ದೇಶೀಯ ರಣಜಿ ಟೂರ್ನಿಯಲ್ಲಿ ವಿದರ್ಭ, ಮುಂಬೈ ಹಾಗೂ ಗುಜರಾತ್ ತಂಡಗಳು ಸೆಮಿಫೈನಲ್ ಹಂತವನ್ನು ಪ್ರವೇಶಿಸಿವೆ. ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ವಿದರ್ಭ 198 ರನ್‌ಗಳಿಂದ ತಮಿಳುನಾಡು ತಂಡವನ್ನು ಮಣಿಸಿ ಉಪಾಂತ್ಯ ತಲುಪಿತು. ಇನ್ನು ಹರಿಯಾಣ ತಂಡದ ವಿರುದ್ಧ 152 ರನ್‌ಗಳ ಅಮೋಘ ಜಯ ಸಾಧಿಸಿದ ಮುಂಬೈ ಹಾಗೂ ಸೌರಾಷ್ಟ್ರ ವಿರುದ್ಧ ಇನಿಂಗ್ಸ್ ಹಾಗೂ 98 ರನ್‌ಗಳ ಜಯ ಸಾಧಿಸಿದ ಗುಜರಾತ್ ಸೆಮಿಫೈನಲ್ ಹಂತವನ್ನು ಪ್ರವೇಶಿಸಿವೆ.
ನಾಗ್ಪುರದಲ್ಲಿ ನಡೆದ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿದರ್ಭ ಮೊದಲು ಬ್ಯಾಟ್ ಮಾಡಿ 353 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್ ಆರಂಭಿಸಿದ ತಮಿಳುನಾಡು 225 ರನ್‌ಗಳಿಗೆ ಸರ್ವಪತನ ಕಂಡಿತು. ಇನಿಂಗ್ಸ್ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ವಿದರ್ಭ ಸೋಮವಾರ ದಿನದಾಟದ ಅಂತ್ಯಕ್ಕೆ 5 ವಿಕೆಟ್‌ಗೆ 169 ರನ್ ಕಲೆ ಹಾಕಿತ್ತು.

ಮಂಗಳವಾರ ಆಟವನ್ನು ಮುಂದುವರಿಸಿದ ವಿದರ್ಭ 272 ರನ್‌ಗಳಿಗೆ ಆಲೌಟ್ ಆಯಿತು. 400 ರನ್‌ಗಳ ಸವಾಲಿನ ಗುರಿಯನ್ನು ಹಿಂಬಾಲಿಸಿದ ತಮಿಳುನಾಡು ತಂಡ ನಚಿಕೆತ್ ಹಾಗೂ ಹರ್ಷ ದುಬೆ ಅವರ ಬಿಗುವಿನ ದಾಳಿಗೆ ನಲುಗಿತು. ಈ ಇಬ್ಬರೂ ಆಟಗಾರರು ತಲಾ ಮೂರು ವಿಕೆಟ್ ಕಬಳಿಸಿದರು. ಪರಿಣಾಮ ವಿದರ್ಭ 198 ರನ್ ಜಯ ಸಾಧಿಸಿತು.
ಮುಂಬೈ ಮೊದಲ ಇನಿಂಗ್ಸ್‌ನಲ್ಲಿ 315 ರನ್ ಸಿಡಿಸಿದ್ದರು. ಇನ್ನು ಹರಿಯಾಣ ಮೊದಲ ಇನಿಂಗ್ಸ್‌ನಲ್ಲಿ 301 ರನ್ ಸಿಡಿಸಿತು. 14 ರನ್‌ಗಳ ಅಲ್ಪ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ನ್ನು ಮುಂಬೈ ಮುಂದುವರೆಸಿತು. ಮಂಗಳವಾರ ಮುಂಬೈ 4 ವಿಕೆಟ್ ನಷ್ಟಕ್ಕೆ 278 ರನ್‌ಗಳಿಂದ ಆಟ ಮುಂದುವರಿಸಿ, 339 ರನ್‌ಗಳಿಗೆ ಆಲೌಟ್ ಆಯಿತು.
353 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಹರಿಯಾಣಗೆ ಎರಡನೇ ಇನಿಂಗ್ಸ್‌ನಲ್ಲಿ ಲಕ್ಷ್ಯ ದಲಾಲ್ ಹಾಗೂ ಸುಮಿತ್ ಕುಮಾರ್ ಅರ್ಧಶತಕ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಅಂತಿಮವಾಗಿ ಹರಿಯಾಣ 201 ರನ್‌ಗಳಿಗೆ ಆಲೌಟ್ ಆಯಿತು. ಮುಂಬೈ ಪರ ರಾಯ್‌ಸ್ಟನ್ ಡಯಾಸ್ 5 ಹಗೂ ಶಾರ್ದೂಲ್ ಠಾಕೂರ್ 3 ವಿಕೆಟ್ ಕಬಳಿಸಿದರು.

ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌರಾಷ್ಟ್ರ 216 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್ ಆರಂಭಿಸಿದ ಗುಜರಾತ್ 511 ರನ್‌ಗಳ ಮುನ್ನಡೆ ಸಾಧಿಸಿತು. ಭಾರೀ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಸೌರಾಷ್ಟ್ರಕ್ಕೆ ಪೆಟ್ಟು ಬಿದ್ದಿತು. ಮಂಗಳವಾರ ವಿಕೆಟ್ ನಷ್ಟವಿಲ್ಲದೆ 33 ರನ್‌ಗಳಿಂದ ಆಟ ಮುಂದುವರಿಸಿದ ಸೌರಾಷ್ಟ್ರ 197 ರನ್‌ಗಳಿಗೆ ಆಲೌಟ್ ಆಯಿತು. ಗುಜರಾತ್ ತಂಡದ ಅನುಭವಿ ಬೌಲರ್‌ಗಳು ಅಮೋಘ ದಾಳಿ ನಡೆಸಿದರು.