Vaibhav Suryavanshi: ವೈಭವ್ ಸೂರ್ಯವಂಶಿ ಅವರು ದಾಖಲೆಗಳ ಮೇಲೆ ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ. ಇದೀಗ ಐಸಿಸಿ ಅಂಡರ್-19 ಪುರುಷರ ಕ್ರಿಕೆಟ್ ವಿಶ್ವಕಪ್ 2026 ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಪರ ಶತಕ ಸಿಡಿಸಿ ಮಿಂಚಿದರು. ಟೂರ್ನಿಯ ಇತಿಹಾಸದಲ್ಲೇ ಫೈನಲ್ ಪಂದ್ಯದಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ದಾಖಲಿಸುವ ಮೂಲಕ ಅವರು ಹೊಸ ದಾಖಲೆ ನಿರ್ಮಿಸಿದ್ದಾರೆ. ಹಾಗಾದ್ರೆ, ಅವರು ಎಷ್ಟು ಎಸೆತಗಳಲ್ಲಿ ಈ ಸಾಧನೆ ಮಾಡಿದರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ವೈಭವ್: ವೈಭವ್ ಸೂರ್ಯವಂಶಿ ಕೇವಲ 80 ಎಸೆತಗಳಲ್ಲಿ 175 ರನ್ ಗಳಿಸಿ ದಿಗ್ಗಜರ ದಾಖಲೆಗಳನ್ನು ಮುರಿದಿದ್ದಾರೆ. 2012ರ ಆಸ್ಟ್ರೇಲಿಯಾ ವಿರುದ್ಧದ ಫೈನಲ್‌ನಲ್ಲಿ ಉನ್ಮುಕ್ತ್ ಚಂದ್ ಅವರ 111* ರನ್‌ಗಳ ದೀರ್ಘಕಾಲೀನ ದಾಖಲೆಯನ್ನು ಮೀರಿಸಿದರು. ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ಸೂರ್ಯವಂಶಿ ಅವರು, ತಂಡಕ್ಕೆ ಯಾವುದೇ ಒತ್ತಡ ಬಾರದಂತೆ ಉತ್ತಮ ಆರಂಭ ನೀಡಿದರು.

ಅವರು ಕೇವಲ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಬಳಿಕ ಮತ್ತೊಂದು ಅರ್ಧಶತಕಕ್ಕೆ ಕೇವಲ 23 ಬಾಲ್‌ಗಳನ್ನು ಮಾತ್ರ ತೆಗೆದುಕೊಂಡಿದ್ದು, ವೇಗವಾಗಿ ಶತಕವನ್ನು ಸಹ ಮುಟ್ಟಿದರು. ಅವರ ಈ ಅದ್ಭುತ ಇನ್ನಿಂಗ್ಸ್‌ನಲ್ಲಿ 15 ಬೌಂಡರಿ ಹಾಗೂ 15 ಸಿಕ್ಸರ್‌ಗಳು ಸೇರಿದ್ದು, 218.75ರ ಬಿರುಸಿನ ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟಿಂಗ್ ಮಾಡಿದ್ದಾರೆ.
ದಾಖಲೆಗಳ ವೀರನಾದ ವೈಭವ್: 175 ರನ್‌ಗಳ ಈ ಸ್ಕೋರ್ ಅಂಡರ್-19 ವಿಶ್ವಕಪ್ ಇತಿಹಾಸದಲ್ಲಿ ಭಾರತೀಯ ಆಟಗಾರನಿಂದ ಬಂದ ಗರಿಷ್ಠ ವೈಯಕ್ತಿಕ ಸ್ಕೋರ್ ಕೂಡ ಆಗಿದೆ. ಇದಕ್ಕೂ ಮೊದಲು 2022ರ ಆವೃತ್ತಿಯಲ್ಲಿ ಉಗಾಂಡಾ ವಿರುದ್ಧ ರಾಜ್ ಬಾವಾ ದಾಖಲಿಸಿದ್ದ 162* ರನ್‌ಗಳ ದಾಖಲೆಯನ್ನು ವೈಭವ್ ಸೂರ್ಯವಂಶಿ ಮೀರಿಸಿದ್ದಾರೆ. ಒಟ್ಟಾರೆ ಯೂಥ್ ಏಕದಿನ ಕ್ರಿಕೆಟ್ ಇತಿಹಾಸವನ್ನು ಗಮನಿಸಿದರೆ, ಸೂರ್ಯವಂಶಿಯ ಈ ಶತಕವು 9ನೇ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಈ ಪಟ್ಟಿಯಲ್ಲಿ ಅವರಿಗಿಂತ ಮುಂದೆ ಇರುವ ಏಕೈಕ ಭಾರತೀಯ ಆಟಗಾರ ಅಂಬಟಿ ರಾಯ್ಡು ಆಗಿದ್ದು, ಅವರು 2002ರಲ್ಲಿ ಇಂಗ್ಲೆಂಡ್ ವಿರುದ್ಧ ಅಜೇಯ 177 ರನ್‌ಗಳನ್ನು ದಾಖಲಿಸಿದ್ದರು.
ಸಿಕ್ಸರ್‌ಗಳ ಸುರಿಮಳೆ: ಈ ಸಾಧನೆಗೆ ಮತ್ತೊಂದು ಮೆರುಗು ನೀಡುವಂತೆ, ಅಂಡರ್-19 ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಗರಿಷ್ಠ ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನೂ ವೈಭವ್ ಸೂರ್ಯವಂಶಿ ಮುರಿದಿದ್ದರು. 2022ರ ಟೂರ್ನಿಯಲ್ಲಿ ಡೆವಾಲ್ಡ್ ಬ್ರೆವಿಸ್ 22 ಸಿಕ್ಸರ್‌ಗಳನ್ನು ಸಿಡಿಸಿದ್ದರೆ, ಫೈನಲ್‌ಗೆ ಮೊದಲು ಈಗಾಗಲೇ 15 ಸಿಕ್ಸರ್‌ಗಳನ್ನು ಬಾರಿಸಿದ್ದ ಸೂರ್ಯವಂಶಿ, ಪ್ರಶಸ್ತಿ ಪಂದ್ಯದಲ್ಲೇ ಆ ಸಂಖ್ಯೆಯನ್ನು ಸರಿಗಟ್ಟಿ, ಒಟ್ಟಾರೆ ಟೂರ್ನಿಯಲ್ಲಿ ಅಚ್ಚರಿ ಮೂಡಿಸುವಂತೆ 30 ಸಿಕ್ಸರ್‌ಗಳನ್ನು ಸಿಡಿಸಿದ ಸಾಧನೆ ಮಾಡಿದ್ದಾರೆ.
ಟೀಂ ಇಂಡಿಯಾ ರನ್‌ಗಳ ವಿವರ: ಮೊದಲು ಬ್ಯಾಟ್ ಮಾಡಿ ಟೀಮ್ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 411 ಬೃಹತ್ ರನ್‌ಗಳನ್ನು ಕಲೆಹಾಕಿತು. ಆರನ್ ಜಾರ್ಜ್ 9(11), ವೈಭವ್ ಸೂರ್ಯವಂಶಿ 175(80), ಆಯುಷ್ ಮ್ಹಾತ್ರೆ 53(51), ವೇದಾಂತ ತ್ರಿವೇದಿ 32(36), ವಿಹಾನ್ ಮಲ್ಹೋತ್ರಾ 30(36), ಅಭಿಜ್ಞಾನ್ ಕುಂಡು 40(31), ಆರ್ ಅಂಬರೀಶ್ 18(24), ಕನಿಷ್ಕ್ ಚೌಹಾಣ್ ಅಜೇಯ 37(20), ಖಿಲಾನ್ ಪಟೇಲ್ 3(4), ಹೆನಿಲ್ ಪಟೇಲ್ 5(7), ದೀಪೇಶ್ ದೇವೇಂದ್ರನ್ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರು.
ಟೀಮ್ ಇಂಡಿಯಾ ಪ್ಲೇಯಿಂಗ್ 11: ಆರನ್ ಜಾರ್ಜ್, ವೈಭವ್ ಸೂರ್ಯವಂಶಿ, ಆಯುಷ್ ಮ್ಹಾತ್ರೆ (ನಾಯಕ), ವಿಹಾನ್ ಮಲ್ಹೋತ್ರಾ, ವೇದಾಂತ್ ತ್ರಿವೇದಿ, ಅಭಿಗ್ಯಾನ್ ಕುಂದು (ವಿ.ಕೀ.), ಆರ್‌ಎಸ್ ಅಂಬ್ರಿಶ್, ಕನಿಷ್ಕ್ ಚೌಹಾಣ್, ಖಿಲಾನ್ ಪಟೇಲ್, ಹೆನಿಲ್ ಪಟೇಲ್, ದೀಪೇಶ್ ದೇವೇಂದ್ರನ್.