ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಗೂ ಮೊದಲು ಬಿಸಿಸಿಐ ದುಲೀಪ್ ಟ್ರೋಫಿ ಟೂನಿಯನ್ನು ಆಯೋಜಿಸಲಾಗಿದೆ. ಈ ಟೂರ್ನಿಗಾಗಿ ನಾಲ್ಕು ತಂಡಗಳನ್ನು ಪ್ರಕಟಿಸಲಾಗಿದೆ.
ದುಲೀಪ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಅನೇಕ ಆಟಗಾರರು ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಕೆಲವು ಆಟಗಾರರು ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಭರ್ಜರಿ ತಯಾರಿ ನಡೆಸಿದ್ದಾರೆ. ಅವರಲ್ಲಿ ಉಮ್ರಾನ್ ಮಲಿಕ್ ಕೂಡ ಒಬ್ಬರು.

ಭಾರತದ ಅತಿ ವೇಗದ ಬೌಲರ್ ಉಮ್ರಾನ್ ಮಲಿಕ್ ದೀರ್ಘಕಾಲದಿಂದ ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಹಲವು ಪ್ರಮುಖ ಸರಣಿಗಳಲ್ಲಿ ಟೀಮ್ ಇಂಡಿಯಾದಿಂದ ಹೊರಗುಳಿದ್ದಾರೆ.
ಸೆಪ್ಟೆಂಬರ್ 5 ರಿಂದ ಅನಂತಪುರ (ಆಂಧ್ರ ಪ್ರದೇಶ) ಮತ್ತು ಎಂ ಚಿನ್ನಸ್ವಾಮಿ ಕ್ರೀಡಾಂಗಣ (ಬೆಂಗಳೂರು)ನಲ್ಲಿ ದುಲೀಪ್ ಟ್ರೋಫಿ ಪ್ರಾರಂಭವಾಗಲಿದೆ. ಸೂರ್ಯಕುಮಾರ್ ಯಾದವ್, ಋತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ರಜತ್ ಪಾಟಿದಾರ್ ಮತ್ತು ಇತರರೊಂದಿಗೆ ಉಮ್ರಾನ್ ಮಲಿಕ್ ಅವರನ್ನು ಸಿ ತಂಡದಲ್ಲಿ ಇರಿಸಲಾಗಿದೆ.
ಡೆಂಗ್ಯೂನಿಂದ ಚೇತರಿಸಿಕೊಂಡಿರುವ ಉಮ್ರಾನ್ ಮಲಿಕ್ ದುಲೀಪ್ ಟ್ರೋಫಿಯಲ್ಲಿ ಮಿಂಚಲು ಸಿದ್ದರಾಗಿದ್ದಾರೆ. ಇತ್ತೀಚೆಗೆ, ಅವರು ದೇಶೀಯ ಪಂದ್ಯಾವಳಿಗೆ ತಮ್ಮ ಸಿದ್ಧತೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಪಂದ್ಯಾವಳಿಯಲ್ಲಿ ತಮ್ಮ ತಂಡಕ್ಕೆ ಉತ್ತಮ ಪ್ರದರ್ಶನ ನೀಡುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
"ಈಗ ನಾನು ಎನ್‌ಸಿಎಯಲ್ಲಿ ದುಲೀಪ್ ಟ್ರೋಫಿಗಾಗಿ ನನ್ನ ತಯಾರಿಯಲ್ಲಿ ಸಂಪೂರ್ಣವಾಗಿ ಗಮನಹರಿಸುತ್ತಿದ್ದೇನೆ. ಈ ಋತುವಿನಲ್ಲಿ ನಾನು ನನ್ನ ತಂಡಕ್ಕೆ ಉತ್ತಮ ಪ್ರದರ್ಶನ ನೀಡುತ್ತೇನೆ ಎಂಬ ಭರವಸೆಯಿದೆ" ಎಂದು ಹೇಳಿದ್ದಾರೆ.
2023-24ರ ರಣಜಿ ಟ್ರೋಫಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಪರ ಉಮ್ರಾನ್ ಮಲಿಕ್ ಐದು ಪಂದ್ಯಗಳಲ್ಲಿ ಕೇವಲ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದರು. ಈ ಮೂಲಕ ತಮ್ಮ ತಂಡಕ್ಕೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಈ ಟೂರ್ನಿ ಬಳಿಕ ಸೈಯದ್ ಮುಷ್ತಾಕ್ ಅಲಿ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲೂ ಅವರು ಪ್ರದರ್ಶನ ಉತ್ತಮವಾಗಿರಲಿಲ್ಲ.
ಈಗ ಉಮ್ರಾನ್ ಮಲಿಕ್ ಅವರು ದುಲೀಪ್ ಟ್ರೋಫಿಯಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಗಮನ ಸೆಳೆಯುವಂತ ಪ್ರದರ್ಶನ ನೀಡಬೇಕಾಗಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ 2 ಟೆಸ್ಟ್ ಪಂದ್ಯಗಳ ಸರಣಿಯು ಸೆಪ್ಟೆಂಬರ್ 19 ರಂದು ಪ್ರಾರಂಭವಾಗಲಿದೆ.
ಈ ಸರಣಿಯಲ್ಲಿ ಭಾರತದ ಇಬ್ಬರು ಪ್ರಮುಖ ವೇಗದ ಬೌಲರ್‌ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಆಡುವುದು ಅನುಮಾನವಾಗಿದೆ. ಈ ಇಬ್ಬರು ವೇಗಿಗಳ ಸ್ಥಾನಕ್ಕೆ ಮಲಿಕ್ ಸೂಕ್ತವಾಗಿದ್ದು, ದುಲೀಪ್ ಟ್ರೋಫಿಯಲ್ಲಿನ ಅವರ ಪ್ರದರ್ಶನದ ಮೇಲೆ ಎಲ್ಲವೂ ನಿರ್ಧಾರವಾಗಲಿದೆ.
ಬುಮ್ರಾ ಇನ್ನಷ್ಟು ಸಮಯ ವಿಶ್ರಾಂತಿ ತೆಗೆದುಕೊಳ್ಳಬಹುದು. ಮತ್ತೊಂದೆಡೆ, ಶಮಿ ಇನ್ನೂ ಸಂಪೂರ್ಣ ಫಿಟ್ ಆಗಿಲ್ಲ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಅವರು ತರಬೇತಿ ಪಡೆಯುತ್ತಿದ್ದು, ಬಾಂಗ್ಲಾದೇಶ ವಿರುದ್ಧದ ಸರಣಿಯಿಂದ ಹೊರಗುಳಿಯಬಹುದು.