U19 ವಿಶ್ವಕಪ್ ಫೈನಲ್: ದಾರಿತಪ್ಪಿದ ಟೀಂ ಇಂಡಿಯಾ ಹುಡುಗರನ್ನು ಸರಿದಾರಿಗೆ ತನ್ನಿ

ಅಂಡರ್ 19 ವಿಶ್ವಕಪ್ ಫೈನಲ್ ನಲ್ಲಿ ಭಾರತ ಮತ್ತು ಬಾಂಗ್ಲಾ ದೇಶದ ಯುವ ಆಟಗಾರರು ಮೈದಾನದಲ್ಲಿ ವರ್ತಿಸಿದ ರೀತಿ ವ್ಯಾಪಕ ಟೀಕೆಗೊಳಗಾಗಿದೆ. ಎಲ್ಲಾ ಪ್ರಮುಖ ಕ್ರಿಕೆಟಿಗರು, ಮೈದಾನದಲ್ಲಿ ಆಟಗಾರರು ನಡೆದುಕೊಂಡ ರೀತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಬಾಂಗ್ಲಾ ದೇಶ ಇದೇ ಮೊದಲ ಬಾರಿಗೆ ಅಂಡರ್ 19 ವಿಶ್ವಕಪ್ ಫೈನಲ್ ಪ್ರವೇಶಿಸಿತ್ತು. ಡಿಎಲ್ಎಸ್ ನಿಯಮದ ಪ್ರಕಾರ, ಭಾರತವನ್ನು ಮೂರು ವಿಕೆಟ್ ಗಳಿಂದ ಸೋಲಿಸಿದ ಬಾಂಗ್ಲಾ, ಕಪ್ ಅನ್ನು ತನ್ನದಾಗಿಸಿಕೊಂಡಿತ್ತು.
ಪಂದ್ಯ ನಡೆಯುತ್ತಿದ್ದ ವೇಳೆ ಮತ್ತು ಪಂದ್ಯದ ನಂತರ ಕೂಡಾ, ಎರಡೂ ತಂಡಗಳ ಆಟಗಾರರು ವೈಯಕ್ತಿಕ ಟೀಕೆಗೆ ಮುಂದಾಗಿದ್ದರು. ಇದಕ್ಕೆ ಭಾರತ ಮತ್ತು ಬಾಂಗ್ಲಾದ ಅಂಡರ್ 19 ತಂಡದ ನಾಯಕರು ಕೂಡಾ ಕ್ಷಮೆಯಾಚಿಸಿದ್ದರು.
ಈ ಘಟನೆಯ ಬಗ್ಗೆ ಟೀಂ ಇಂಡಿಯಾದ ಇಬ್ಬರು ಮಾಜಿ ನಾಯಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ತಪ್ಪು ದಾರಿ ಹಿಡಿದಿರುವ ಹುಡುಗರನ್ನು ಸರಿದಾರಿಗೆ ತನ್ನಿ ಎಂದು ಬಿಸಿಸಿಐಗೆ ಆಗ್ರಹಿಸಿದ್ದಾರೆ.

ಬಾಂಗ್ಲಾ ನಾಯಕ ಅಕ್ಬರ್ ಆಲಿ ಕ್ಷಮೆ
ಭಾರತ ಬ್ಯಾಟ್ ಮಾಡುತ್ತಿದ್ದ ವೇಳೆ, ಬಾಂಗ್ಲಾ ಬೌಲರ್ ಗಳು ಬ್ಯಾಟ್ಸ್ ಮ್ಯಾನ್ ಗಳನ್ನು ನಿಂದಿಸುತ್ತಿದ್ದರು. ಇದಕ್ಕೆ ಪ್ರತಿಯಾಗಿ, ಭಾರತದ ಆಟಗಾರರೂ ಅದನ್ನೇ ಮಾಡಿದ್ದರು. ಪಂದ್ಯದ ಮುಕ್ತಾಯದ ಬಳಿಕ ಇತ್ತಂಡಗಳ ನಡುವಿನ ಆಕ್ರೋಶ ಸ್ಪೋಟಗೊಂಡಿತ್ತು. ಇದಕ್ಕೆ ಬಾಂಗ್ಲಾ ನಾಯಕ ಅಕ್ಬರ್ ಆಲಿ ಕ್ಷಮೆ ಕೋರಿದ್ದರು.

ಐಸಿಸಿಗೆ ದೂರು ನೀಡಿ, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮನವಿ
ಎರಡು ತಂಡಗಳ ವರ್ತನೆಯ ಬಗ್ಗೆ ಕ್ರಿಕೆಟ್ ಆಟಗಾರರು ಮತ್ತು ಅಭಿಮಾನಿಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಭಾರತ ತಂಡದ ಆಡಳಿತ ಮಂಡಳಿ, ಬಾಂಗ್ಲಾ ಆಟಗಾರರ ವರ್ತನೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿ, ದಾಖಲೆ ಸಮೇತ ಐಸಿಸಿಗೆ ದೂರು ನೀಡಿ, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿತ್ತು.

ಭಾರತದ ಮಾಜಿ ಕ್ಯಾಪ್ಟನ್ ಕಪಿಲ್ ದೇವ್
ಈ ಬಗ್ಗೆ ಭಾರತದ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. "ನಮ್ಮ ಹುಡುಗರನ್ನು ಸರಿದಾರಿಗೆ ತರುವುದು ನಮ್ಮ ಕೆಲಸ. ಬಿಸಿಸಿಐ ಸೂಕ್ತ ಕ್ರಮ ತೆಗೆದುಕೊಳ್ಳಲಿ, ಇದು ಎಲ್ಲರಿಗೂ ಪಾಠವಾಗಲಿ. ಕ್ರಿಕೆಟ್ ಅನ್ನುವುದು ವಿರೋಧಿ ಬಣವನ್ನು ಟೀಕಿಸುವುದಕ್ಕೆ ಇರುವುದಲ್ಲ. ಫೈನಲ್ ನಲ್ಲಿ ನಡೆದ ಘಟನೆಯನ್ನು ಆಧರಿಸಿ, ಸೂಕ್ತ ನಿರ್ಧಾರವನ್ನು ಬೋರ್ಡ್ ತೆಗೆದುಕೊಳ್ಳಬೇಕು" ಎಂದು ಕಪಿಲ್ ದೇವ್ ಹೇಳಿದ್ದಾರೆ.

ಇನ್ನೋರ್ವ ಮಾಜಿ ನಾಯಕ ಅಜರುದ್ದೀನ್
ಇನ್ನೋರ್ವ ಮಾಜಿ ನಾಯಕ ಅಜರುದ್ದೀನ್ ಕೂಡಾ ಘಟನೆಯ ಬಗ್ಗೆ ಕಿಡಿಕಾರಿದ್ದಾರೆ. "ಹುಡುಗರು ಯಾಕೆ ಈ ರೀತಿ ವರ್ತಿಸಿದರು. ಆಸ್ಟ್ರೇಲಿಯಾ ಕೂಡಾ ಪಂದ್ಯದಲ್ಲಿ ವಿರೋಧಿಗಳನ್ನು ಟೀಕಿಸುವ ಕೆಲಸವನ್ನು ಮಾಡುತ್ತದೆ. ಆದರೆ, ಅವರು ವೈಯಕ್ತಿಕ ಮಟ್ಟಕ್ಕೆ ಎಂದೂ ಇಳಿದಿಲ್ಲ. ಕ್ರಿಕೆಟ್ ನಲ್ಲಿ ಆಕ್ರಮಣಶೀಲತೆ ಇರಬೇಕು. ಆದರೆ, ಅದು ಇತಿಮಿತಿಯಲ್ಲಿ ಸಾಗಬೇಕು" ಎಂದು ಅಜರ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications