ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಣ ಆಷಸ್ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಜನವರಿ 4 ರಂದು ನಡೆಯಲಿದೆ. ಈ ಪಂದ್ಯಕ್ಕೆ ಸಿಡ್ನಿ ಮೈದಾನ ಆತಿಥ್ಯ ನೀಡಲಿದೆ. ಈ ಪಂದ್ಯಕ್ಕಾಗಿ ಈಗಾಗಲೇ ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಭರವಸೆಯ ಬ್ಯಾಟರ್ ಉಸ್ಮಾನ್ ಖವಾಜಾ ಸೇರಿದ್ದಾರೆ. ಈ ಟೆಸ್ಟ್ ಉಸ್ಮಾನ್ ಖವಾಜಾ ಅವರ ಕೊನೆಯ ಟೆಸ್ಟ್ ಪಂದ್ಯ ಎಂದು ಶುಕ್ರವಾರ (ಜ.2) ಸ್ಪಷ್ಟ ಪಡಿಸಿದ್ದಾರೆ. ತಾವು ಆಸ್ಟ್ರೇಲಿಯಾಕ್ಕೆ ಪದಾರ್ಪಣೆ ಮಾಡಿದ ಅಂಗಳದಲ್ಲಿ ಖವಾಜಾ ಕೊನೆಯ ಪಂದ್ಯವನ್ನು ಆಡಲಿದ್ದಾರೆ ಎಂಬುದೇ ವಿಶೇಷ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಹೇಳಿಕೆಯಲ್ಲಿ ಖವಾಜಾ, ನನ್ನ ಕ್ರಿಕೆಟ್ ವೃತ್ತಿ ಜೀವನ ನನಗೆ ತೃಪ್ತಿ ತಂದಿದೆ. ಆಸ್ಟ್ರೇಲಿಯಾ ತಂಡದ ಜೆರ್ಸಿ ತೊಟ್ಟು ಮೈದಾನಕ್ಕೆ ಇಳಿದಿದ್ದು ಹೆಮ್ಮೆಯ ವಿಚಾರ. ಅಲ್ಲದೆ ಹಲವು ಪಂದ್ಯಗಳನ್ನು ಆಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ನಾನು ನನ್ನ ಆಟದ ಮೂಲಕ ಬೇರೆಯವರಿಗೆ ಸ್ಪೂರ್ತಿ ನೀಡಿದ ಖುಷಿ ಇದೆ ಎಂದು ತಿಳಿಸಿದ್ದಾರೆ.

ನಾನು ಪಾಕಿಸ್ತಾನ ಮೂಲದವನು. ಹೀಗಾಗಿ ನಾನು ಎಂದೂ ಆಸ್ಟ್ರೇಲಿಯಾ ಪರ ಆಡಲು ಆಗದು ಎಂದು ಹಲವರು ಮಾತನಾಡುತ್ತಿದ್ದರು. ನಾನು ಆಸೀಸ್ ಪರ ಆಡುತ್ತಿರುವುದು ನೋಡಬಹುದು. ಅಲ್ಲದೆ ನಾನು ಬೇರೆ ಆಟಗಾರರಿಗೂ ಉದಾಹರಣೆ ಆಗಿದೆ. ನನ್ನ ಸ್ವಂತ ಇಚ್ಛೆಯಂತೆ ಮತ್ತು ನನ್ನ ಸ್ವಾಭಿಮಾನವನ್ನು ಉಳಿಸಿಕೊಂಡು, ನಾನು ಸಿಡ್ನಿಯಲ್ಲಿ ಕೊನೆಯ ಟೆಸ್ಟ್ ಆಡಲು ಇಷ್ಟಪಡುತ್ತೇನೆ ಎಂದು ತಿಳಿಸಿದ್ದಾರೆ.
ಖವಾಜಾ ಬಾಲ್ಯದಲ್ಲಿ ಇಸ್ಲಾಮಾಬಾದ್‌ನಿಂದ ಆಸ್ಟ್ರೇಲಿಯಾಕ್ಕೆ ತೆರಳಿದರು. ಇವರು ಆಸೀಸ್ ಪರ ಆಡಿದ ಮೊದಲ ಪಾಕ್ ಮೂಲದ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು. 39 ವರ್ಷದ ಬ್ಯಾಟರ್ ಆಸ್ಟ್ರೇಲಿಯಾದ ಪರ 87 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 43ರ ಸರಾಸರಿಯಲ್ಲಿ 6206 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 16 ಶತಕ ಹಾಗೂ 28 ಅರ್ಧಶತಕಗಳು ಸೇರಿವೆ. ಖವಾಜಾ ಆಸ್ಟ್ರೇಲಿಯಾ ಪರ ಏಕದಿನ ಪಂದ್ಯಗಳನ್ನು ಸಹ ಆಡಿ ಸೈ ಎನಿಸಿಕೊಂಡಿದ್ದಾರೆ. ಇವರು ಆಡಿದ 40 ಪಂದ್ಯಗಳಲ್ಲಿ 1554 ರನ್ ಕಲೆ ಹಾಕಿದ್ದಾರೆ. ಈ ವೇಳೆ 2 ಶತಕ ಹಾಗೂ 12 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇನ್ನು 9 ಟಿ20 ಪಂದ್ಯಗಳನ್ನು ಆಡಿರುವ ಖವಾಜಾ 241 ರನ್ ಸಿಡಿಸಿದ್ದಾರೆ.
ಆಸ್ಟ್ರೇಲಿಯಾ ಪರ ಆಡುವುದರ ಜೊತೆಗೆ, ಉಸ್ಮಾನ್ ಖವಾಜಾ ಫ್ರಾಂಚೈಸ್ ಲೀಗ್‌ನಲ್ಲೂ ಆಡಿ ಸೈ ಎನಿಸಿಕೊಂಡಿದ್ದಾರೆ. ಇವರು ಬಿಗ್ ಬ್ಯಾಷ್ ಲೀಗ್‌ನಲ್ಲಿ 70 ಪಂದ್ಯಗಳಲ್ಲಿ 2,132 ರನ್ ಗಳಿಸಿದ್ದಾರೆ. ಇವರು 2016ರಲ್ಲಿ ಐಪಿಎಲ್‌ನಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರ ಆಡಿದ್ದಾರೆ.
ಉಸ್ಮಾನ್ ಖವಾಜಾ ಭಾರತ ವಿರುದ್ಧ ಒಟ್ಟು 14 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 4 ಅರ್ಧಶತಕಗಳು ಸೇರಿವೆ. ಅಲ್ಲದೆ ಭಾರತದಲ್ಲಿ ಇವರು ಆಡಿದ 4 ಪಂದ್ಯಗಳಲ್ಲಿ 1 ಶತಕ ಹಾಗೂ 2 ಅರ್ಧಶತಕದ ನೆರವಿನಿಂದ 333 ರನ್ ಸಿಡಿಸಿದ್ದಾರೆ.