Vijay Hazare Trophy: ಸೆಮಿಫೈನಲ್‌ನಲ್ಲಿ ಕರ್ನಾಟಕಕ್ಕೆ ಆಘಾತ: ತವರಿನ ತಂಡದ ವಿರುದ್ಧ ಸಮರ್ಥ ಅಬ್ಬರ
ಬೆಂಗಳೂರು: ಆರಂಭಿಕ ಅಮನ್ ಮೊಖಡೆ ಬಾರಿಸಿದ ಭರ್ಜರಿ ಶತಕ ಹಾಗೂ ರವಿಕುಮಾರ್ ಸಮರ್ಥ್ ಅವರು ಬಾರಿಸಿದ ಸೊಗಸಾದ ಅರ್ಧಶತಕದ ನೆರವಿನಿಂದ ವಿಜಯ್ ಹಜಾರೆ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ವಿದರ್ಭ ತಂಡ 6 ವಿಕೆಟ್‌ಗಳಿಂದ ಕರ್ನಾಟಕ ತಂಡವನ್ನು ಮಣಿಸಿ ಫೈನಲ್‌ಗೆ ಅರ್ಹತೆ ಪಡೆದಿದೆ. ಈ ಮೂಲಕ ವಿದರ್ಭ ಇದೇ ಮೊದಲ ಬಾರಿಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡವನ್ನು ಸೋಲಿಸಿತು.
ಟಾಸ್ ಗೆದ್ದ ಕರ್ನಾಟಕ ತಂಡ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ತನ್ನದಾಗಿಸಿಕೊಂಡಿತು. ಆರಂಭಿಕರಾದ ಮಯಾಂಕ್ ಅಗರ್‌ವಾಲ್ (9), ದೇವದತ್ ಪಡಿಕ್ಕಲ್ (4) ಜವಾಬ್ದಾರಿ ಮರೆತರು. ಟೂರ್ನಿಯುದಕ್ಕೂ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ದೇವದತ್ ಪಡಿಕ್ಕಲ್ ಸೆಮಿಫೈನಲ್ ಪಂದ್ಯದಲ್ಲಿ ಅಬ್ಬರಿಸಲಿಲ್ಲ. 20 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕರ್ನಾಟಕ ತಂಡಕ್ಕೆ 20 ವರ್ಷದ ಯುವ ಆಟಗಾರ ಧ್ರುವ್ ಪ್ರಭಾಕರ್ ಹಾಗೂ ಕರುಣ್ ನಾಯರ್ ಜೋಡಿ ಆಧಾರವಾಯಿತು. ಈ ಜೋಡಿ ತಂಡಕ್ಕೆ 54 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ಧ್ರುವ್ ಪ್ರಭಾಕರ್ 5 ಬೌಂಡರಿ ಸಹಾಯದಿಂದ 28 ರನ್ ಬಾರಿಸಿ ಔಟ್ ಆದರು.

4ನೇ ವಿಕೆಟ್‌ಗೆ ಭರವಸೆಯ ಆಟಗಾರರಾದ ಕರುಣ್ ನಾಯರ್ ಹಾಗೂ ಕೃಷ್ಣಾ ಶ್ರೀಜೇತ್ ಜೋಡಿ ತಂಡಕ್ಕೆ ಉತ್ತಮ ಜೊತೆಯಟದ ಕಾಣಿಕೆ ನೀಡಿತು. ಈ ಜೋಡಿಯ ಸ್ಥಿರ ಬ್ಯಾಟಿಂಗ್ ಪ್ರದರ್ಶನದ ಫಲವಾಗಿ ಕರ್ನಾಟಕ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಂತೆ ಆಯಿತು. ಈ ಜೋಡಿ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾಯಿತು. ಈ ವೇಳೆ 8 ಬೌಂಡರಿ, 1 ಸಿಕ್ಸರ್ ಸಿಡಿಸಿ ಉತ್ತಮವಾಗಿ ಆಡುತ್ತಿದ್ದ ಕರುಣ್ ನಾಯರ್ ಇಲ್ಲದ ಹೊಡೆತಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದರು.
ಕೃಷ್ಣಾ ಶ್ರೀಜೇತ್ 53 ಎಸೆತಗಳಲ್ಲಿ 7 ಬೌಂಡರಿ ನೆರವಿನಿಂದ 54 ಬಾರಿಸಿ ಔಟ್ ಆದರು. ಅಭಿನವ್ ಮನೋಹರ್ 26, ವಿಜಯ್‌ಕುಮಾರ್ ವೈಶಾಖ್ 17 ರನ್ ಸಿಡಿಸಿದರು. ಅಂತಿಮವಾಗಿ ಕರ್ನಾಟಕ 49.4 ಓವರ್‌ಗಳಲ್ಲಿ 280 ರನ್‌ಗಳಿಗೆ ಆಲೌಟ್ ಆಯಿತು. ವಿದರ್ಭ ಪರ ದರ್ಶನ್ ನಲ್ಕಂಡೆ 48 ರನ್ ನೀಡಿ 5 ವಿಕೆಟ್ ಕಬಳಿಸಿದರು.
ಅಮನ್ ಶತಕದ ಆಟ
ಗುರಿಯನ್ನು ಹಿಂಬಾಲಿಸಿದ ವಿದರ್ಭ ತಂಡದ ಆರಂಭಿಕರಾದ ಅಥರ್ವ ತೈಡೆ (6) ರನ್ ಕಲೆ ಹಾಕುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ಅಮನ್ ಮೊಖಡೆ ಹಾಗೂ ಧ್ರುವ್ ಶೋರೆ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಮಿಡ್ಲ್ ಓವರ್‌ನಲ್ಲಿ ವಿಕೆಟ್ ಬೀಳದಂತೆ ನೋಡಿಕೊಂಡಿತು. ಈ ಜೋಡಿ 98 ರನ್‌ಗಳ ಕಾಣಿಕೆ ನೀಡಿತು. ಧ್ರುವ್ ಶೋರೆ 5 ಬೌಂಡರಿ ಸಹಾಯದಿಂದ 47 ರನ್ ಸೇರಿಸಿದರು.

3ನೇ ವಿಕೆಟ್‌ಗೆ ಅಮನ್ ಮೊಖಡೆ ಹಾಗೂ ರವಿಕುಮಾರ್ ಸಮರ್ಥ್ ಜೋಡಿ ಸ್ಥಿರ ಬ್ಯಾಟಿಂಗ್ ನಡೆಸಿತು. ಈ ಜೋಡಿ 147 ರನ್ ಗಳ ಜೊತೆಯಾಟವನ್ನು ನೀಡಿತು. ಈ ವೇಳೆ ಅಮನ್ ಮೊಖಡೆ 12 ಬೌಂಡರಿ, 2 ಸಿಕ್ಸರ್ ಸಹಾಯದಿಂದ 138 ರನ್ ಬಾರಿಸಿ ಗೆಲುವಿನಲ್ಲಿ ಮಿಂಚಿದರು.
ಕರ್ನಾಟಕದ ಪರ ಆಡಿ ಸೈ ಎನಿಸಿಕೊಂಡಿದ್ದ ರವಿಕುಮಾರ್ ಸಮರ್ಥ್ ಈಗ ವಿದರ್ಭ ತಂಡದ ಪರ ಆಡುತ್ತಿದ್ದಾರೆ. ತವರಿನ ತಂಡದ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿ ಗೆಲುವಿನಲ್ಲಿ ಮಿಂಚಿದರು. ಇವರು 7 ಬೌಂಡರಿ ನೆರವಿನಿಂದ ಅಜೇಯ 76 ರನ್ ಸಿಡಿಸಿದರು. ಅಂತಿಮವಾಗಿ ವಿದರ್ಭ 46.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 284 ರನ್ ಬಾರಿಸಿ ಮಿಂಚಿದರು.
ಎರಡನೇ ಸೆಮಿಫೈನಲ್
ಶುಕ್ರವಾರ ಸೌರಾಷ್ಟ್ರ ಹಾಗೂ ಪಂಜಾಬ್ ತಂಡಗಳು ವಿಜಯ್ ಹಜಾರೆ ಟ್ರೋಫಿಯ ಎರಡನೇ ಪಂದ್ಯದಲ್ಲಿ ಕಾದಾಟವನ್ನು ನಡೆಸಲಿವೆ. ಈ ಪಂದ್ಯದಲ್ಲಿ ಜಯ ಸಾಧಿಸಿದ ತಂಡ ಫೈನಲ್‌ನಲ್ಲಿ ವಿದರ್ಭ ತಂಡದ ವಿರುದ್ಧ ಕಾದಾಟ ನಡೆಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications