ಐಪಿಎಲ್ 2025 ರಲ್ಲಿ ಅತ್ಯಂತ ವೇಗದ ಶತಕವನ್ನು 14 ವರ್ಷದ ಬ್ಯಾಟರ್ ವೈಭವ್ ಸೂರ್ಯವಂಶಿ ದಾಖಲಿಸಿದ್ದಾರೆ. ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ವೈಭವ್ ಸೂರ್ಯವಂಶಿ ದಾಖಲೆಯ ಶತಕ ಸಿಡಿಸಿದ್ದಾರೆ. ಈ ಶತಕದ ಮೂಲಕ ವೈಭವ್ ಸೂರ್ಯವಂಶಿ ಎಲ್ಲರ ಮನ ಗೆದ್ದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಮೊದಲ ಶತಕ ಗಳಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮೊದಲ ಪಂದ್ಯದ ನಂತರ ವೈಭವ್ ಆತುರದಲ್ಲಿ ವಿಕೆಟ್ ಬಿಟ್ಟುಕೊಟ್ಟಿದ್ದರು. ಆದರೆ ಗುಜರಾತ್ ವಿರುದ್ಧದ ಪಂದ್ಯದಲ್ಲಿ ವೈಭವ್ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ದಾಖಲೆಗಳನ್ನು ಸೃಷ್ಟಿಸಿದ್ದಾರೆ.

ವೈಭವ್ ಸೂರ್ಯವಂಶಿ ಅವರು ಗುಜರಾತ್ ಟೈಟಾನ್ಸ್ ತಂಡದ ಬೌಲರ್ಸ್‌ಗೆ ದಂಡಿಸಿದರು. ಅವರು ಕೇವಲ 35 ಎಸೆತಗಳಲ್ಲಿ ತಮ್ಮ ಅಮೋಘ ಶತಕವನ್ನು ಪೂರೈಸಿದರು. ಟೀಮ್ ಇಂಡಿಯಾದ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರಾಗಿದ್ದ ಇಶಾಂತ್ ಶರ್ಮಾ ಅವರನ್ನು ವೈಭವ್ ಸೂರ್ಯವಂಶಿ ತರಾಟೆಗೆ ತೆಗೆದುಕೊಂಡರು.
ಇಶಾಂತ್ ಶರ್ಮಾ ಅವರ ಓವರ್‌ನಲ್ಲಿ ವೈಭವ್ 3 ಸಿಕ್ಸರ್‌ಗಳು ಮತ್ತು 2 ಬೌಂಡರಿಗಳನ್ನು ಬಾರಿಸಿ 26 ರನ್ ಗಳಿಸಿದರು. ಇಶಾಂತ್ ಎರಡು ವೈಡ್ ಬಾಲ್‌ಗಳನ್ನು ಕೂಡ ಮಾಡಿದರು. ಆ ಓವರ್‌ನಲ್ಲಿ ಒಟ್ಟು 28 ರನ್‌ಗಳು ಬಂದವು. ಇದರೊಂದಿಗೆ ವೈಭವ್ ಕೇವಲ 17 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ವೈಭವ್ ಸೂರ್ಯವಂಶಿ ಅವರನ್ನು ಎಷ್ಟೇ ಹೊಗಳಿದರೂ ಕಡಿಮೆಯೇ ಆಗುತ್ತದೆ. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 11 ಸಿಕ್ಸರ್‌ಗಳು ಮತ್ತು 7 ಬೌಂಡರಿಗಳನ್ನು ಬಾರಿಸಿದರು. ಅವರು 38 ಎಸೆತಗಳಲ್ಲಿ 101 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿ ಔಟಾದರು. ವೈಭವ್ ಕೂಡ ತಮ್ಮ ಚೊಚ್ಚಲ ಪ್ರವೇಶದಲ್ಲೇ ದಾಖಲೆಯೊಂದಿಗೆ ಆರಂಭಿಸಿದ್ದರು. ಅವರು ತಮ್ಮ ಐಪಿಎಲ್ ವೃತ್ತಿಜೀವನದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದರು. ಈಗ ಶತಕ ಸಿಡಿಸುವ ಮೂಲಕ ಅವರು ವಿಶೇಷ ಸಾಧನೆ ಮಾಡಿದರು.