ಗ್ವಾಲಿಯರ್: ಭಾರತ ಹಾಗೂ ಬಾಂಗ್ಲಾದೇಶ ನಡುವಣ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ತಂಡ ಏಳು ವಿಕೆಟ್‌ಗಳಿಂದ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಘಟಿತ ಆಟದ ಪ್ರದರ್ಶನ ನೀಡಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಟಗಾರರ ಒಬ್ಬರು ಭರ್ಜರಿ ಕಂ ಬ್ಯಾಕ್ ಮಾಡಿದ್ದಾರೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 19.5 ಓವರ್‌ಗಳಲ್ಲಿ 127 ರನ್‌ಗಳಿಗೆ ಸರ್ವಪತನ ಕಂಡಿತು. ಗುರಿಯನ್ನು ಬೆನ್ನಟ್ಟಿದ ಭಾರತ ತಂಡ 11.5 ಓವರ್‌ಗಳಲ್ಲಿ 3 ವಿಕೆಟ್‌ಗೆ 132 ರನ್ ಕಲೆ ಹಾಕಿ ಗೆಲುವು ದಾಖಲಿಸಿತು. ಈ ಮೂಲಕ ಟೀಮ್ ಇಂಡಿಯಾ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾಕ್ಕೆ ಮೂರು ವರ್ಷದ ಬಳಿಕ ಆಟಗಾರನೊಬ್ಬ ಮರಳಿದ್ದಾನೆ.

ಟೀಮ್ ಇಂಡಿಯಾದ ಸ್ಪಿನ್ನರ್ ವರುಣ್ ಚಕ್ರವರ್ತಿ ಸುಮಾರು 3 ವರ್ಷಗಳ ಬಳಿಕ ಭಾರತ ತಂಡಕ್ಕೆ ಮರಳಿದ್ದಾರೆ. ಇವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಸತತ ಎರಡು ಋತುಗಳಲ್ಲಿ ಇವರು ಆರ್ಭಟಿಸಿದ್ದರು. ಹೀಗಾಗಿ ಇವರಿಗೆ ಭಾನುವಾರ ಆಡುವ ಹನ್ನೊಂದರ ಬಳಗದಲ್ಲಿ ಆಡುವ ಅವಕಾಶ ಸಿಕ್ಕಿತು. ವರುಣ್ ಚಕ್ರವರ್ತಿ 4 ಓವರ್‌ಗಳಲ್ಲಿ 31 ರನ್ ನೀಡಿ 3 ವಿಕೆಟ್ ಪಡೆದರು.
ಭಾರತದ ಪರ ವರುಣ್ ಚಕ್ರವರ್ತಿ 15 ಪಂದ್ಯಗಳಿಂದ 21 ವಿಕೆಟ್ ಪಡೆದಿದ್ದಾರೆ. ಕೊನೆಯ ಬಾರಿ 2021ರಲ್ಲಿ ವರುಣ್ ತಮ್ಮ ಕೊನೆಯ ಪಂದ್ಯವನ್ನು ಭಾರತದ ಪರ ಆಡಿದ್ದರು. ಈ ಮೂಲಕ ವರುಣ್ 86 ಟಿ20 ಪಂದ್ಯಗಳ ನಂತರ ಟೀಮ್ ಇಂಡಿಯಾಕ್ಕೆ ಮರಳಿದ್ದಾರೆ. ಬಹಳ ಅಂತರದ ಬಳಿಕ ಟಿ20 ಪಂದ್ಯವನ್ನು ಆಡಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ಇವರು ತಮ್ಮದಾಗಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಖಲೀಲ್ ಅಹ್ಮದ್ ಇದ್ದು, ಇವರು 104 ಪಂದ್ಯಗಳ ನಂತರ ತಂಡಕ್ಕೆ ಮರಳಿದ್ದರು.

ಈ ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್ (73 ಪಂದ್ಯ) ಮೂರನೇ ಸ್ಥಾನದಲ್ಲಿದ್ದು, ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಶಿವಂ ದುಬೆ (70 ಪಂದ್ಯ) ನಾಲ್ಕನೇ ಸ್ಥಾನದಲ್ಲಿದ್ದಾರೆ.
ಬಾಂಗ್ಲಾದೇಶದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಲ್‌ರೌಂಡರ್ ಪ್ರದರ್ಶನ ನೀಡಿತು. ಮೊದಲಿಗೆ ಬೌಲರ್‌ಗಳು ಅಬ್ಬರದ ಪ್ರದರ್ಶನ ನೀಡಿದರೆ, ನಂತರ ಬ್ಯಾಟರ್‌ಗಳು ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಿದರು. ಭಾರತ ತಂಡವು 42 ನೇ ಬಾರಿಗೆ ತನ್ನ ಎದುರಾಳಿಯನ್ನು ಆಲ್ ಔಟ್ ಮಾಡಿದೆ. ಈ ಪಟ್ಟಿಯಲ್ಲಿ ಪಾಕ್ ಹಾಗೂ ಭಾರತ ಜಂಟಿಯಾಗಿ ಮೊದಲ ಸ್ಥಾನದಲ್ಲಿದೆ. ಉಳಿದ ಎರಡು ಪಂದ್ಯಗಳಲ್ಲಿ ಇನ್ನೊಮ್ಮೆ ಟೀಮ್ ಇಂಡಿಯಾ ಈ ಸಾಧನೆ ಮಾಡಿದರೆ, ದಾಖಲೆ ನಿರ್ಮಿಸಲಿದೆ.