ಟೀಮ್ ಇಂಡಿಯಾಕ್ಕೆ ಕಂ ಬ್ಯಾಕ್ ಹೇಗೆ ಮಾಡಬೇಕು ಎಂಬುದನ್ನು ಈ ಪ್ಲೇಯರ್‌ನನ್ನು ನೋಡಿ ಕಲಿಯಬೇಕು. 2021ರಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಪದಾರ್ಪಣೆ ಮಾಡಿ, ಕ್ಷಮತೆ ಸಾಬೀತು ಪಡಿಸುವಲ್ಲಿ ವಿಫಲವಾಗಿದ್ದ ಈ ಮಿಸ್ಟರಿ ಸ್ಪಿನ್ ಬೌಲರ್ ಈಗ ಕಮಾಲ್ ಪ್ರದರ್ಶನ ನೀಡುತ್ತಿದ್ದಾರೆ. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡಿರುವ ಟೀಮ್ ಇಂಡಿಯಾದ ಯುವ ಸ್ಪಿನ್ನರ್ ದಕ್ಷಿಣ ಆಫ್ರಿಕಾ ಪ್ರವಾಸದಲ್ಲೂ ತನ್ನ ಫಿರ್ಕಿ ಪ್ರದರ್ಶನ ನೀಡಿದ್ದಾರೆ.
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ನಾಲ್ಕು ಪಂದ್ಯಗಳ ಸರಣಿ ನಡೆಯುತ್ತಿದೆ. ಈ ಸರಣಿಯ ಎರಡೂ ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದೊಂದು ಗೆಲುವು ದಾಖಲಿಸಿದ್ದು, ಸರಣಿ ಸಮಬಲ ಸಾಧಿಸಿವೆ. ಬುಧವಾರ (ನ.13) ರಂದು ಸೆಂಚುರಿಯನ್‌ನ ಸೂಪರ್ ಸ್ಪೋರ್ಟ್ ಪಾರ್ಕ್‌ನಲ್ಲಿ ಮೂರನೇ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಬದಲಾವಣೆಯೊಂದಿಗೆ ಅಂಗಳಕ್ಕೆ ಇಳಿಯವು ಸಾಧ್ಯತೆ ಇದೆ. ಈ ಪಂದ್ಯದಲ್ಲಿ ವರುಣ್ ಚಕ್ರವರ್ತಿ ದಾಖಲೆಯನ್ನು ಬರೆಯುವ ಸನಿಹದಲ್ಲಿದ್ದಾರೆ.

ವರುಣ್ ಚಕ್ರವರ್ತಿ ತಮ್ಮ ಮಾರಕ ಸ್ಪಿನ್ ಬೌಲಿಂಗ್ ದಾಳಿಯಿಂದ ಎದುರಾಳಿಗಳನ್ನು ಕಾಡುವಲ್ಲಿ ಯಶಸ್ವಿಯಾದರೆ, ಮುಂದಿನ ಎರಡು ಪಂದ್ಯಗಳಲ್ಲಿ ಇವರು, ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಅವರ ದೊಡ್ಡ ದಾಖಲೆಯನ್ನು ಅಳಿಸಿ ಹಾಕಬಹುದಾಗಿದೆ.
ಸದ್ಯ ವರುಣ್ ಚಕ್ರವರ್ತಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಇವರು ಆಡಿದ ಮೊದಲ ಪಂದ್ಯದಲ್ಲಿ ಮೂರು ವಿಕೆಟ್ ಪಡೆದಿದ್ದರು. ಅಲ್ಲದೆ ಎರಡನೇ ಟಿ20 ಪಂದ್ಯದಲ್ಲಿ ಇವರು 5 ವಿಕೆಟ್ ಪಡೆದಿದ್ದರು. ಇವರು ದ್ವಿಪಕ್ಷೀ ಸರಣಿಯಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಕೀರ್ತಿಯನ್ನು ತಮ್ಮದಾಗಿಸಿಕೊಳ್ಳಬಹುದು. ಈ ಟೂರ್ನಿಯಲ್ಲಿ ಸದ್ಯ ವರುಣ್ ಬುಟ್ಟಿಯಲ್ಲಿ 8 ವಿಕೆಟ್‌ಗಳು ಇವೆ. ಇನ್ನು ಎರಡು ಪಂದ್ಯದಲ್ಲಿ ಎರಡು ವಿಕೆಟ್ ಪಡೆದಿದ್ದೇ ಆದಲ್ಲಿ ಇತಿಹಾಸದ ಪುಟ ಸೇರಿಸಬಹುದು.

ಇದಕ್ಕೂ ಮೊದಲು ಅಶ್ವಿನ್ ಹಾಗೂ ರವಿ ಬಿಷ್ಣೋಯ್ ಅವರು 9 ವಿಕೆಟ್ ಕಬಳಿಸಿದ್ದಾರೆ. ಟಿ20 ಸರಣಿಯಲ್ಲಿ ಸ್ಪಿನ್ ಮಾಂತ್ರಿಕ ಅಶ್ವಿನ್ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಅಲ್ಲದೆ ರವಿ ಬಿಷ್ಣೋಯ್ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಈ ಸಾಧನೆ ಮಾಡಿದ್ದರು.
ಐಪಿಎಲ್ ನಲ್ಲಿ ಕಳೆದ ಆವೃತ್ತಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ವರುಣ್ ಚಕ್ರವರ್ತಿ ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವಿನಲ್ಲಿ ಮಿಂಚಿದ್ದರು. ಇವರು 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಡಿದ 14 ಪಂದ್ಯಗಳಲ್ಲಿ 21 ವಿಕೆಟ್ ಕಬಳಿಸಿದ್ದಾರೆ. ಒಟ್ಟಾರೆ ಐಪಿಎಲ್‌ನಲ್ಲಿ 70 ಪಂದ್ಯಗಳನ್ನು ಆಡಿರುವ ವರುಣ್ 83 ವಿಕೆಟ್ ಕಿತ್ತಿದ್ದಾರೆ. ಇವರ ಈ ಸ್ಥಿರ ಪ್ರದರ್ಶನದ ಫಲವಾಗಿ ಇವರಿಗೆ ಮತ್ತೆ ಭಾರತ ತಂಡದಲ್ಲಿ ಆಡುವ ಅವಕಾಶವನ್ನು ನೀಡಲಾಯಿತು. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ವರುಣ್ ಸದ್ಯ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ.