ಇನ್ನೇನು ಕೆಲವೇ ದಿನಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) ಆರಂಭವಾಗಲಿದೆ. ಈ ವೇಳೆ ಎಲ್ಲರ ಕಣ್ಣುಗಳು ಟೀಮ್ ಇಂಡಿಯಾದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಮೇಲೆ ನೆಟ್ಟಿದೆ. ಈ ಯುವ ಆಟಗಾರ ಕಳೆದ ಬಾರಿ ಐಪಿಎಲ್ ಸಂಚಲನ ಮೂಡಿಸಿದ್ದರು. ತಮ್ಮ ಆಕರ್ಷಕ ಬ್ಯಾಟಿಂಗ್‌ನಿಂದ ವೈಭವ್ ರನ್ ಗುಡ್ಡೆ ಹಾಕಿ ಅಬ್ಬರಿಸಿದ್ದರು. ಈಗ ಮತ್ತೊಮ್ಮೆ ವೈಭವ್ ಅಭಿಮಾನಿಗಳ ಮುಂದೆ ಆರ್ಭಟಿಸಲು ಯೋಜನೆ ರೂಪಿಸಿಕೊಂಡಿದ್ದಾರೆ.
ಮಾರ್ಚ್ 28 ರಿಂದ ಆರಂಭವಾಗಲಿರುವ ಐಪಿಎಲ್‌ನಲ್ಲಿ ವೈಭವ್ ಸೂರ್ಯವಂಶಿ ಅವರು ರಾಜಸ್ಥಾನ ರಾಯಲ್ಸ್ ತಂಡದ ಪರ ಕಣಕ್ಕೆ ಇಳಿಯಲಿದ್ದಾರೆ. ಕಳೆದ ಆವೃತ್ತಿಯಲ್ಲಿ ವೈಭವ್ ಪದಾರ್ಪಣೆ ಮಾಡಿದ್ದರು. ಅಲ್ಲದೆ ಆಡಿದ ಮೊದಲ ಆವೃತ್ತಿಯಲ್ಲಿ ಎಲ್ಲರ ಚಿತ್ತ ಕದ್ದಿದ್ದರು. ಗುಜರಾತ್ ಜೈಂಟ್ಸ್ ವಿರುದ್ಧ ಆಡುವಾಗ ವೈಭವ್ ವೇಗದ ಶತಕ ಬಾರಿಸಿದರು. ಇದು ಐಪಿಎಲ್ ಇತಿಹಾಸದ ಎರಡನೇ ವೇಗದ ಶತಕವಾಗಿದೆ. ಐಪಿಎಲ್‌ನಲ್ಲಿ ವೇಗದ ಶತಕ ಬಾರಿಸಿದ ಹಿರಿಮೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಇವರು 30 ಎಸೆತಗಳಲ್ಲಿ ಮೂರಂಕಿ ಮುಟ್ಟಿದ್ದರು.

ಇತ್ತೀಚಿಗೆ ನವದೆಹಲಿಯಲ್ಲಿ ಬಿಸಿಸಿಐ ನಮನ್ ಪ್ರಶಸ್ತಿಗಳನ್ನು ನೀಡಿತು. ಈ ಸಮಾರಂಭದಲ್ಲಿ ಅಂಡರ್ 19 ವಿಶ್ವಕಪ್ ಗೆದ್ದ ತಂಡಕ್ಕೂ ಸನ್ಮಾನಿಸಲಾಯಿತು. ಈ ವೇಳೆ ವೈಭವ್ ಸೂರ್ಯವಂಶಿ ಅವರು ಸಹ ಹಾಜರಿದ್ದರು. ಕಾರ್ಯಕ್ರಮದ ಬಳಿಕ ಒಂದು ಸಂವಾದ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ನಿರೂಪಣೆಯನ್ನು ಹರ್ಷಾ ಬೋಗ್ಲೆ ಮಾಡುತ್ತಿದ್ದರು. ಹರ್ಷಾ ಅವರು ವೈಭವ್ ಅವರಿಗೆ ವೇಗದ ಶತಕದ ದಾಖಲೆ ಬರೆಯುವುದೋ ಅಥವಾ ಕ್ರಿಸ್ ಗೇಲ್ ಅವರ 175 ರನ್‌ಗಳ ದಾಖಲೆಯನ್ನು ಅಳಿಸುವುದು ಈ ಎರಡರಲ್ಲಿ ಯಾವುದನ್ನು ಮಾಡುವ ಆಸೆ ನಿಮದ್ದಾಗಿದೆ ಎಂದು ಕೇಳಿದರು.

ಆಗ ವೈಭವ್ ಸೂರ್ಯವಂಶಿ ವೆಸ್ಟ್ ಇಂಡೀಸ್ ತಂಡದ ದೈತ್ಯ ಆಟಗಾರ ಕ್ರಿಸ್ ಗೇಲ್ ಆರ್‌ಸಿಬಿ ಪರ ಆಡುವಾಗ 175 ರನ್‌ಗಳನ್ನು ಸಿಡಿಸಿದ್ದರು. ಈ ದಾಖಲೆಯನ್ನು ಅಳಿಸುವ ಆಸೆ ಇದೆ ಎಂದು ತಿಳಿಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ವೈಭವ್ ಸೂರ್ಯವಂಶಿ ಅವರಿಗೆ ಇದೇ ಕಾರ್ಯಕ್ರಮದಲ್ಲಿ ನೀವು ಮೊದಲ ಪಂದ್ಯವನ್ನು ಆಡುವಾಗ ನಿಮ್ಮ ಗೇಮ್ ಪ್ಲ್ಯಾನ್ ಏನಾಗಿತ್ತು ಎಂದು ಕೇಳಿದ್ದರು. ಆಗ ಆ ಹಳೆಯ ನೆನಪಿನ ಬುತ್ತಿಯಲ್ಲಿನ ಪ್ರಸಂಗವನ್ನು ಕೆದಕಿ ವೈಭವ್ ಉತ್ತರ ನೀಡುತ್ತಿದ್ದರು. ಆಗ ಸಂಜು ಅವರನ್ನು ತಡೆದು ವೈಭವ್ ಹೇಳಿದ್ದನ್ನು ತಿಳಿಸಿದರು. ಈ ವಿಡಿಯೋ ಸಹ ಸಖತ್ ವೈರಲ್ ಆಗುತ್ತಿದೆ.

ವೈಭವ್ ಸೂರ್ಯವಂಶಿ ಭಾರತದ ಪರ ಅಂಡರ್ 19 ವಿಶ್ವಕಪ್ ಆಡಿದ ಯುವ ಆಟಗಾರ. ಇವರು ಈ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಅಬ್ಬರಿಸಿದ್ದರು. ಅಲ್ಲದೆ ಈ ಸರಣಿಯ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಸಹ ಪಡೆದಿದ್ದರು.