Vijay Hazare Trophy 2023: ಬಿಹಾರ ವಿರುದ್ಧ ಅಬ್ಬರಿಸಿದ ದೇವದತ್ ಪಡಿಕ್ಕಲ್; ಕರ್ನಾಟಕಕ್ಕೆ ಸತತ 4ನೇ ಗೆಲುವು
ಬುಧವಾರ, ನವೆಂಬರ್ 29ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಗ್ರೌಂಡ್ ಎ ನಲ್ಲಿ ನಡೆದ 2023ರ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯ ಸಿ ಗುಂಪಿನ ಲೀಗ್ ಪಂದ್ಯದಲ್ಲಿ ಬಿಹಾರ ವಿರುದ್ಧ ಕರ್ನಾಟಕ ತಂಡವು 7 ವಿಕೆಟ್‌ಗಳ ಬರ್ಜರಿ ಗೆಲುವು ಸಾಧಿಸಿತು.
ಈ ಮೂಲಕ ಪ್ರಸಕ್ತ ಪಂದ್ಯಾವಳಿಯಲ್ಲಿ ಸತತ ನಾಲ್ಕನೇ ಗೆಲುವು ದಾಖಲಿಸುವ ಮೂಲಕ, ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡವು ಸಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಿಹಾರ ತಂಡ ಸಕಿಬುಲ್ ಗನಿ ಅವರ ಅಮೋಘ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 217 ರನ್‌ಗಳಿಗೆ ನಿಯಂತ್ರಣಗೊಂಡಿತು.
218 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ದೇವದತ್ ಪಡಿಕ್ಕಲ್ ಅವರ ಸ್ಫೋಟಕ ಅರ್ಧಶತಕದ ಸಹಾಯದಿಂದ ಕೇವಲ 33.4 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.
ಬಿಹಾರ ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ಶರ್ಮನ್ ನಿಗ್ರೋಧ್ 21 ರನ್ ಮತ್ತು ಅಲೋಕ್ ಕುಮಾರ್ 7 ರನ್ ಗಳಿಸಿ ಔಟಾದರೆ, ನಂತರ ಬಂದ ಬಬುಲ್ ಕುಮಾರ್ 17 ರನ್ ಗಳಿಸಿದರು.
ಆ ಬಳಿಕ ಕ್ರೀಸ್‌ಗೆ ಬಂದ ಸಕಿಬುಲ್ ಗನಿ 100 ಎಸೆತಗಳಲ್ಲಿ 9 ಬೌಂಡರಿ ಹಾಗೂ 5 ಸಿಕ್ಸರ್‌ಗಳ ಸಮೇತ ಅಜೇಯ 113 ರನ್ ಬಾರಿಸಿ ತಂಡದ ಮೊತ್ತ 200ರ ಗಡಿ ದಾಟಲು ನೆರವಾದರು.
ನಂತರ ಬಂದ ಯಾವ ಬ್ಯಾಟರ್‌ಗಳ ಎರಡಂಕಿ ಮೊತ್ತ ದಾಟಲಿಲ್ಲ. ಗಮನಾರ್ಹವಾಗಿ ಮೂರು ಬ್ಯಾಟರ್‌ಗಳು ಸೊನ್ನೆ ಸುತ್ತಿದರು. ಕೊನೆಯಲ್ಲಿ ನಾಯಕ ಅಶುತೋಷ್ ಅಮನ್ 51 ಎಸೆತಗಳನ್ನು ಎದುರಿಸಿ 2 ಸಿಕ್ಸರ್‌ಗಳ ಮೂಲಕ 33 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ಕರ್ನಾಟಕ ಪರ ಜಗದೀಶ್ ಸುಚಿತ್ 10 ಓವರ್‌ಗಳಲ್ಲಿ 27 ರನ್ ನೀಡಿ 3 ವಿಕೆಟ್ ಪಡೆದರೆ, ವಿಧ್ವತ್ ಕಾವೇರಪ್ಪ, ವಿಜಯ್‌ಕುಮಾರ್ ವೈಶಾಕ್ ಮತ್ತು ಆರ್ ಸಮರ್ಥ್ ತಲಾ ಒಂದೊಂದು ವಿಕೆಟ್ ಪಡೆದರು.
ಚೇಸಿಂಗ್‌ನಲ್ಲಿ ಕರ್ನಾಟಕ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ರವಿಕುಮಾರ್ ಸಮರ್ಥ್ ಮತ್ತು ನಾಯಕ ಮಯಾಂಕ್ ಅಗರ್ವಾಲ್ ಅವರಿಂದ ಉತ್ತಮ ಜೊತೆಯಾಟ ಬರಲಿಲ್ಲ. ತಂಡದ ಮೊತ್ತ 4 ರನ್‌ಗಳಾಗಿದ್ದಾಗ ವೈಯಕ್ತಿಕ 4 ರನ್ ಗಳಿಸಿದ್ದ ಆರ್ ಸಮರ್ಥ್ ವಿಕೆಟ್ ಒಪ್ಪಿಸಿದರು.
ಇನ್ನು ನಾಯಕ ಮಯಾಂಕ್ ಅಗರ್ವಾಲ್ ಕೂಡ 46 ಎಸೆತಗಳಲ್ಲಿ 2 ಬೌಂಡರಿ ಸಹಾಯದಿಂದ 28 ರನ್ ಗಳಿಸಿ ಔಟಾದರು. ನಿಕಿನ್ ಜೋಸ್ 73 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಮೇತ 69 ರನ್ ಗಳಿಸಿ ಆರಂಭಿಕ ಹಿನ್ನಡೆಯಿಂದ ತಂಡವನ್ನು ರಕ್ಷಿಸಿದರು.
ಇನ್ನು ಸತತ ನಾಲ್ಕನೇ ಅರ್ಧಶತಕ ಗಳಿಸಿದ ದೇವದತ್ ಪಡಿಕ್ಕಲ್ 57 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 5 ಸಿಕ್ಸರ್‌ಗಳ ಮೂಲಕ ಅಜೇಯ 93 ರನ್ ಬಾರಿಸಿದರು. ಇವರಿಗೆ ಸಾಥ್ ನೀಡಿದ ಮನೀಶ್ ಪಾಂಡೆ 23 ಎಸೆತಗಳಲ್ಲಿ 2 ಬೌಂಡರಿ ನೆರವಿನಿಂದ ಅಜೇಯ 17 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ಬಿಹಾರ ತಂಡದ ಪರ ವೀರ್ ಪ್ರತಾಪ್ ಸಿಂಗ್, ರಘುವೇಂದ್ರ ಪ್ರತಾಪ್ ಸಿಂಗ್ ಮತ್ತು ಅಶುತೋಷ್ ಅಮನ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications