ಐಪಿಎಲ್ ಸೇರಿದಂತೆ ವಿವಿಧ ವಯೋಮಿತಿ ಕ್ರಿಕೆಟ್‌ನಲ್ಲಿ ಈಗಾಗಲೇ ತಮ್ಮ ಬ್ಯಾಟಿಂಗ್ ಮೂಲಕ ಸದ್ದು ಮಾಡುತ್ತಿರುವ 14 ವರ್ಷದ ವೈಭವ್ ಸೂರ್ಯವಂಶಿ, ದೇಶೀಯ ಕ್ರಿಕೆಟ್‌ನಲ್ಲೂ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಬುಧವಾರದಿಂದ ಆರಂಭವಾದ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ವೈಭವ್ ಸ್ಫೋಟಕ ಬ್ಯಾಟಿಂಗ್‌ಗೆ ಅರುಣಾಚಲ ಪ್ರದೇಶ ಕಂಗಾಲಾಗಿದೆ. ಈ ಮೂಲಕ ವೈಭವ್ ಲೀಸ್ಟ್ ಎ ಪಂದ್ಯದಲ್ಲಿ ಶತಕ ಬಾರಿಸಿದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.
ರಾಂಚಿಯಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯ ಪ್ಲೇಟ್ ಲೀಗ್ ಪಂದ್ಯದಲ್ಲಿ ವೈಭವ್ ಆರ್ಭಟ ನಡೆಸಿದ್ದಾರೆ. ಇವರು ಹಿರಿಯರ ಪಂದ್ಯದಲ್ಲಿ ಇದೇ ಮೊದಲ ಬಾರಿಗೆ ಶತಕ ಬಾರಿಸಿ ಅಬ್ಬರಿಸಿದ್ದಾರೆ. ಇವರು ಏಕದಿನ ಕ್ರಿಕೆಟ್‌ನಲ್ಲಿ ಟಿ20 ಶೈಲಿಯಲ್ಲಿ ಬ್ಯಾಟ್ ಮಾಡಿ ಅಬ್ಬರಿಸಿದರು. ಇವರು ಕೇವಲ 36 ಎಸೆತಗಳಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದಾರೆ. ವೈಭವ್ 150 ರನ್‌ಗಳನ್ನು ವೇಗವಾಗಿ ತಲುಪಿದ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ವೈಭವ್ 84 ಎಸೆತಗಳಲ್ಲಿ 16 ಬೌಂಡರಿ, 15 ಸಿಕ್ಸರ್ ನೆರವಿನಿಂದ 190 ರನ್ ಬಾರಿಸಿ ಔಟ್ ಆದರು.

ವೈಭವ್ ಈಗಾಗಲೇ ಭಾರತ ಅಂಡರ್ 19 ತಂಡದ ಪರ ಆಡಿ ಸೈ ಎನಿಸಿಕೊಂಡಿದ್ದಾರೆ. ಅಲ್ಲದೆ ಇವರು ಅಂಡರ್ 19 ವಿಶ್ವಕಪ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರು ಯುಎಇ ವಿರುದ್ಧ ಏಷ್ಯಾ ಕಪ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ 95 ಎಸೆತಗಳಲ್ಲಿ 171 ರನ್ ಸಿಡಿಸಿ ಅಬ್ಬರಿಸಿದ್ದರು. ಈ ಪಂದ್ಯದಲ್ಲಿ ಇವರು ಅಂಬಟಿ ರಾಯುಡ ಅವರ ದಾಖಲೆಯನ್ನು ಅಳಿಸುವಲ್ಲಿ ಕೊಂಚದ್ರಲ್ಲಿ ವಿಫಲರಾದರು.
ವೈಭವ್ ಸೂರ್ಯವಂಶಿ ಅವರ ಸಿಡಿಲಬ್ಬರದ ಬ್ಯಾಟಿಂಗ್‌ಗೆ ಎಬಿಡಿ ವಿಲಿಯರ್ಸ್ ಹಾಗೂ ಜೋಸ್ ಬಟ್ಲರ್ ಅವರ ದಾಖಲೆ ಸಹ ಧ್ವಂಸವಾಗಿದೆ. ಲೀಸ್ಟ್ ಎ ಕ್ರಿಕೆಟ್‌ನಲ್ಲಿ ವೇಗವಾಗಿ 150 ರನ್ ಗಡಿ ದಾಖಲೆಗೆ ವೈಭವ್ ಸೂರ್ಯವಂಶಿ ತಮ್ಮ ಹೆಸರನ್ನು ನಮೂದಿಸಿದ್ದಾರೆ. ಇವರು 59 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮೊದಲು ಎಬಿಡಿ 64 ಎಸೆತಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧ, ಜೋಸ್ ಬಟ್ಲರ್ 65 ಎಸೆತಗಳಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಈ ಸಾಧನೆ ಮಾಡಿದ್ದರು.
ವೈಭವ್ ಸೂರ್ಯವಂಶಿ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಅತಿ ವೇಗದ ಶತಕದ ಸಾಧಕನಾಗುವುದರಿಂದ ಕೊಂಚದರಲ್ಲಿ ಮಿಸ್ ಆದರು. ಈ ಟೂರ್ನಿಯಲ್ಲಿ ವೇಗದ ಶತಕ ಬಾರಿಸಿದ ದಾಖಲೆ ಪಂಜಾಬ್‌ನ ಅನ್ಮೋಲ್‌ಪ್ರೀತ್ ಸಿಂಗ್ ಅವರದ್ದಾಗಿದೆ. ಇವರು ಕಳೆದ ವರ್ಷದ ವಿಜಯ್ ಹಜಾರೆ ಟ್ರೋಫಿಯಲ್ಲಿ ಈ ಸಾಧನೆ ಮಾಡಿದ್ದಾರೆ. ಒಟ್ಟಾರೆ ಲಿಸ್ಟ್ ಎ ನಲ್ಲಿ ಅತಿ ವೇಗದ ಶತಕ ಬಾರಿಸಿದ ಹಿರಿಮೆ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಅವರದ್ದಾಗಿದೆ. ಇವರು 29 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು. ಎಬಿಡಿ ಸಹ 31 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ.