ವಿಜಯ್ ಹಜಾರೆ ಏಕದಿನ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಕರ್ನಾಟಕ, ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಮಿಜೋರಾಂ ತಂಡವನ್ನು ಮಣಿಸಿತು. ಏಳನೇ ಪಂದ್ಯದಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿದ ಕರ್ನಾಟಕ ಅಬ್ಬರಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮಿಜೋರಾಂ 37.2 ಓವರ್ ಗಳಲ್ಲಿ 124 ರನ್ ಗಳಿಗೆ ಸರ್ವಪತನವನ್ನು ಹೊಂದಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಕರ್ನಾಟಕ 17.1 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿಯನ್ನು ಮುಟ್ಟಿತು. ಈ ಗೆಲುವಿನ ಮೂಲಕ ಕರ್ನಾಟಕ ಆಡಿದ ಏಳು ಪಂದ್ಯಗಳಲ್ಲಿ ಆರರಲ್ಲಿ ಗೆಲುವು ಸಾಧಿಸಿದ್ದು, 24 ಅಂಕಗಳನ್ನು ಕಲೆ ಹಾಕಿದೆ.

ಮಿಜೋರಾಂ ತಂಡದ ಆರಂಭ ಕಳಪೆಯಾಗಿತ್ತು. ಸ್ಟಾರ್ ಆರಂಭಿಕ ಆಟಗಾರರು ರನ್ ಕಲೆ ಹಾಕು ವಲ್ಲಿ ವಿಫಲರಾದರು. ಪರಿಣಾಮ 9 ರನ್ ಆಗುವಷ್ಟರಲ್ಲಿ ಇಬ್ಬರೂ ಆರಂಭಿಕರು ಪೆವಿಲಿಯನ್ ಸೇರಿದರು.
ಮಧ್ಯಮ ಕ್ರಮಾಂಕದ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ ಪಟಪಟನೆ ವಿಕೆಟ್ ಗಳು ಬೀದ್ದವು. 61 ರನ್ ಗಳಿಗೆ ಏಳು ವಿಕೆಟ್ ಕಳೆದುಕೊಂಡು ದುಸ್ಥಿತಿಯಲ್ಲಿದ್ದ ಮಿಜೋರಾಂ ತಂಡಕ್ಕೆ ಜೋಸೆಫ್ ಎಲ್ ಹಾಗೂ ಕರ್ನಾಟಕದಿಂದ ವಲಸೆ ಹೋಗಿರುವ ಆಟಗಾರ ಕೆ ಸಿ ಕಾರಿಯಪ್ಪ ಆಧಾರವಾದರು.
ಎಂಟನೇ ವಿಕೆಟ್ ಗೆ ಜೋಸೆಫ್ ಎಲ್ ಹಾಗೂ ಕೆ ಸಿ ಕಾರಿಯಪ್ಪ 62 ರನ್ ಗಳ ಜೊತೆಯಾಟದ ಕಾಣಿಕೆ ನೀಡಿದರು. ಕರಿಯಪ್ಪ 27 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಸಹಾಯದಿಂದ 36 ರನ್ ಬಾರಿಸಿದರು. ಇನ್ನು ಜೋಸೆಫ್ ಎಲ್ ಎರಡು ಬೌಂಡರಿ, ಎರಡು ಸಿಕ್ಸರ್ ಸಹಾಯದಿಂದ 37 ರನ್ ಸಿಡಿಸಿದರು.
ವಾಸುಕಿಗೆ 4 ವಿಕೆಟ್
ಕರ್ನಾಟಕದ ಪರ ಬಿಗುವಿನ ದಾಳಿ ನಡೆಸಿದ ವಾಸುಕಿ ಕೌಶಿಕ್ 4 ವಿಕೆಟ್ ಕಬಳಿಸಿದರು. ಇವರು ಕೇವಲ 7 ರನ್ ನೀಡಿ ನಾಲ್ಕು ಅಮೂಲ್ಯ ವಿಕೆಟ್ ಗಳನ್ನು ಪಡೆದರು. ಉಳಿದಂತೆ ಸ್ಟಾರ್ ಆಲ್ ರೌಂಡರ್ ಕೆ.ಗೌತಮ್ ಮೂರು, ಮನೋಜ್ ಭಂಡಾರೆ ಎರಡು ವಿಕೆಟ್ ಕಬಳಿಸಿದರು.
125 ರನ್ ಗಳ ಗುರಿಯನ್ನು ಬೆನ್ನಟ್ಟಿದ ಕರ್ನಾಟಕದ ಆರಂಭ ಕಳಪೆಯಾಗಿತ್ತು. ಬಿ.ಆರ್. ಭರತ್, ಅಭಿನವ್ ಮನೋಹರ್ (14) ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಆಲ್ ರೌಂಡರ್ ಕೆ ಗೌತಮ್ ಸೊನ್ನೆ ಸುತ್ತಿದರು.
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಮನೋಜ್ ಭಂಡಾರೆ ಬಿರುಸಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು ಕೇವಲ 8 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 21 ರನ್ ಸಿಡಿಸಿದರು.
ಕರ್ನಾಟಕದ ಪರ ನಾಯಕ ಮಯಾಂಕ್ ಅಗರ್ ವಾಲ್ ಹಾಗೂ ಮನೀಷ್ ಪಾಂಡೆ ಜೊತೆಗೂಡಿ ತಂಡವನ್ನು ಗೆಲುವಿನ ದಡ ದಾಟಿಸಿದರು. ಮಯಾಂಕ್ ಅಜೇಯ 48 ರನ್ ಸಿಡಿಸಿದರೆ, ಮನೀಷ್ ಅಜೇಯ 8 ರನ್ ಸಿಡಿಸಿದರು.