ಟೀಮ್ ಇಂಡಿಯಾದ ಈ ನಿರ್ಧಾರವನ್ನು ನಂಬಲು ಅಸಾಧ್ಯ: ಅಚ್ಚರಿ ವ್ಯಕ್ತಪಡಿಸಿದ ಸುನಿಲ್ ಗವಾಸ್ಕರ್

ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿದಿದ್ದು ಮೊದಲಿಗೆ ಬೌಲಿಂಗ್ ನಡೆಸುವ ಸವಾಲು ಸ್ವೀಕರಿಸಿದೆ. ಆದರೆ ಈ ಪಂದ್ಯದ ಆಡುವ ಬಳಗದಲ್ಲಿ ಮಾಡಿಕೊಂಡಿರುವ ಒಂದು ಬದಲಾವಣೆಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಭಾರೀ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮೊದಲ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಮಿಂಚಿದ್ದ ಕುಲ್ದೀಪ್ ಯಾದವ್ ಅವರನ್ನು ಹೊರಗಿಟ್ಟ ನಿರ್ಧಾರಕ್ಕೆ ಗವಾಸ್ಕರ್ ಕಟುವಾಗಿ ಮಾತನಾಡಿದ್ದಾರೆ.
ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ಕುಲ್ದೀಪ್ ಯಾದವ್ ಬದಲಿಗೆ ವೇಗಿ ಜಯ್‌ದೇವ್ ಉನಾದ್ಕಟ್‌ಗೆ ಅವಕಾಶ ನೀಡಿಲಾಗಿದೆ. ಈ ಮೂಲಕ ಸುದೀರ್ಘ 12 ವರ್ಷಗಳ ಬಳಿಕ ಜಯ್‌ದೇವ್ ಉನಾದ್ಕಟ್ ಆಡುವ ಬಳಗದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಂತಾಗಿದೆ. ಆದರೆ ಮೊದಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಹೊರತಾಗಿಯೂ ಕುಲ್ದೀಪ್ ಯಾದವ್ ಅವರರನ್ನು ಹೊರಗಿಡುವ ನಿರ್ಧಾರ ಅಚ್ಚರಿ ಮೂಡಿಸಿದೆ.

ಮೊದಲ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಕುಲ್ದೀಪ್
ಸುನಿಲ್ ಗವಾಸ್ಕರ್ ಈ ಬಗ್ಗೆ ಮಾತನಾಡುತ್ತಾ ಟೀಮ್ ಇಂಡಿಯಾ ಎರಡನೇ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಅವರನ್ನು ಹೊರಗಿಡುವ ನಿರ್ಧಾರವನ್ನು ತೆಗೆದುಕೊಳ್ಳಬಾರದಿತ್ತು ಎಂದಿದ್ದಾರೆ. ಚಿತ್ತಗಾಂಗ್‌ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಐದು ವಿಕೆಟ್‌ಗಳ ಗೊಂಚಲಿನೊಂದಿಗೆ ಬ್ಯಾಟಿಂಗ್‌ನಲ್ಲಿಯೂ ಗಮನಾರ್ಹ ಪ್ರದರ್ಶನ ನೀಡಿದ್ದರು ಕುಲ್ದೀಪ್ ಯಾದವ್. ಹೀಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.

ಊಹಿಸಲೂ ಸಾಧ್ಯವಾಗುತ್ತಿಲ್ಲ
"ಪಂದ್ಯಶ್ರೇಷ್ಠ ಪ್ರಶಸ್ತಿ ಪಡದವರನ್ನೇ ಹೊರಗಿಡುವುದು ಊಹಿಸಲೂ ಅಸಾಧ್ಯ. ಇದೊಂದೇ ಶಬ್ದವನ್ನು ನಾನು ಬಳಸಲು ಸಾಧ್ಯ ಮತ್ತು ಇದು ಗೌರವಯುತವಾದ ಶಬ್ದ. ಇಲ್ಲಿ ನಾನು ಬಹಳ ಕಠಿಣವಾದ ಶಬ್ದಗಳನ್ನು ಬಳಸಬೇಕೆಂದು ಬಯಸಿದ್ದೆ, ಆದರೆ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರನನ್ನೇ ಹೊರಗಿಡುವುದು ನಂಬಲು ಅಸಾಧ್ಯವಾಗಿದೆ. ಕಳೆದ ಪಂದ್ಯದಲ್ಲಿ 20 ವಿಕೆಟ್‌ಗಳ ಪೈಕಿ 8 ವಿಕೆಟ್‌ಗಳನ್ನು ಆತನೇ ಪಡೆದಿದ್ದ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಸುನಿಲ್ ಗವಾಸ್ಕರ್.
"ನಿಮ್ಮಲ್ಲಿ ಮತ್ತಿಬ್ಬರು ಸ್ಪಿನ್ನರ್‌ಗಳು ಇದ್ದರು. ಅವರಲಿ ಒಬ್ಬರನ್ನು ನೀವು ತಂಡದಿಂದ ಕೈಬಿಡಬಹುದಾಗಿತ್ತು. ಆದರೆ ಕುಲ್ದೀಪ್ ಯಾದವ್ ಖಂಡಿತವಾಗಿಯೂ ಈ ಪಂದ್ಯದಲ್ಲಿ ಆಡಬೇಕಾಗಿತ್ತು. ಪಿಚ್‌ನ ಪರಿಸ್ಥಿರಿ ಹೇಗಿದ್ದರೂ ಆತನಿಗೆ ಅವಕಾಶ ದೊರೆಯಲೇಬೇಕಾಗಿತ್ತು" ಎಂದಿದ್ದಾರೆ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್. ಸರಣಿಯ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದಿದ್ದ ಕುಲ್ದೀಪ್ ಎರಡನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ಸಂಪಾದಿಸಿದ್ದರು.

ಇದೊಂದು ಕಠಿಣ ನಿರ್ಧಾರ ಎಂದ ನಾಯಕ ರಾಹುಲ್
ಇನ್ನು ಟಾಸ್ ಸಂದರ್ಭದಲ್ಲಿ ಮಾತನಾಡಿದ ಹಂಗಾಮಿ ನಾಯಕ ಕೆಎಲ್ ರಾಹುಲ್ ಕುಲ್ದೀಪ್ ಯಾದವ್ ಅವರನ್ನು ಆಡುವ ಬಳಗದಿಂದ ಕೈಬಿಡುವ ನಿರ್ಧಾರ ಕಠಿಣವಾಗಿದ್ದು ಎಂದಿದ್ದಾರೆ. ಆದರೆ ಜಯ್‌ದೇವ್ ಉನಾದ್ಕಟ್‌ಗೆ ಅವಕಾಶ ನೀಡುವ ದೃಷ್ಟಿಯಿಂದ ಇದು ಅನಿವಾರ್ಯ ಎಂದಿದ್ದಾರೆ ಕೆಎಲ್ ರಾಹುಲ್.

ಇತ್ತಂಡಗಳ ಆಡುವ ಬಳಗ
ಟೀಮ್ ಇಂಡಿಯಾ: ಕೆಎಲ್ ರಾಹುಲ್(ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ರಿಷಬ್ ಪಂತ್(ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಜಯದೇವ್ ಉನದ್ಕತ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್
ಬಾಂಗ್ಲಾದೇಶ: ನಜ್ಮುಲ್ ಹೊಸೈನ್ ಶಾಂಟೊ, ಜಾಕಿರ್ ಹಸನ್, ಮೊಮಿನುಲ್ ಹಕ್, ಲಿಟ್ಟನ್ ದಾಸ್, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್(ನಾಯಕ), ನೂರುಲ್ ಹಸನ್(ವಿಕೆಟ್ ಕೀಪರ್), ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಲೀದ್ ಅಹ್ಮದ್, ತಸ್ಕಿನ್ ಅಹ್ಮದ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications