World Cup 2023: ನೂತನ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಯಶಸ್ಸಿನ ಹಿಂದೆ ಮಂಗಳೂರು ನಾರಿ ಶಕ್ತಿ
ಭಾನುವಾರ, ನವೆಂಬರ್ 19ರಂದು ಮುಕ್ತಾಯಗೊಂಡ 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ದಿಗ್ವಿಜಯ ಸಾಧಿಸಿದ್ದು, ಆಸೀಸ್ ತಂಡದ ಸಮತೋಲಿತ ಆಟ ವಿಶ್ವಕಪ್ ಟ್ರೋಫಿ ಗೆಲ್ಲುವುದಕ್ಕೆ ಕಾರಣವಾಗಿದೆ.
ಆದರೆ, ಆಸ್ಟ್ರೇಲಿಯಾ ಗೆಲುವಿಗೂ ಭಾರತದ ಸಹಕಾರವಿದೆ. ಕರ್ನಾಟಕದ ಮಂಗಳೂರು ಮೂಲದ ಯುವತಿ ಆಸ್ಟ್ರೇಲಿಯಾ ಕಪ್ ಗೆಲ್ಲಲು ಹಿಂದಿನ ಶಕ್ತಿಯಾಗಿ ನಿಂತಿದ್ದಾರೆ ಎಂಬುದು ಗಮನಾರ್ಹ. ಹೌದು. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿ ಮಂಗಳೂರು ಮೂಲದ ಯುವತಿ ಕಾರ್ಯನಿರ್ವಹಿಸಿದ್ದು, ಆರನೇ ಬಾರಿಗೆ ಟ್ರೋಫಿ ಗೆಲ್ಲಲು ಕಾಂಗರೂ ಪಡೆಯನ್ನು ಹುರಿದುಂಬಿಸಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿ 34 ವರ್ಷದ ಮಂಗಳೂರು ಮೂಲದ ಉರ್ಮಿಳಾ ರೊಸಾರಿಯೋ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಲತಃ ಮಂಗಳೂರಿನ ಕಿನ್ನಿಗೋಳಿಯವರಾಗಿರುವ ಐವಿ ಮತ್ತು ವಾಲೆಂಟೈನ್ ರೊಸಾರಿಯೋ ದಂಪತಿಯ ಪುತ್ರಿಯಾಗಿರುವ ಊರ್ಮಿಳಾ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರರ ಕೇರ್ ಟೇಕರ್ ಆಗಿದ್ದಾರೆ.
ಉರ್ಮಿಳಾ ರೊಸಾರಿಯೋ ಹೆತ್ತವರು ಮೂಲತಃ ಕಿನ್ನಿಗೋಳಿಯವರಾಗಿದ್ದರೂ, ಉದ್ಯೋಗದ ನಿಮಿತ್ತ ಕತಾರ್‌ನ ದೋಹಾದಲ್ಲಿ ವಾಸ್ತವ್ಯವಾಗಿದ್ದರು. ಉರ್ಮಿಳಾ ಅವರ ಜನನವಾಗಿದ್ದು ಕೂಡಾ ಕತಾರ್‌ನಲ್ಲಿಯೇ. ಬಾಲ್ಯದಿಂದಲೇ ಕ್ರೀಡೆ ಬಗ್ಗೆ ಅಪರಿಮಿತ ಆಸಕ್ತಿ ಹೊಂದಿದ್ದ ಉರ್ಮಿಳಾ, ಮೊದಲು ಕತಾರ್ ಟೆನ್ನಿಸ್ ಫೆಡರೇಶನ್‌ನಲ್ಲಿ ಕಾರ್ಯನಿರ್ವಹಿಸಿದ್ದರು.
ಬಳಿಕ ಆಸ್ಟ್ರೇಲಿಯಾದಲ್ಲಿ ಅಡಿಟೇಲ್ ಕ್ರಿಕೆಟ್ ತಂಡದಲ್ಲಿ ಮೂರು ವರ್ಷಗಳ ಕಾಲ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದರು. ಆನಂತರ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಟೀಮ್ ಮ್ಯಾನೇಜರ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು.

ಕತಾರ್‌ನಲ್ಲಿ ನಡೆದ ವಿಶ್ವ ಫುಟ್ಬಾಲ್ ವೇಳೆ ನಾಲ್ಕು ತಿಂಗಳ ಕಾಲ ಸೇವೆ ಸಲ್ಲಿಸಿದ್ದರು. ಅಪಾರ ಅನುಭವದೊಂದಿಗೆ ಮತ್ತೆ ಆಸ್ಟ್ರೇಲಿಯಾಕ್ಕೆ ಮರಳಿದ ಉರ್ಮಿಳಾ ರೊಸಾರಿಯೋ, ಸದ್ಯ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೇರ್ ಟೇಕರ್ ಆಗಿದ್ದಾರೆ.
ಉರ್ಮಿಳಾ ರೊಸಾರಿಯೋ ಅವರ ಹೆತ್ತವರು ಕಳೆದ ಏಳು ವರ್ಷದಿಂದ ಸಕಲೇಶಪುರದಲ್ಲಿ ನೆಲೆಸಿದ್ದು, ಅಲ್ಲಿಯೇ ಎಸ್ಟೇಟ್ ಖರೀದಿಸಿ ವಾಸ್ತವ್ಯ ಹೊಂದಿದ್ದಾರೆ.
ಮಗಳ ಸಾಧನೆ ಬಗ್ಗೆ ಉರ್ಮಿಳಾ ತಂದೆ ವಾಲೆಂಟೈನ್ ರೊಸಾರಿಯೋ ಪ್ರತಿಕ್ರಿಯೆ ನೀಡಿ, "ಮಗಳ ಕ್ರೀಡಾ ಪ್ರಯಾಣವೇ ರೋಚಕವಾಗಿದೆ. ಉರ್ಮಿಳಾಗೆ ಬಾಲ್ಯದಲ್ಲಿ ಬಾಸ್ಕೆಟ್‌ಬಾಲ್, ಟೆನ್ನಿಸ್ ಸೇರಿದಂತೆ ಅಥ್ಲೆಟಿಕ್ ಮೇಲೆ ಆಸಕ್ತಿ ಇತ್ತು. ಬಳಿಕ ಕ್ರಿಕೆಟ್ ಮೇಲೆ ಆಸಕ್ತಿ ಹೊರಳಿತು".

"ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದೊಂದಿಗೆ ಉರ್ಮಿಳಾ ಸಂಬಂಧ ಬಹಳ ಚೆನ್ನಾಗಿತ್ತು. ಆಸ್ಟ್ರೇಲಿಯಾ ಮೂಲದವರಾಗದಿದ್ದರೂ, ಆಸೀಸ್ ಮಹಿಳಾ ತಂಡಕ್ಕೆ ನಾಲ್ಕು ವರ್ಷಗಳ ಕಾಲ ಕೇರ್ ಟೇಕರ್ ಆಗಿದ್ದಳು. ಉರ್ಮಿಳಾ ಎಲ್ಲಾ ಭಾಷೆಗಳನ್ನು ಬಲ್ಲವಳಾಗಿದ್ದರಿಂದ, ಆಟಗಾರರು ಹೋಗುವ ದೇಶದಲ್ಲಿ ಆಟಗಾರರ ಊಟೋಪಚಾರ, ವಸತಿ ಎಲ್ಲವನ್ನೂ ನಿಭಾಯಿಸುತ್ತಾಳೆ. ಅವಳ ಕೆಳಗೆ ದೊಡ್ಡ ತಂಡವೇ ಕಾರ್ಯ ನಿರ್ವಹಿಸುತ್ತಿದೆ. ಮಗಳ ಸಾಧನೆ ಬಗ್ಗೆ ಹೆಮ್ಮೆ ಇದೆ," ಎಂದು ವಾಲೆಂಟೈನ್ ರೊಸಾರಿಯೋ ಹೇಳಿದ್ದಾರೆ.
ಇನ್ನು ಉರ್ಮಿಳಾ ತಾಯಿ ಐವಿ ಮಾತನಾಡಿ, "ಕಳೆದ ಮಾರ್ಚ್‌ನಲ್ಲಿ ಸಕಲೇಶಪುರದ ಎಸ್ಟೇಟ್‌ಗೆ ಉರ್ಮಿಳಾ ಬಂದಿದ್ದಳು. ಉರ್ಮಿಳಾಗೆ ಕನ್ನಡ, ಇಂಗ್ಲಿಷ್, ಹಿಂದಿ, ಕೊಂಕಣಿ ಭಾಷೆಗಳ ಹಿಡಿತವಿದೆ. ವಿಶ್ವಕಪ್ ಸಂದರ್ಭದಲ್ಲಿ ಬೆಂಗಳೂರು ಮತ್ತು ಪುಣೆಯಲ್ಲಿ ನಡೆದ ಆಸ್ಟ್ರೇಲಿಯಾ ತಂಡದ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳ ವಿರುದ್ಧದ ಪಂದ್ಯವನ್ನು ವೀಕ್ಷಿಸಿದ್ದೇವೆ. ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮಗಳು ಅಹ್ವಾನಿಸಿದ್ದಳು. ಆದರೆ ಎಸ್ಟೇಟ್ ಕಾರ್ಯ ನಿಮಿತ್ತ ಹೋಗಲು ಸಾಧ್ಯವಾಗಲಿಲ್ಲ," ಎಂದು ಪ್ರತಿಕ್ರಿಯಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications