
ಲಂಡನ್, ಆಗಸ್ಟ್ 15: ಪ್ರಸ್ತುತ ಭಾರತ ಕ್ರಿಕೆಟ್ ತಂಡ ಕೊಹ್ಲಿಯನ್ನು ಅವಲಂಭಿಸಿದೆ ಎನ್ನುವುದು ಸರಿಯಲ್ಲ ಎಂದು ಶ್ರೀಲಂಕಾ ಮಾಜಿ ನಾಯಕ ಕುಮಾರ ಸಂಗಕ್ಕರ ಹೇಳಿದ್ದಾರೆ. ಅಲ್ಲದೆ ಮೊದಲೆರಡು ಟೆಸ್ಟ್ ಗಳಲ್ಲಿ ಭಾರತ ಸೋಲಲು ಅಭ್ಯಾಸದ ಕೊರತೆ ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತದೆದುರಿನ ಟೆಸ್ಟ್ ಸರಣಿಯ ಐದು ಪಂದ್ಯಗಳಲ್ಲಿ ಇಂಗ್ಲೆಂಡ್ ಬರ್ಮಿಂಗ್ ಹ್ಯಾಮ್ ಮತ್ತು ಲಾರ್ಡ್ಸ್ ನಲ್ಲಿನ ಎರಡು ಪಂದ್ಯಗಳನ್ನು ಗೆದ್ದುಕೊಂಡಿತ್ತು. ಹೀಗಾಗಿ ಆಂಗ್ಲರೆದುರು ಭಾರತದ ಬ್ಯಾಟಿಂಗ್ ವಿಭಾಗ ಸಂಕಷ್ಟದಲ್ಲಿದೆ. ನಾಯಕ ಕೊಹ್ಲಿ ಮಾತ್ರ ರನ್ ಗಳಿಸಲು ಶಕ್ತರು ಎಂಬಂತೆ ಭಾವಿಸಲಾಗಿತ್ತು.
'ಕಳೆದ ಕೆಲವು ವರ್ಷ ನೋಡಿದ ಹಾಗೆ ಉಳಿದ ಬ್ಯಾಟ್ಸ್ಮನ್ ಗಳಿಗಿಂತ ಕೊಹ್ಲಿ ಹೆಚ್ಚು ತಂಡಕ್ಕೆ ಬಲ ತುಂಬುತ್ತಿದ್ದಾರೆ. ಪಂದ್ಯವೊಂದರಲ್ಲಿ ಕೊಹ್ಲಿ ಆಡುವಾಗ ನಂಬಲಾಗದ ಪ್ರದರ್ಶನ ನೀಡುತ್ತಿದ್ದಾರೆ. ಕೊಹ್ಲಿಯೊಬ್ಬರು ಅದ್ಭುತ ಆಟಗಾರ' ಎಂದು ಸಂಗಕ್ಕರ ಹೇಳಿದರು.
'ಪೂಜಾರ ಮತ್ತು ರಹಾನೆ ಕೂಡ ಉತ್ತಮ ಬ್ಯಾಟ್ಮನ್ ಗಳೆ. ಇಬ್ಬರೂ ಟೆಸ್ಟ್ ಕ್ರಿಕೆಟ್ ನಲ್ಲಿ 50ರ ಸರಾಸರಿ ಹೊಂದಿದ್ದಾರೆ. ಫಾರ್ಮ್ ನಲ್ಲಿದ್ದಾಗ ರಾಹುಲ್ ಬಲಿಷ್ಟರಾಗಿ ತೋರುತ್ತಾರೆ. ಮುರಳಿ ವಿಜಯ್, ಶಿಖರ್ ಧವನ್, ದಿನೇಶ್ ಕಾರ್ತಿಕ್ ಅವರನ್ನೂ ಕಡೆಗಣಿಸುವಂತಿಲ್ಲ. ಆದರೆ ಇವರು ಪಂದ್ಯದ ವೇಳೆ ಪ್ರದರ್ಶನ ನೀಡಬೇಕಿದೆ. ಒಟ್ಟಿನಲ್ಲಿ ಇತರ ಆಟಗಾರರೂ ತಂಡದ ಬೆಂಬಲಕ್ಕಿದ್ದಾರೆ' ಎಂದು ಸಂದರ್ಶನವೊಂದರ ವೇಳೆ ಸಂಗಕ್ಕರ ತಿಳಿಸಿದರು.