ವಿಜಯ್ ಹಜಾರೆ ಟ್ರೋಫಿಯ ಏಕದಿನ ಪಂದ್ಯದಲ್ಲಿ ಕರ್ನಾಟಕ ಸ್ಥಿರ ಪ್ರದರ್ಶನ ನೀಡುತ್ತಿದೆ. ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಕರ್ನಾಟಕ, ತಮಿಳುನಾಡು ವಿರುದ್ಧ ಕಾದಾಟ ನಡೆಸಲಿದೆ. ಈ ವೇಳೆ ಮಯಾಂಕ್ ಅಗರ್‌ವಾಲ್ ಪಡೆ ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ "ಎ" ಗುಂಪಿನ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಬಡ್ತಿ ಪಡೆಯುವ ಕನಸು ಕರ್ನಾಟಕ ತಂಡದ್ದಾಗಿದೆ.
ಕರ್ನಾಟಕ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ ದಾಖಲೆಯ ಮೊತ್ತ ಚೇಸ್ ಮಾಡಿ ಜಯಿಸಿತ್ತು. ಈ ಪಂದ್ಯದಲ್ಲಿ ಕರ್ನಾಟಕ 5 ವಿಕೆಟ್‌ಗಳಿಂದ ಜಯ ಸಾಧಿಸಿತ್ತು. ಎರಡನೇ ಪಂದ್ಯದಲ್ಲಿ ಮಯಾಂಕ್ ಪಡೆ ಕೇರಳ ವಿರುದ್ಧ 8 ವಿಕೆಟ್ ಜಯ ಸಾಧಿಸಿ ಅಬ್ಬರಿಸಿತು. ಕರ್ನಾಟಕ ಆಡಿರುವ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನು ತಮಿಳುನಾಡು ತಂಡ ಆಡಿರುವ 2 ಪಂದ್ಯಗಳಲ್ಲಿ 1 ಜಯ, 1 ಸೋಲು ಕಂಡಿದ್ದು, ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಅಹಮದಾಬಾದ್‌ನಲ್ಲಿ ನಡೆಯಲಿರುವ ಸ್ಟಾರ್ ಆಟಗಾರರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಕರ್ನಾಟಕದ ಪರ ಭರವಸೆಯ ಆಟಗಾರ ದೇವದತ್ ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಇವರು ಆಡಿದ 2 ಪಂದ್ಯಗಳಲ್ಲಿ 135ರ ಸರಾಸರಿಯಲ್ಲಿ 271 ರನ್ ಕಲೆ ಹಾಕಿದ್ದಾರೆ. ಈ ವೇಳೆ 2 ಶತಕಗಳು ಸೇರಿವೆ. ಮಧ್ಯಮ ಕ್ರಮಾಂಕದಲ್ಲಿ ಕರುಣ್ ನಾಯರ್ ಕಳೆದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ಮಯಾಂಕ್ ಅಗರ್‌ವಾಲ್, ಆರ್.ಸ್ಮರಣ್ ಅವರು ಸಹ ಬಿಗ್ ಇನಿಂಗ್ಸ್ ಕಟ್ಟುವ ವಿಶ್ವಾಸ ಹೊಂದಿದ್ದಾರೆ.
ಕರ್ನಾಟಕದ ಸ್ಟಾರ್ ಬೌಲರ್ ಅಭಿಲಾಷ್ ಶೆಟ್ಟಿ ಆಡಿದ 2 ಪಂದ್ಯಗಳಲ್ಲಿ 7 ವಿಕೆಟ್ ಪಡೆದಿದ್ದಾರೆ. ಸ್ಪಿನ್ ಬೌಲರ್ ಶ್ರೇಯಸ್ ಗೋಪಾಲ್ ಆಡಿದ 2 ಪಂದ್ಯಗಳಲ್ಲಿ 4 ವಿಕೆಟ್ ಉರುಳಿಸಿದ್ದಾರೆ. ಮೂರನೇ ಪಂದ್ಯದಲ್ಲೂ ಈ ಬೌಲರ್‌ಗಳು ಬಿಗುವಿನ ದಾಳಿ ನಡೆಸಿ, ವಿಕೆಟ್ ಬೇಟೆ ನಡೆಸಿದಾಗ ಮಾತ್ರ ಗೆಲುವಿನ ಕನಸು ನನಸಾಗುತ್ತದೆ. ಕರ್ನಾಟಕ ತಂಡ ಈ ಬಾರಿ ಟೂರ್ನಿಯಲ್ಲಿ ನೀಡುತ್ತಿರುವ ಪ್ರದರ್ಶನ ಅಭಿಮಾನಿಗಳ ಉತ್ಸಾಹ ತುಂಬಿದೆ. ತಮಿಳುನಾಡು ತಂಡವನ್ನು ಮಣಿಸಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರುವ ಕನಸು ಕರ್ನಾಟಕ ತಂಡದ್ದಾಗಿದೆ.
ತಮಿಳುನಾಡು ತಂಡದಲ್ಲೂ ಸ್ಟಾರ್ ಆಟಗಾರರ ದಂಡೇ ಇದೆ. ಆದರೆ ಸ್ಟಾರ್ ಆಟಗಾರರು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಎನ್ ಜಗದೀಶನ್, ಮೊಹಮ್ಮದ್ ಅಲಿ, ಸಾಯಿ ಸುದರ್ಶನ್, ರಂಜನ್ ಪೌಲ್ ಒತ್ತಡದಲ್ಲಿ ಬಿಗ್ ಇನಿಂಗ್ಸ್ ಕಟ್ಟುವ ಅನಿವಾರ್ಯತೆ ಇದೆ. ತಮಿಳುನಾಡು ತಂಡದ ಪರ ಗುರ್ಜಪ್ನೀತ್ ಸಿಂಗ್ ವಿಕೆಟ್ ಬೇಟೆ ನಡೆಸುತ್ತಿದ್ದಾರೆ. ಇವರಿಗೆ ಗೋವಿನಾಥ್ ಜಿ, ಸೋನು ಯಾದವ್ ಸಹ ರನ್‌ಗಳಿಗೆ ಕಡಿವಾಣ ಹಾಕಿ ವಿಕೆಟ್‌ಗಳನ್ನು ಕಬಳಿಸಬಲ್ಲ ಕ್ಷಮತೆ ಹೊಂದಿದ್ದಾರೆ.