ಗುರುವಾರ, ನವೆಂಬರ್ 23ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಬಿ ಗ್ರೌಂಡ್‌ನಲ್ಲಿ ನಡೆದ 2023ರ ವಿಜಯ್ ಹಜಾರೆ ಟ್ರೋಫಿ ಗ್ರೂಪ್ ಸಿ ರೌಂಡ್ 1 ಪಂದ್ಯದಲ್ಲಿ ಜಮ್ಮು & ಕಾಶ್ಮೀರ ವಿರುದ್ಧ ಕರ್ನಾಟಕ ತಂಡವು ಭರ್ಜರಿ ಗೆಲುವು ದಾಖಲಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ನಿಗದಿತ 50 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 402 ರನ್ ಗಳಿಸಿದರು. ಇನ್ನು ಬೃಹತ್ ಮೊತ್ತ ಬೆನ್ನಟ್ಟಿದ ಜಮ್ಮು ಮತ್ತು ಕಾಶ್ಮೀರ ತಂಡ 30.4 ಓವರ್‌ಗಳಲ್ಲಿ 180 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 222 ರನ್‌ಗಳಿಂದ ಸೋಲು ಕಂಡಿತು.

ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಅವರು ಜಮ್ಮು ಕಾಶ್ಮೀರ ವಿರುದ್ಧ 133 ಎಸೆತಗಳಲ್ಲಿ 157 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿ ತಮ್ಮ ತಂಡಕ್ಕೆ ಗೆಲುವಿನ ಶುಭಾರಂಭ ಮಾಡಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಕರ್ನಾಟಕ, ಮಯಾಂಕ್ ಅಗರ್ವಾಲ್ ಅವರು ಸಹ ಆರಂಭಿಕ ರವಿಕುಮಾರ್ ಸಮರ್ಥ್ ಜೊತೆಗೂಡಿ ತಮ್ಮ ತಂಡಕ್ಕೆ ಅದ್ಭುತ ಆರಂಭ ನೀಡುವ ಮೂಲಕ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಈ ಆರಂಭಿಕ ಜೋಡಿ ಮೊದಲ ವಿಕೆಟ್‌ಗೆ 233 ಎಸೆತಗಳಲ್ಲಿ 267 ರನ್‌ಗಳ ಬೃಹತ್ ಜೊತೆಯಾಟ ನಿರ್ಮಿಸಿತು ಹಾಗೂ ಜಮ್ಮು ಮತ್ತು ಕಾಶ್ಮೀರ ಬೌಲರ್‌ಗಳಿಗೆ ಅಟ್ಟಾಡಿಸಿ ಹೊಡೆದರು.

39ನೇ ಓವರ್‌ನಲ್ಲಿ ರಸಿಖ್ ಸಲಾಂ ಬೌಲಿಂಗ್‌ನಲ್ಲಿ ರವಿಕುಮಾರ್ ಸಮರ್ಥ್ ವಿಕೆಟ್ ನೀಡುತ್ತಿದ್ದಂತೆಯೇ ಇಬ್ಬರ ಬೃಹತ್ ಜೊತೆಯಾಟ ಮುರಿದುಬಿತ್ತು. ಸಮರ್ಥ್ ಔಟಾಗುವ ಮುನ್ನ 120 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಮೂಲಕ 123 ರನ್ ಬಾರಿಸಿದರು.
ಆದಾಗ್ಯೂ, ಮಯಾಂಕ್ ಅಗರ್ವಾಲ್ ಇನ್ನೊಂದು ತುದಿಯಿಂದ ತಮ್ಮ ಸ್ಫೋಟಕ ಇನ್ನಿಂಗ್ಸ್ ಅನ್ನು ಮುಂದುವರೆಸಿದರು ಮತ್ತು 133 ಎಸೆತಗಳಲ್ಲಿ 11 ಬೌಂಡರಿ ಮತ್ತು 8 ಸಿಕ್ಸರ್‌ಗಳ ಸಮೇತ 157 ರನ್ ಸಿಡಿಸಿದರು.
ಗಮನಾರ್ಹವಾಗಿ, ಇದು ಮಯಾಂಕ್ ಅಗರ್ವಾಲ್ ಅವರ ವೃತ್ತಿಜೀವನದ 14ನೇ ಲಿಸ್ಟ್ ಎ ಶತಕವಾಗಿದೆ. ಇದೇ ವೇಳೆ ತಮ್ಮ ಹೆಸರಿಗೆ 4,500ಕ್ಕೂ ಹೆಚ್ಚು ರನ್ ಗಳಿಸಿದರು.
ತನ್ನ ಆರಂಭಿಕ ಜೊತೆಗಾರನನ್ನು ಕಳೆದುಕೊಂಡ ನಂತರ, ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಅವರು ದೇವದತ್ ಪಡಿಕ್ಕಲ್ ಅವರಿಂದ ಉತ್ತಮ ಬೆಂಬಲ ಪಡೆದರು.
ಪಡಿಕ್ಕಲ್ 35 ಎಸೆತಗಳಲ್ಲಿ ಅಜೇಯ 71 ರನ್ ಗಳಿಸಿದರು. ಇದರಲ್ಲಿ 4 ಬೌಂಡರಿಗಳು ಮತ್ತು 5 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಎದುರಾಳಿ ತಂಡದ ಬೌಲರ್‌ಗಳನ್ನು ಚೆಂಡಾಡಿದರು. ಉಳಿದಂತೆ ಮನೀಶ್ ಪಾಂಡೆ 14 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 23 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ಜಮ್ಮು & ಕಾಶ್ಮೀರ ತಂಡದ ಪರ ರಾಸಿಖ್ ಸಲಾಮ್ 10 ಓವರ್‌ಗಳಲ್ಲಿ 82 ರನ್ ನೀಡಿ 1 ವಿಕೆಟ್ ಪಡೆದರೆ, ಸಾಹಿಲ್ ಲೊತ್ರಾ 6 ಓವರ್‌ಗಳಲ್ಲಿ 55 ರನ್ ನೀಡಿ 1 ವಿಕೆಟ್ ತಮ್ಮದಾಗಿಸಿಕೊಂಡರು.
ಕರ್ನಾಟಕ ನೀಡಿದ ಬೃಹತ್ ಗುರಿಗೆ ಪ್ರತ್ಯುತ್ತರವಾಗಿ, ಜಮ್ಮು & ಕಾಶ್ಮೀರ ತಮ್ಮ ಆರಂಭಿಕ ಆಟಗಾರ ಕಮ್ರಾನ್ ಇಕ್ಬಾಲ್ (17 ಎಸೆತಗಳಲ್ಲಿ 5) ವಿಕೆಟ್ ಅನ್ನು ವಾಸುಕಿ ಕೌಶಿಕ್ ಬೌಲಿಂಗ್‌ನಲ್ಲಿ ಇನ್ನಿಂಗ್ಸ್‌ನ ಆರಂಭದಲ್ಲಿಯೇ ಕಳೆದುಕೊಂಡಿತು.
ಆರಂಭಿಕ ಹಿನ್ನಡೆಯ ನಂತರ ನಾಯಕ ಶುಭಂ ಖಜುರಿಯಾ (24 ಎಸೆತಗಳಲ್ಲಿ 29 ರನ್) ಮತ್ತು ವಿವ್ರಾಂತ್ ಶರ್ಮಾ (46 ಎಸೆತಗಳಲ್ಲಿ 41 ರನ್) ಎರಡನೇ ವಿಕೆಟ್‌ಗೆ 65 ರನ್ ಜೊತೆಯಾಟ ನೀಡಿದರು. ಆದರೆ, ಇವರಿಬ್ಬರು ಅಗತ್ಯ ರನ್ ರೇಟ್ ಅನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾಗಿ ಬೇಗನೆ ವಿಕೆಟ್ ಒಪ್ಪಿಸಿದರು.
ಇದರ ಪರಿಣಾಮವಾಗಿ, ಜಮ್ಮು & ಕಾಶ್ಮೀರ ತಂಡ ನಾಟಕೀಯ ಕುಸಿತ ಅನುಭವಿಸಿತು ಮತ್ತು 70 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡಿದ್ದ ತಂಡ ನಂತರ, 109 ರನ್‌ಗಳಾಗುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡಿತು. ಯುದ್ಧವೀರ್ ಸಿಂಗ್ ಚರಕ್ (39 ಎಸೆತಗಳಲ್ಲಿ 64 ರನ್) ಜಮ್ಮು & ಕಾಶ್ಮೀರ ತಂಡ 150 ರನ್ ಗಡಿ ದಾಟಲು ನೆರವಾದರು.
ಕರ್ನಾಟಕ ವೇಗಿ ವಿಜಯ್‌ಕುಮಾರ್ ವೈಶಾಕ್ 9 ಓವರ್‌ಗಳಲ್ಲಿ 57 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಕೃಷ್ಣಪ್ಪ ಗೌತಮ್ 7 ಓವರ್‌ಗಳಲ್ಲಿ 45 ರನ್ ನೀಡಿ 2 ವಿಕೆಟ್ ಪಡೆದರು.
ಇನ್ನು 222 ರನ್‌ಗಳ ಬೃಹತ್ ಗೆಲುವಿನೊಂದಿಗೆ ಕರ್ನಾಟಕ ತಂಡ ಸಿ ಗುಂಪಿನಲ್ಲಿ ಎರಡು ಅಂಕಗಳೊಂದಿಗೆ ಸಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ.