

ನವದೆಹಲಿ, ಸೆಪ್ಟೆಂಬರ್ 28: ದೆಹಲಿಯಲ್ಲಿ ನಡೆದ ವಿಜಯ್ ಹಜಾರೆ ಎಲೈಟ್ ಗ್ರೂಪ್ ಬಿಯ ಡೆಲ್ಲಿ-ಕೇರಳ ಮುಖಾಮುಖಿಯಲ್ಲಿ ಡೆಲ್ಲಿ 165 ರನ್ ಭರ್ಜರಿ ಗೆಲುವು ಸಾಧಿಸಿದೆ. ನಾಯಕ ಗೌತಮ್ ಗಂಭೀರ್ ಅವರ ಆಕರ್ಷಕ ಶತಕ (151 ರನ್) ನೆರವಿನಿಂದ ಡೆಲ್ಲಿ ಸುಲಭ ಜಯ ಸಾಧಿಸಿತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಡೆಲ್ಲಿಗೆ ಆರಂಭಿಕ ಆಟಗಾರರಾದ ಉನ್ಮುಕ್ತ್ ಚಂದ್ 69, ನಾಯಕ ಗಂಭೀರ್ 151 ರನ್ ಸೇರಿಸಿ ತಂಡಕ್ಕೆ ರನ್ ಬಲ ತುಂಬಿದರು. ಗಂಭೀರ್ ಪಂದ್ಯದಲ್ಲಿ ರಿಟೈರ್ಡ್ಡ್ ಔಟ್ ಆಗಿ ಹೊರ ನಡೆದರು. ಧೃವ್ ಶೆರೋಯ್ 99, ಪ್ರಷ್ಣು ವಿಜಯರನ್ 48 ರನ್ ಸೇರಿಸಿದ್ದರಿಂದ 50 ಓವರ್ ಮುಕ್ತಾಯಕ್ಕೆ ಡೆಲ್ಲಿ 3 ವಿಕೆಟ್ ಕಳೆದು 392 ಗರಿಷ್ಠ ರನ್ ಪೇರಿಸಿತು.
ಚೇಸಿಂಗ್ ಗೆ ಇಳಿದ ಕೇರಳಕ್ಕೆ ಗಮನಾರ್ಹ ಮಟ್ಟಿನಲ್ಲಿ ಬ್ಯಾಟ್ಸ್ಮನ್ ಗಳ ಬೆಂಬಲ ದೊರೆಯಲಿಲ್ಲ. ಸಂಜು ಸ್ಯಾಮ್ಸನ್ ಮತ್ತು ನಾಯಕ ಸಚಿನ್ ಬೇಬಿ ತಲಾ 47, ವಿಎ ಜಗದೀಶ್ 59 ರನ್ ಸೇರಿಸಿದರಾದರೂ ತಂಡವನ್ನು ಗೆಲ್ಲಿಸಲಾಗಲಿಲ್ಲ. ಕೇರಳ 50 ಓವರ್ ಗೆ 8 ವಿಕೆಟ್ ಕಳೆದು 227 ರನ್ ಪೇರಿಸಿ ಡೆಲ್ಲಿಗೆ ಶರಣಾಯಿತು.