'ಲೆಜೆಂಡ್ ಬೌಲರ್‌ಗಳ ಬೆವರಿಳಿಸಿದ ವೈಭವ್ ಸೂರ್ಯವಂಶಿಯನ್ನ ಕೂಡಲೇ ಟೀಂ ಇಂಡಿಯಾಗೆ ಆಯ್ಕೆ ಮಾಡಿ'
Vaibhav Suryavanshi: ಇದೀಗ ನಡೆಯುತ್ತಿರುವ ಐಪಿಎಲ್ 2026ರ ಸೀಸನ್‌ನಲ್ಲಿ ತನ್ನ ಬ್ಯಾಟಿಂಗ್ ಅಬ್ಬರದ ಮೂಲಕ ಕ್ರಿಕೆಟ್ ಲೋಕದ ಗಮನ ಸೆಳೆದಿರುವ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಭಾರಿ ಸುದ್ದಿಯಲ್ಲಿದ್ದಾರೆ. 15 ವರ್ಷದ ಈ ಬಾಲಕನ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಮನಸೋತಿರುವ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಅವರು, ವೈಭವ್ ಅವರನ್ನು ಕೂಡಲೇ ಟೀಮ್ ಇಂಡಿಯಾಗೆ ಆಯ್ಕೆ ಮಾಡುವಂತೆ ಬಿಸಿಸಿಐಗೆ ಒತ್ತಾಯಿಸಿದ್ದಾರೆ.
ಇತ್ತೀಚೆಗಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ದರು. ಕೇವಲ 26 ಎಸೆತಗಳಲ್ಲಿ 78 ರನ್ ಚಚ್ಚುವ ಮೂಲಕ ಮೈದಾನದಲ್ಲಿ ರನ್ ಮಳೆ ಹರಿಸಿದ್ದರು. ಈ ಅದ್ಭುತ ಇನ್ನಿಂಗ್ಸ್ ನೆರವಿನಿಂದ ಅವರು ಪ್ರಸ್ತುತ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಿಗೆ ನೀಡುವ 'ಆರೆಂಜ್ ಕ್ಯಾಪ್' ಅನ್ನು ತನ್ನದಾಗಿಸಿಕೊಂಡಿದ್ದಾರೆ.

ಬಿಸಿಸಿಐಗೆ ಅರುಣ್ ಧುಮಾಲ್ ವಿಶೇಷ ಮನವಿ
ವೈಭವ್ ಪ್ರದರ್ಶನದ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅರುಣ್ ಧುಮಾಲ್, "ಈ ಯುವ ಪ್ರತಿಭೆ ಭಾರತದ ಪರ ಆಡಲು ಸಂಪೂರ್ಣ ಅರ್ಹನಾಗಿದ್ದಾನೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ಅಪ್ರತಿಮ ಕೌಶಲ ಹೊಂದಿರುವ ಆಟಗಾರ ಸಿಗುವುದು ಅಪರೂಪ. ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡುವ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಗೆ ವೈಭವ್ ಪಾತ್ರರಾಗಬೇಕು," ಎಂದು ಒತ್ತಾಯಿಸಿದ್ದಾರೆ.
ಭಾರಿ ಸಂಚಲನ ಮೂಡಿಸಿದ ಕ್ರಿಕೆಟ್ ದಿಗ್ಗಜರ ಚರ್ಚೆ
ಆದರೆ, ಟೀಮ್ ಇಂಡಿಯಾದ ಮಾಜಿ ನಾಯಕ ಅನಿಲ್ ಕುಂಬ್ಳೆ ಅವರು ಈ ವಿಚಾರದಲ್ಲಿ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಯುವ ಆಟಗಾರನನ್ನು ತಕ್ಷಣವೇ ರಾಷ್ಟ್ರೀಯ ತಂಡಕ್ಕೆ ಸೇರಿಸಿಕೊಳ್ಳುವ ನಿರ್ಧಾರದ ಬಗ್ಗೆ ಅವರು ಎಚ್ಚರಿಕೆ ನೀಡಿದ್ದಾರೆ. ಈ ಚರ್ಚೆಯ ಕುರಿತು ಮಾತನಾಡಿದ ಕುಂಬ್ಳೆ, ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಉದಾಹರಣೆ ನೀಡಿದರು. ಸಚಿನ್ 16ನೇ ವಯಸ್ಸಿನಲ್ಲಿ ಪಾದಾರ್ಪಣೆ ಮಾಡಿದರೂ, ಅವರ ಆಟವೇ ಅದಕ್ಕೆ ಉತ್ತರಿಸಿತ್ತು.
"ವೈಭವ್ ಸರಿಯಾದ ಹಾದಿಯಲ್ಲೇ ಇದ್ದಾರೆ. ಆದರೆ, ಇನ್ನು ಎರಡು ತಿಂಗಳಲ್ಲಿ ನೀನು ಭಾರತದ ಪರ ಆಡಬೇಕು ಎಂದು ಹೇಳುವುದು ಆ ಮಗುವಿನ ಮೇಲೆ ಅನಗತ್ಯ ಒತ್ತಡ ಹೇರಿದಂತೆ ಆಗುತ್ತದೆ. ಅವರಿಗೆ ಬೆಳೆಯಲು ಸಮಯ ನೀಡಿ," ಎಂದು ಕುಂಬ್ಳೆ ಕಿವಿಮಾತು ಹೇಳಿದ್ದಾರೆ. ಸದ್ಯ ವೈಭವ್ ಸೂರ್ಯವಂಶಿ ಅವರ ಅದ್ಭುತ ಫಾರ್ಮ್ ಮತ್ತು ಅವರ ಭವಿಷ್ಯದ ಕುರಿತಾದ ಈ ದಿಗ್ಗಜರ ಚರ್ಚೆ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications