ಈ ಬಾರಿಯ ಯಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಅಲ್ಲದೆ ಪ್ಲೇ ಆಫ್ ಪ್ರವೇಶಿಸುವ ತಂಡದ ಕನಸು ಲೀಗ್ ಹಂತದಲ್ಲಿ ಕಮರಿದೆ. ಆದರೆ ಈ ಲೀಗ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಭರವಸೆಯ ಬೆಳಕು ಒಂದು ಸಿಕ್ಕಿದೆ. 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಪದಾರ್ಪಣೆ ಮಾಡಿ ಮಿಂಚು ಹರಿಸಿದ ಆಟಗಾರರ ರಾಜಸ್ಥಾನ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ ನಂಬರ್ 1 ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರ ಬಿರುಸಿನ ಬ್ಯಾಟಿಂಗ್ ಶೈಲಿ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.
ವೈಭವ್ ಸೂರ್ಯವಂಶಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಈ ಮೂಲಕ ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ. ವೈಭವ್ ವೇಗವಾಗಿ ಶತಕ ಬಾರಿಸಿದ ಐಪಿಎಲ್ ಇತಿಹಾಸದ ಎರಡಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಇವರು ವೇಗದ ಶತಕ ಬಾರಿಸಿದ ಮೊದಲ ಭಾರತೀಯ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ರಾಜಸ್ಥಾನ ರಾಯಲ್ಸ್ ಲೀಗ್ ಹಂತದಲ್ಲಿ ಟೂರ್ನಿಗೆ ಗುಡ್ ಬಾಯ್ ಹೇಳಿದ ಮೇಲೆ ಕೋಚ್ ರಾಹುಲ್ ದ್ರಾವಿಡ್, ವೈಭವ್ ಅವರೊಂದಿಗೆ ಸಂದರ್ಶನವನ್ನು ನಡೆಸಿದ್ದಾರೆ. ಈ ವಿಡಿಯೋವನ್ನು ಐಪಿಎಲ್ ತನ್ನ ವೆಬ್‌ಸೈಟ್‌ನಲ್ಲಿ ಹಾಕಿಕೊಂಡಿದೆ.

ಈ ಸಂದರ್ಶನದಲ್ಲಿ ರಾಹುಲ್ ದ್ರಾವಿಡ್ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ರಾಹುಲ್, ಶತಕ ಬಾರಿಸಿದ ದಿನದಂದು ಎಷ್ಟು ಕಾಲ್ ಬಂದಿದ್ದವು ಎಂದು ಕೇಳಿದ್ರು. ಆಗ ವೈಭವ್, ಶತಕ ಬಾರಿಸಿದ್ದಾಗ ಸುಮಾರು 500 ಮಿಸ್ ಕಾಲ್ ಗಳು ಇದ್ದವು. ನಾನು ತಲೆ ಕೆಟ್ಟು ಫೋನ್ ಆಫ್ ಮಾಡಿದೆ. ನಾನು ಬೇರೆ ಪಂದ್ಯಗಳತ್ತ ಗಮನ ಹರಿಸಬೇಕಿತ್ತು. ಅಲ್ಲದೆ ನನ್ನ ಪೋನ್ ಆಫ್ ಇದೆ ಎಂದು ನಿಮಗೂ ಹೇಳಿದ್ದೆ ಎಂದು ವೈಭವ್ ತಿಳಿಸಿದ್ದಾರೆ.
ಇದೇ ಸಂದರ್ಶನದಲ್ಲಿ ಮುಂದುವರೆದ ವೈಭವ್ ನನಗೆ ನನ್ನು ಕುಟುಂಬಸ್ಥರು ಹಾಗೂ ಬೆರಳೇಣಿಕೆ ಜನ ಫ್ರೆಂಡ್ಸ್ ಇದ್ದಾರೆ. ಇವರನ್ನು ಬಿಟ್ಟರೆ ನಾನು ಬೇರೆಯವರೊಂದಿಗೆ ಸಂಪರ್ಕ ಅಷ್ಟು ಬೇಗ ಹೊಂದುವುದಿಲ್ಲ ಹೀಗಾಗಿ ಫೋನ್ ಸ್ವಿಚ್ ಆಫ್ ಮಾಡಿದೆ ಎಂದಿದ್ದಾರೆ.
ರಾಹುಲ್ ದ್ರಾವಿಡ್ ಇದೇ ವೇಳೆ ವೈಭವ್‌ಗೆ ಗುರು ಮಂತ್ರವನ್ನು ಸಹ ನೀಡಿದ್ದಾರೆ. "ನೀನು ಚೆನ್ನಾಗಿ ಅಭ್ಯಾಸ ಮಾಡುತ್ತೀಯಾ. ಇದನ್ನೇ ಮುಂದುವರೆಸು. ಕಳೆದ ಮೂರ್ನಾಲ್ಕು ತಿಂಗಳು ಬೆವರು ಹರಿಸಿದ್ದೀಯಾ. ಇದೇ ದಿನಚರಿ ಮುಂದುವರೆಯಲಿ. ನೀನು ಮುಂದಿನ ಆವೃತ್ತಿಯ ಐಪಿಎಲ್‌ನಲ್ಲಿ ಆಡಲು ಬಂದಾಗ ಬೌಲರ್‌ಗಳು ನಿನ್ನ ಆಟಕ್ಕೂ ರಣ ತಂತ್ರವನ್ನು ಮಾಡಿಕೊಂಡಿರುತ್ತಾರೆ. ಆಗ ನೀನು ಚೆನ್ನಾಗಿ ಅದಕ್ಕೆ ಉತ್ತರಿಸಬೇಕು ಎಂದು ದ್ರಾವಿಡ್ ತಿಳಿಸಿದ್ದಾರೆ.
ವೈಭವ್ ಸೂರ್ಯವಂಶಿ ಪ್ರಸಕ್ತ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಇವರು ಆಡಿದ 7 ಪಂದ್ಯಗಳಲ್ಲಿ 36ರ ಸರಾಸರಿಯಲ್ಲಿ 252 ರನ್ ಕಲೆ ಹಾಕಿದ್ದಾರೆ. ಇವರ ಅಮೋಘ ಆಟದಲ್ಲಿ 1 ಶತಕ, 1 ಅರ್ಧಶತಕಗಳು ಸೇರಿವೆ.