Vaibhav Suryavanshi: ವೈಭವ್ ಸೂರ್ಯವಂಶಿ 10ನೇ ತರಗತಿ ಪರೀಕ್ಷೆಗೆ ತಯಾರಿ: ಪ್ರಾಂಶುಪಾಲರು ಹೇಳಿದ್ದಿಷ್ಟು
Vaibhav Suryavanshi: ವೈಭವ್ ಸೂರ್ಯವಂಶಿ ಅವರು ಅಂಡರ್ 19 ವಿಶ್ವಕಪ್ 2026 ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಮೂಲಕ ಶತಕ ಸಿಡಿಸಿ ಭಾರತದ ಗೆಲುವಿನ ಪ್ರಮುಖ ರೂಪಾಯಿಯಾದರು. ಆಗಿನಿಂದ ಇವರ ಹೆಸರು ಬರೀ ಭಾರತ ಅಷ್ಟೇ ಅಲ್ಲದೆ, ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅವರ ಆಕ್ರಮಣಕಾರಿ ಆಟಕ್ಕೆ ಅಭಿಮಾನಿಗಳು, ಹಲವು ಕ್ರಿಕೆಟ್ ದಿಗ್ಗಜರು ಸೇರಿದಂತೆ ರಾಜಕೀಯ ಗಣ್ಯವ್ಯಕ್ತಿಗಳಿಂದ ಅಭಿನಂದನೆಗಳ ಸುರಿಮಳೆ ಹರಿದುಬಂದಿದೆ. ಈಗಿದ್ದರೂ ಸಹ ಇದೀಗ ವೈಭವ್ ಪಠ್ಯಪುಸ್ತಕಗಳ ಕಡೆಗೆ ಗಮನಹರಿಸಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಭಾರತೀಯ ಕ್ರಿಕೆಟ್ ಜಗತ್ತಿನಲ್ಲಿ ಯುವ ಸ್ಫೋಟಕ ಪ್ರತಿಭೆಯಾಗಿ ಹೊರಹೊಮ್ಮಿರುವ 15 ವರ್ಷದ ವೈಭವ್ ಸೂರ್ಯವಂಶಿ ಹೆಸರು ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಅಂಡರ್-19 ವಿಶ್ವಕಪ್ 2026 ಫೈನಲ್‌ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಭಾರತದ ಗೆಲುವಿಗೆ ಪ್ರಮುಖ ಕಾರಣರಾದರು. ಈ ಮೂಲಕ ಭಾರತ 6ನೇ ಬಾರಿ ವಿಶ್ವಕಪ್ ಅಂಡರ್-19 ವಿಶ್ವಕಪ್ ಗೆದ್ದ ಕೀರ್ತಿಗೆ ಪಾತ್ರವಾಯಿತು. ಈ ಬಾರಿ ಜಯ ತಂದುಕೊಟ್ಟ ವೈಭವ್, ಇದೀಗ ಮೈದಾನದಿಂದ ಪಠ್ಯಪುಸ್ತಕಗಳತ್ತ ಗಮನ ಹರಿಸಿದ್ದಾನೆ.

10ನೇ ತರಗತಿ ಪರೀಕ್ಷೆ ಬರೆಯಲು ವೈಭವ್ ತಯಾರಿ
ಕ್ರಿಕೆಟ್ ಪಿಚ್‌ನಲ್ಲಿ ಬೌಲರ್‌ಗಳನ್ನು ಕಂಗೆಡಿಸಿದ ಈ ಯುವ ಸ್ಫೋಟಕ ಬ್ಯಾಟರ್, ಈಗ ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಗಳಿಗೆ ಹಾಜರಾಗಲು ಸಿದ್ಧರಾಗಿದ್ದಾರೆ. ಫೆಬ್ರವರಿ 17ರಿಂದ ಆರಂಭ ಆಗಲಿರುವ ಈ ಪರೀಕ್ಷೆಗಳಿಗಾಗಿ ವೈಭವ್ ಈಗಾಗಲೇ ತನ್ನ ಶಾಲೆಯಿಂದ ಪ್ರವೇಶ ಪತ್ರವನ್ನು ಪಡೆದುಕೊಂಡಿದ್ದು, ಇತರ ಸಾಮಾನ್ಯ ವಿದ್ಯಾರ್ಥಿಗಳಂತೆ ಬೆಂಚಿನಲ್ಲಿ ಕುಳಿತು ಪರೀಕ್ಷೆ ಬರೆಯಲು ತಯಾರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕ್ರಿಕೆಟ್ ಹಾಗೂ ಶಿಕ್ಷಣ ಎರಡನ್ನೂ ಸಮತೋಲನವಾಗಿ ಮುಂದುವರಿಸಿಕೊಂಡು ಹೋಗುತ್ತಿರುವ ವೈಭವ್ ಸೂರ್ಯವಂಶಿ ಅವರು, ಯುವ ಪೀಳಿಗೆಯವರಿಗೆ ಸ್ಪೂರ್ತಿಯಾಗಿದ್ದಾರೆ. ಸಾಮಾನ್ಯವಾಗಿ ಈ ಸ್ಟಾರ್ ಕ್ರಿಕೆಟರ್‌ಗೆ ಉತ್ತಮ ಸೌಲಭ್ಯಗಳೊಂದಿಗೆ ವಿಶೇಷ ಕೋಣೆಯಲ್ಲಿ ಪರಿಕ್ಷೆ ಬರೆಸುತ್ತಾರೆ ಎಂಬ ಆಲೋಚನೆಗಳು ಬರುವುದು ಸಹಜ. ಆದ್ದರಿಂದ ವೈಭವ್ ಸೂರ್ಯವಂಶಿ ಪರೀಕ್ಷೆ ನಿಯಮಗಳ ಕುರಿತು ಶಾಲಾ ಪ್ರಾಂಶುಪಾಲರು ಮಹತ್ವದ ಮಾಹಿತಿ ನೀಡಿದ್ದಾರೆ.
ವೈಭವ್ ಪರೀಕ್ಷೆ ಕುರಿತು ಪ್ರಾಂಶುಪಾಲರು ಹೇಳಿದ್ದಿಷ್ಟು
ವೈಭವ್ ಸೂರ್ಯವಂಶಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಆದರೂ, ಶಿಕ್ಷಣ ಸಂಸ್ಥೆಯ ನಿಯಮಗಳ ವಿಷಯದಲ್ಲಿ ಅವರಿಗೆ ಯಾವುದೇ ವಿನಾಯಿತಿ ಇರುವುದಿಲ್ಲ. ಈ ವಿಷಯವನ್ನು ಬಿಹಾರದ ಸಮಸ್ತಿಪುರದಲ್ಲಿರುವ ಪೊದಾರ್ ಇಂಟರ್‌ನ್ಯಾಷನಲ್ ಸ್ಕೂಲ್ ಪ್ರಾಂಶುಪಾಲರಾದ ನೀಲ್ ಕಿಶೋರ್ ಸ್ಪಷ್ಟಪಡಿಸಿದ್ದಾರೆ.
"ಇದು ಅಕಾಡೆಮಿಕ್ ಪಿಚ್, ಕ್ರಿಕೆಟ್ ಮೈದಾನವಲ್ಲ ಎಂದು ಹೇಳಿದ ಅವರು, ಪರೀಕ್ಷಾ ಕೇಂದ್ರದಲ್ಲಿ ವೈಭವ್ ಕೂಡ ಒಬ್ಬ ಸಾಮಾನ್ಯ ವಿದ್ಯಾರ್ಥಿಯಷ್ಟೇ. ಇತರ ವಿದ್ಯಾರ್ಥಿಗಳಿಗೆ ಅನ್ವಯ ಆಗುವ ನಿಯಮಗಳೇ ವೈಭವ್‌ಗೂ ಸಹ ಅನ್ವಯವಾಗುತ್ತವೆ. ಅವರಿಗೆ ಯಾವುದೇ ವಿಶೇಷ ಪ್ರೋಟೋಕಾಲ್ ಅಥವಾ ನಿಯಮಗಳು ಇರುವುದಿಲ್ಲ," ಎಂದು ಪ್ರಾಂಶುಪಾಲರು ತಿಳಿಸಿದರು.
ವೈಭವ್ ಆಟಕ್ಕೆ ಮನಸೋಲದವರೇ ಇಲ್ಲ
ವೈಭವ್ ಸೂರ್ಯವಂಶಿ ಮಾಡಿರುವ ದಾಖಲೆಗಳಿಗೆ ಇಡೀ ದೇಶವೇ ಸೈ ಎಂದಿದೆ. ಇತ್ತೀಚೆಗೆ ಜಿಂಬಾಬ್ವೆಯಲ್ಲಿ ನಡೆದ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಅವರು ಕೇವಲ 80 ಎಸೆತಗಳಲ್ಲಿ 15 ಬೌಂಡರಿ, 15 ಸಿಕ್ಸ್‌ಗಳ ಸಹಿತ 175 ರನ್‌ಗಳ ಭರ್ಜರಿ ಇನ್ನಿಂಗ್ಸ್ ಆಡಿದ್ದು ಎಲ್ಲರ ಗಮನ ಸೆಳೆದಿತ್ತು.
ವಿಶ್ವಕಪ್‌ನಲ್ಲಿ ಅಚ್ಟೇ ಅಲ್ಲದೆ, ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನ ಆಟಗಾರನಾಗಿ ದಾಖಲೆ ಬರೆದ ವೈಭವ್, ರಾಜಸ್ಥಾನ್ ರಾಯಲ್ಸ್ ತಂಡ ಅವರನ್ನು 1.1 ಕೋಟಿ ರೂಪಾಯಿ ಮೊತ್ತಕ್ಕೆ ಖರೀದಿ ಮಾಡಿತ್ತು. ಈ ವೇಳೆ ಗುಜರಾತ್ ಟೈಟಾನ್ಸ್ ವಿರುದ್ಧ ಸೆಂಚುರಿ ಬಾರಿಸಿ, ಟಿ20 ಫಾರ್ಮ್ಯಾಟ್‌ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಶತಕ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಕೂಡ ಪಡೆದುಕೊಂಡಿದ್ದಾರೆ.
ಬ್ಯಾಟ್ ಹಿಡಿಯುವ ಕೈನಲ್ಲಿ ಪೆನ್
ಮೈದಾನದಲ್ಲಿ ಬ್ಯಾಟಿಂಗ್ ಮೂಲಕ ಅಬ್ಬರಿಸಿದ ವೈಭವ್ ಸೂರ್ಯವಂಶಿ, ಇದೀಗ ಪರೀಕ್ಷೆಗಳ ಒತ್ತಡವನ್ನು ಹೇಗೆ ಎದುರಿಸುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಕ್ರಿಕೆಟ್‌ನಲ್ಲಿ ಅನೇಕ ಸವಾಲುಗಳನ್ನು ಧೈರ್ಯವಾಗಿ ಎದುರಿಸಿದ ಈ ಯುವ ಆಟಗಾರ, 10ನೇ ತರಗತಿ ಪರೀಕ್ಷೆಯನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಲಿ ಎಂದು ಅಭಿಮಾನಿಗಳು ಹಾಗೂ ಶಿಕ್ಷಕರು ಹಾರೈಸುತ್ತಿದ್ದಾರೆ. ಈ ಮೂಲಕ ವೈಭವ್ ಸೂರ್ಯವಂಶಿ ಯುವ ಪೀಳಿಗೆಯವರಿಗೆ ಪ್ರೇರಣೆಯಾಗಿದ್ದಾರೆ ಅಂದರೆ ತಪ್ಪಾಗಲಾರದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications