ಗೃಹ ಸಚಿವರನ್ನು ಭೇಟಿಯಾದ ವೆಂಕಟೇಶ್ ಪ್ರಸಾದ್, ಆರ್‌ಸಿಬಿ ಮ್ಯಾನೇಜ್ಮೆಂಟ್: ಗುಡ್ ನ್ಯೂಸ್ ಸಿಗುವ ಸಾಧ್ಯತೆ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ದಿನ ಗಣನೆ ಆರಂಭವಾಗಿದ್ದು, ಬಿಸಿಸಿಐ ತೆರೆ ಮರೆಯ ಕಸರತ್ತುಗಳನ್ನು ನಡೆಸುತ್ತಿದೆ. ಇನ್ನೂ ಆರ್‌ಸಿಬಿ ಪಂದ್ಯಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತವೆಯೋ ಇಲ್ಲವೋ ಎಂಬ ಬಗ್ಗೆ ಇನ್ನು ಸ್ಪಷ್ಟತೆ ಸಿಕ್ಕಿಲ್ಲ. ದಿನಕ್ಕೊಂದು ಸಭೆಗಳು ನಡೆಯುತ್ತಿದ್ದು, ಶತಾಯಗಾತಾಯ ಐಪಿಎಲ್ ಪಂದ್ಯಗಳನ್ನು ಚಿನ್ನಸ್ವಾಮಿಯಲ್ಲಿ ಆಯೋಜಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಪ್ರಯತ್ನ ನಡೆಸಿದ್ದಾರೆ. ಹೀಗಾಗಿಯೇ ಈಗಾಗಲೇ ಚಿನ್ನಸ್ವಾಮಿ ಅಂಗಳದಲ್ಲಿ ದುರಸ್ತಿ ಕಾರ್ಯಗಳು ಸಹ ಭರದಿಂದ ಸಾಗಿವೆ.
ಸೋಮವಾರ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹಾಗೂ ಆರ್‌ಸಿಬಿ ಮ್ಯಾನೇಜ್ಮೆಂಟ್ ಕರ್ನಾಟಕದ ಗೃಹ ಸಚಿವ ಪರಮೇಶ್ವರ್ ಅವರನ್ನು ಭೇಟಿ ಮಾಡಿತು. ಈ ವೇಳೆ ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸುವ ಕುರಿತಾಗಿ ಚರ್ಚೆ ನಡೆಯಿತು. ಬರುವ ಫೆ.12 ರಂದು ರಾಜ್ಯ ಸರ್ಕಾರ ನೇಮಿಸಿದ ಸಮಿತಿಯೊಂದಿಗೆ ಸಭೆ ನಡೆಸಿ ತೀರ್ಮಾನಕ್ಕೆ ಬರಲಾಗುವುದು ಎಂದು ತಿಳಿಸಿದರು.

ಪರಮೇಶ್ವರ್ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ವೆಂಕಟೇಶ್ ಪ್ರಸಾದ್, ನಾವು ನಮ್ಮ ನಿರ್ಧಾರವನ್ನು ಬಿಸಿಸಿಐಗೆ ತಿಳಿಸಬೇಕಿದೆ. ಹೀಗಾಗಿ ನಮ್ಮ ತಂಡ ಗೃಹ ಸಚಿವರನ್ನು ಭೇಟಿಯಾಯಿತು. ಫೆ.12 ರಂದು ಸಭೆಯನ್ನು ನಡೆಸಿ ಆದಷ್ಟು ಶೀಘ್ರದಲ್ಲಿ ಒಂದು ನಿರ್ಧಾರಕ್ಕೆ ಬರುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ಕೆಎಸ್‌ಸಿಎ ಅಧ್ಯಕ್ಷರು ತಿಳಿಸಿದರು.
ನಾವು ಈಗಾಗಲೇ ರಾಜ್ಯ ಸರ್ಕಾರಕ್ಕೆ ಮಾತು ಕೊಟ್ಟಿದ್ದೇವೆ. ನಿಮ್ಮ ಸಲಹೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ ಎಂದು ಈಗಾಗಲೇ ತಿಳಿಸಿದ್ದೇವೆ. ಈ ನಿಟ್ಟಿನಲ್ಲಿ ಕಾರ್ಯಗಳ ನಡೆದಿವೆ. ಇನ್ನು ಎರಡು ಮೂರು ದಿನಗಳಲ್ಲಿ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ಇದೆ ಎಂದು ವೆಂಕಟೇಶ್ ಪ್ರಸಾದ್ ತಿಳಿಸಿದ್ದಾರೆ.
ಬುಧವಾರ ಸಭೆ
ಬಳಿಕ ಮಾತನಾಡಿರುವ ಗೃಹ ಸಚಿವ ಜಿ.ಪರಮೇಶ್ವರ್, ನ್ಯಾ.ಕುನ್ಹಾ ವರದಿಯ ಶಿಫಾರಸು ಪಾಲಿಸಬೇಕು ಎಂದು ಈಗಾಗಲೇ ನಾವು ತಿಳಿಸಿದ್ದೇವೆ. ಇದಕ್ಕಾಗಿ ಈಗಾಗಲೇ ಸರ್ಕಾರದಿಂದ ಸಮಿತಿಯನ್ನು ರಚಿಸಲಾಗಿದೆ. ಸರ್ಕಾರ ನೇಮಿಸಿದ ಸಮಿತಿ ಸಹ ಕೆಲವು ಶಿಫಾರಸ್ಸುಗಳನ್ನು ಮಾಡಿದೆ. ಇನ್ನೇನು ಐಪಿಎಲ್ ಪಂದ್ಯಗಳು ಆರಂಭವಾಗಲಿವೆ. ಇದಕ್ಕಾಗಿ ಸರ್ಕಾರದಿಂದ ಕ್ಲಿಯರೆನ್ಸ್ ಸಿಗಬೇಕಿದೆ. ಈ ಬಗ್ಗೆ ಮಾತನಾಡಲು ಬುಧವಾರ ಸಭೆ ಕರೆಯಲಾಗಿದೆ. ಸರ್ಕಾರದ ಹಂತದಲ್ಲಿ ಏನು ಮಾಡಬೇಕೋ, ಅವರಿಗೆ ಏನು ಸೂಚನೆ ಕೊಡಬೇಕೋ ಅಂತ ನೋಡ್ತೇವೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ಧರಾಮಯ್ಯ ಅವರೊಂದಿಗೆಯೂ ಚರ್ಚೆ ನಡೆಸಬೇಕಿದೆ ಎಂದಿದ್ದಾರೆ.
ಸರ್ಕಾರ ಸೂಚಿಸಿರುವ ಶಿಫಾರಸ್ಸುಗಳನ್ನು ಎಷ್ಟರ ಮಟ್ಟಿಗೆ ಕೆಎಸ್‌ಸಿಎ ಪೂರೈಸಿದೆ ಎಂದು ನೋಡಿ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಾಗುತ್ತದೆ. ಆರ್‌ಸಿಬಿ ಪಂದ್ಯಗಳು ಇಲ್ಲಿಯೇ ನಡೆಯಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಕಳೆದ ಬಾರಿ ನಡೆದ ಘಟನೆ ಮರುಕಳಿಸದಂತೆ ಸುರಕ್ಷತೆಯನ್ನು ಸಹ ವಹಿಸಬೇಕಿದೆ ಎಂದು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications