Vijay Hazare Trophy Final: ಸೌರಾಷ್ಟ್ರ ಮಣಿಸಿದ ವಿದರ್ಭಗೆ ಪ್ರಶಸ್ತಿ
ಬೆಂಗಳೂರು: ವಿಜಯ್ ಹಜಾರೆ ಏಕದಿನ ಟ್ರೋಫಿಯಲ್ಲಿ ವಿದರ್ಭ ಇತಿಹಾಸ ನಿರ್ಮಿಸಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ತಂಡವನ್ನು 38 ರನ್‌ಗಳಿಂದ ಸೋಲಿಸಿ ವಿದರ್ಭ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ವಿದರ್ಭ ತಂಡ ಇದೇ ಮೊದಲ ಬಾರಿಗೆ ವಿಜಯ್ ಹಜಾರೆ ಟ್ರೋಫಿಗೆ ಮುತ್ತಿಟ್ಟಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ವಿದರ್ಭ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಅಥರ್ವ ತೈದೆ ಮತ್ತು ಅಮನ್ ಮೋಖಡೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 17.2 ಓವರ್‌ಗಳಲ್ಲಿ 80 ರನ್ ಜೊತೆಯಾಟದ ಕಾಣಿಕೆ ನೀಡಿತು. ಈ ಹಂತದಲ್ಲಿ ಭರವಸೆಯ ಆಟಗಾರ ಅಮನ್ ಮೋಖಡೆ 33 ರನ್ ಬಾರಿಸಿ ಔಟ್ ಆದರು.

ಎರಡನೇ ವಿಕೆಟ್‌ಗೆ ಅಥರ್ವ ಅವರನ್ನು ಸೇರಿಕೊಂಡ ಯಶ್ ರಾಥೋಡ್ ಸೊಗಸಾದ ಬ್ಯಾಟಿಂಗ್ ನಡೆಸಿದರು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಸೌರಾಷ್ಟ್ರ ಬೌಲರ್‌ಗಳು ವಿಫಲರಾದರು. ಈ ಜೋಡಿ ಸಹ ಎರಡನೇ ವಿಕೆಟ್‌ಗೆ 133 ರನ್ ಜೊತೆಯಾಟವನ್ನು ನೀಡಿತು. ಆರಂಭಿಕ ಅಥರ್ವ ಫೈನಲ್ ಪಂದ್ಯದಲ್ಲಿ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದರು. ಇವರು 118 ಎಸೆತಗಳಲ್ಲಿ 15 ಬೌಂಡರಿ, 3 ಸಿಕ್ಸರ್ ಸಹಾಯದಿಂದ 128 ರನ್ ಸಿಡಿಸಿ ಔಟ್ ಆದರು.
ವಿದರ್ಭ ಪರ ಯಶ್ ರಥೋಡ್ 54, ಕನ್ನಡಿಗ ರವಿಕುಮಾರ್ ಸಮರ್ಥ್ 25, ಹರ್ಷ ದುಬೇ 17, ದರ್ಶನ್ ನಲ್ಕಂಡೆ 14 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ವಿದರ್ಭ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 317 ರನ್ ಸಿಡಿಸಿತು.
ರನ್ ಕಲೆ ಹಾಕುವಲ್ಲಿ ಎಡವಿದ ಸೌರಾಷ್ಟ್ರ
ಗುರಿಯನ್ನು ಬೆನ್ನಟ್ಟಿದ ಸೌರಾಷ್ಟ್ರ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕರಾದ ಹಾರ್ವಿಕ್ ದೇಸಾಯಿ (20), ವಿಶ್ವರಾಜ್ ಜಡೇಜಾ (9), ಸಮರ್ ಗಜ್ಜರ್ (25), ಪಾರ್ಶ್ವ ರಾಜ್ ರಾಣಾ (7) ರನ್ ಕಲೆ ಹಾಕುವಲ್ಲಿ ವಿಫಲರಾದರು. 5ನೇ ವಿಕೆಟ್‌ಗೆ ಪ್ರೇರಕ್ ಮಂಕಡ್, ಚಿರಾಗ್ ಜಾನಿ ಉತ್ತಮ ಜೊತೆಯಾಟವನ್ನು ನೀಡಿದರು. ತಂಡಕ್ಕೆ ಈ ಜೋಡಿ ಅರ್ಧಶತಕದ ಜೊತೆಯಾಟವನ್ನು ನೀಡಿತು. ಈ ಹಂತದಲ್ಲಿ ಪ್ರೇರಕ್ ಮಂಕಡ್ 10 ಬೌಂಡರಿ ನೆರವಿನಿಂದ 88 ರನ್ ಸಿಡಿಸಿದರು. ಚಿರಾಗ್ ಜಾನಿ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 64 ರನ್ ಬಾರಿಸಿದರು. ರುಚಿತ್ ಅಹಿರ್ 21 ರನ್ ಸಿಡಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಅಂತಿಮವಾಗಿ ಸೌರಾಷ್ಟ್ರ 48.5 ಓವರ್‌ಗಳಲ್ಲಿ 279 ರನ್‌ಗಳಿಗೆ ಆಲೌಟ್ ಆಯಿತು. ವಿದರ್ಭ ತಂಡದ ಪರ ಯಶ್ ಠಾಕೂರ್ 4, ನಚಿಕೇತ್ ಭೂತೆ 3 ವಿಕೆಟ್ ಕಬಳಿಸಿ ಜಯದಲ್ಲಿ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications