್ ಕುಲಕರ್ಣಿ ಕೂಡ ವಿಕೆಟ್ ನೀಡಿ ಹೊರನಡೆದರು. ಬಳಿಕ ಕ್ರೀಸ್‌ಗೆ ಬಂದ ಪ್ರಿಯಾಂಶು ಮೊಲಿಯಾ ಕೇವಲ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ವೇಳೆ ಭಾರತ ತಂಡ 11.2 ಓವರ್‌ಗಳಲ್ಲಿ 32 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿತ್ತು.
ಆಗ ಜೊತೆಯಾದ ಸಚಿನ್ ಧಾಸ್ ಮತ್ತು ಉದಯ್ ಸಹರಾನ್ ಐದನೇ ವಿಕೆಟ್‌ಗೆ 171 ರನ್‌ಗಳ ನಿರ್ಣಾಯಕ ಜೊತೆಯಾಟ ನಿರ್ಮಿಸಿದರು ಮತ್ತು ಸೋಲುತ್ತಿದ್ದ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದರು. ಈ ವೇಳೆ 95 ಎಸೆತಗಳಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 96 ರನ್ ಗಳಿಸಿದ್ದ ಸಚಿನ್ ಧಾಸ್ ಔಟಾದರು ಮತ್ತು ಕೇವಲ 4 ರನ್‌ಗಳಿಂದ ಶತಕ ವಂಚಿತರಾದರು.
ಇನ್ನು ತಂಡವನ್ನು ಗೆಲ್ಲಿಸುವ ಹೊಣೆಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡ ನಾಯಕ ಉದಯ್ ಸಹರಾನ್ 124 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 81 ರನ್ ಗಳಿಸಿ ಕೊನೆಯಲ್ಲಿ ರನೌಟ್ ಆದರು. ಅಷ್ಟೊತ್ತಿಗಾಗಲೇ ಭಾರತ ತಂಡ ಗೆಲುವಿನ ಸಮೀಪ ಬಂದಿತ್ತು. ಕೊನೆಯಲ್ಲಿ ರಾಜ್ ಲಿಂಬಾನಿ ಅಜೇಯ 13 ರನ್ ಗಳಿಸಿದರು.
ದಕ್ಷಿಣ ಆಫ್ರಿಕಾ ತಂಡದ ಪರ ಬೌಲಿಂಗ್‌ನಲ್ಲಿ ಕ್ವೆನಾ ಮಫಕಾ ಮತ್ತು ಟ್ರಿಸ್ಟಾನ್ ಲುಸ್ ತಲಾ ಮೂರು ವಿಕೆಟ್ ಪಡೆದರೆ, ಉಳಿದ ಬೌಲರ್‌ಗಳು ವಿಕೆಟ್ ರಹಿತರಾದರು.

ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಲುವಾನ್-ಡ್ರೆ ಪ್ರಿಟೋರಿಯಸ್ 76 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿದರೆ, ಸ್ಟೀವ್ ಸ್ಟೋಕ್ 14 ರನ್, ಡೇವಿಡ್ ಟೀಗರ್ ಸೊನ್ನೆ ಸುತ್ತಿದರು.
ನಂತರ ರಿಚರ್ಡ್ ಸೆಲೆಟ್ಸ್ವಾನೆ 64 ರನ್, ಆಲಿವರ್ ವೈಟ್ಹೆಡ್ 22 ರನ್, ನಾಯಕ ಜುವಾನ್ ಜೇಮ್ಸ್ 22 ರನ್ ಮತ್ತು ಕೊನೆಯಲ್ಲಿ ಟ್ರಿಸ್ಟಾನ್ ಲೂಸ್ 23 ರನ್ ಗಳಿಸಿ ತಂಡದ ಮೊತ್ತವನ್ನು 240ರ ಗಡಿ ದಾಟಿಸಿದರು.
ಬೌಲಿಂಗ್‌ನಲ್ಲಿ ಭಾರತ ತಂಡದ ಪರ ರಾಜ್ ಲಿಂಬಾನಿ ಮೂರು ವಿಕೆಟ್ ಕಬಳಿಸಿದರೆ, ಮುಶೀರ್ ಖಾನ್ ಕೂಡ ಎರಡು ವಿಕೆಟ್ ಪಡೆದು ಮಿಂಚಿದರು.ನಾಯಕ ಉದಯ್ ಸಹರಾನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಮತ್ತೊಂದು ಸೆಮಿಫೈನಲ್‌ನಲ್ಲಿ ಗೆಲ್ಲುವ ತಂಡವು, ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಎದುರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications