ಆಗಸ್ಟ್ 14 ಬುಧವಾರ, ಮುಂಬರುವ ಬಾಂಗ್ಲಾದೇಶ ವಿರುದ್ಧದ ತವರಿನ ಟೆಸ್ಟ್ ಸರಣಿ ಗೆಲುವಿನ ಮೇಲೆ ಭಾರತ ತಂಡ ಕಣ್ಣಿಟ್ಟಿದೆ. ಶತಾಯಗತಾಯ ಈ ಸರಣಿ ಗೆಲ್ಲುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳಲು ಟೀಮ್ ಇಂಡಿಯಾ ಎದುರು ನೋಡುತ್ತಿದೆ.
ಸದ್ಯ ಶ್ರೀಲಂಕಾ ಪ್ರವಾಸ ಬಳಿಕ ಟೀಮ್ ಇಂಡಿಯಾ ವಿಶ್ರಾಂತಿ ಪಡೆಯುತ್ತಿದೆ. ಈ ಅವಧಿಯಲ್ಲಿ ಭಾರತದ ಆಟಗಾರರು ದೇಶೀಯ ಟೂರ್ನಿಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆಲವು ಆಟಗಾರರು ಬುಚ್ಚಿಬಾಬು ಟೂರ್ನಮೆಂಟ್‌ನಲ್ಲಿ ಮತ್ತು ಕೆಲವು ಆಟಗಾರರು ದುಲೀಪ್ ಟ್ರೋಫಿಯಲ್ಲಿ ಆಡಲಿದ್ದಾರೆ.

ಇದರೊಂದಿಗೆ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ತಂಡದಲ್ಲಿ ಹಲವು ಆಟಗಾರರು ಸ್ಥಾನ ಪಡೆಯುವ ಅವಕಾಶ ಪಡೆದಿದ್ದಾರೆ. ಬ್ಯಾಟರ್‌ಗಳಿಂದ ಬೌಲರ್‌ವರೆಗೆ ಟೀಮ್ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಬುಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಈ ರೇಸ್‌ನಲ್ಲಿ ತಮ್ಮ ವೇಗದ ಬೌಲಿಂಗ್‌ನಿಂದ ಐಪಿಎಲ್ 2022ರ ಆವೃತ್ತಿಯಲ್ಲಿ ಸಂಚಲನ ಮೂಡಿಸಿದ್ದ ಉಮ್ರಾನ್ ಮಲಿಕ್ ಮುಂಚೂಣಿಯಲ್ಲಿದ್ದಾರೆ. ಟೀಮ್ ಇಂಡಿಯಾದ ಸ್ಟಾರ್ ಬೌಲರ್‌ಗಳಾದ ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ ವೇಗವನ್ನೇ ಉಮ್ರಾನ್ ಮಲಿಕ್ ಹಿಂದಿಕ್ಕಿ ದಾಖಲೆ ಬರೆದಿದ್ದಾರೆ.
ಆದರೆ ಉಮ್ರಾನ್ ಮಲಿಕ್ ಬುಚಿ ಬಾಬು ಟೂರ್ನಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಪರ ಆಡುತ್ತಿಲ್ಲ. ಡೆಂಗ್ಯೂ ಜ್ವರದಿಂದಾಗಿ ಅವರು ಈ ಟೂರ್ನಿಯಿಂದ ಹೊರಗುಳಿದಿದ್ದಾರೆ. ಉಮ್ರಾನ್ ಕಳೆದ ವರ್ಷ ಐಪಿಎಲ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಒಂದೇ ಒಂದು ಪಂದ್ಯವನ್ನು ಆಡಿದ್ದರು. ಹಿಂದಿನ ಋತುವಿನಲ್ಲಿ ಅವರು ಕೇವಲ ಎಂಟು ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದರು.
ಇದಲ್ಲದೆ ರಣಜಿ ಟೂರ್ನಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಪರ ಆಡುವಾಗ ಕೆಟ್ಟ ಹವಾಮಾನದ ಕಾರಣ ಮಲಿಕ್ ಇಡೀ ಋತುವಿನಲ್ಲಿ ಕೇವಲ 47 ಓವರ್‌ಗಳನ್ನು ಮಾತ್ರ ಬೌಲ್ ಮಾಡಿದರು. ಇದು ಅವರ ಸಿದ್ಧತೆಗಳ ಮೇಲೆ ಆಳವಾದ ಪ್ರಭಾವ ಬೀರಿತು. ಈಗ ಇದೆಲ್ಲವನ್ನೂ ಮೀರಿ ಇದೀಗ ಭಾರತ ತಂಡಕ್ಕೆ ಕಮ್ ಬ್ಯಾಕ್ ಮಾಡಲು ರೆಡಿಯಾಗಿದ್ದಾರೆ.
ಮುಂಬರುವ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿಯಲ್ಲಿ ಮಲಿಕ್ ಆಡುವ ಸಾಧ್ಯತೆಗಳಿದ್ದು, ಬಿಸಿಸಿಐ ಆಯ್ಕೆಗಾರರ ನಿರ್ಧಾರದ ಮೇಲೆ ಎಲ್ಲವೂ ನಿಂತಿದೆ. ಟೆಸ್ಟ್ ಸರಣಿ ಹೊತ್ತಿಗೆ ಮಲಿಕ್ ಸಂಪೂರ್ಣ ಫಿಟ್ ಆಗಿದ್ದರೆ ಅದೃಷ್ಟದ ಬಾಗಿಲು ತೆರೆಯುವ ಅವಕಾಶಗಳು ಹೆಚ್ಚಿವೆ.
" ಇತ್ತೀಚಿನ ದಿನಗಳಲ್ಲಿ ನಾನು ಹೊಸ ಚೆಂಡಿನೊಂದಿಗೆ ಸಾಕಷ್ಟು ಬೌಲಿಂಗ್ ಮಾಡುತ್ತಿದ್ದೇನೆ. ಏಕೆಂದರೆ ಸ್ವಿಂಗ್ ನನ್ನ ವೇಗದಲ್ಲಿ ದೊಡ್ಡ ಬದಲಾವಣೆಯನ್ನು ಮಾಡುತ್ತದೆ. ಇದರಲ್ಲಿ ನನಗೆ ವಿಶ್ವಾಸವಿದೆ. ಬೌಲಿಂಗ್‌ನಲ್ಲಿ ಕೆಲವು ವಿಷಯಗಳನ್ನು ಕಲಿಯಲು ಬಯಸುತ್ತೇನೆ.
ವಿಶೇಷವಾಗಿ ಬೌಲಿಂಗ್ ಮಾಡುವಾಗ ಚೆಂಡನ್ನು ಹೇಗೆ ಯೋಜಿಸುವುದು ಮತ್ತು ಕಾರ್ಯಗತಗೊಳಿಸುವುದು ಎಂದು ತಿಳಿಯಬೇಕಾಗುತ್ತದೆ. ನೀವು ಇದರ ಬಗ್ಗೆ ತಿಳಿದಿದ್ದರೆ, ಸವಾಲುಗಳನ್ನು ಎದುರಿಸಲು ಸಿದ್ಧರಾಗಿರುತ್ತೀರಿ" ಎಂದಿದ್ದಾರೆ.
ಉಮ್ರಾನ್ ಮಲಿಕ್ ರನ್-ಅಪ್ ಅನ್ನು ಪಾಕಿಸ್ತಾನದ ಮಾಜಿ ನಾಯಕ ವಕಾರ್ ಯೂನಿಸ್‌ಗೆ ಹೋಲಿಸಲಾಗುತ್ತದೆ. ಅವರು ಗಂಟೆಗೆ 150 ಕಿಮೀ ಅಥವಾ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ನಿರಂತರವಾಗಿ ಬೌಲ್ ಮಾಡುವ ಮೂಲಕ ಟೀಮ್ ಇಂಡಿಯಾ ಪರ ಕೂಡ ಕೆಲವು ಪಂದ್ಯಗಳನ್ನು ಆಡುವ ಅವಕಾಶವನ್ನು ಪಡೆದಿದ್ದಾರೆ.