ವಿಜಯ್ ಹಜಾರೆ ಟ್ರೋಫಿ: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಕರ್ನಾಟಕ
ಕೋಲ್ಕತ್ತ, ಮಾರ್ಚ್. 05 : ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸಿರುವ ಕರ್ನಾಟಕ ತಂಡ ಅಜೇಯವಾಗಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ.
ಕೆ. ಗೌತಮ್ (28ಕ್ಕೆ5) ಅವರ ಮಾರಕ ದಾಳಿಯಿಂದ ಮನೀಷ್ ಪಾಂಡೆ ನೇತೃತ್ವದ ತಂಡ 'ಡಿ' ಗುಂಪಿನ ತನ್ನ ಅಂತಿಮ ಪಂದ್ಯದಲ್ಲಿ 1 ವಿಕೆಟ್‌ನಿಂದ ಹೈದರಾಬಾದ್ ತಂಡವನ್ನು ಸೋಲಿಸಿತು.
ಶನಿವಾರ ಕೋಲ್ಕತ್ತದ ಈಡನ್ ಗಾರ್ಡನ್ ನಲ್ಲಿ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ 44 ಓವರ್‌ಗಳಲ್ಲಿ 108ರನ್ ಗಳಿಗೆ ಆಲೌಟ್ ಸರ್ವಪತನ ಕಂಡಿತು. ಸುಲಭ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ 81ರನ್ ಗಳಿಸುವಷ್ಟರಲ್ಲಿ ಒಂಬತ್ತು ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿತ್ತು.[ವಿಜಯ್ ಹಜಾರೆ ಟ್ರೋಫಿ: ಕರ್ನಾಟಕ ಹುಡುಗರಿಗೆ ಹ್ಯಾಟ್ರಿಕ್ ಗೆಲುವು]

ಆದರೆ, ಅನುಭವಿ ವಿನಯ್ ಕುಮಾರ್ (ಔಟಾಗದೆ 56ಎಸೆತಗಳಲ್ಲಿ 6ಬೌಂಡರಿಗಳ ನೆರವಿನಿಂದ 35 ರನ್ ಬಾರಿಸಿ ತಂಡವನ್ನು ಗೆಲುವಿನ ಗುರಿ ಮುಟ್ಟಿಸಿದರು.
ಈ ಗೆಲುವಿನೊಂದಿಗೆ ಕರ್ನಾಟಕ ತಂಡ ಒಟ್ಟು ಪಾಯಿಂಟ್ಸ್ ಅನ್ನು 20ಕ್ಕೆ ಹೆಚ್ಚಿಸಿಕೊಂಡು ಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿತು.
ಬ್ಯಾಟಿಂಗ್ ಆರಂಭಿಸಿದ ಹೈದರಾಬಾದ್ ತಂಡ ತನ್ಮಯ್ ಅಗರವಾಲ್ (8) ಅವರ ವಿಕೆಟ್ ಅನ್ನು ಬೇಗನೆ ಕಳೆದುಕೊಂಡಿತು. ಅಕ್ಷತ್ ರೆಡ್ಡಿ (9), ಕೆ. ಸುಮಂತ್ (6) ಮತ್ತು ಬವನಕ ಸಂದೀಪ್ (5) ಕೂಡ ಹೆಚ್ಚು ಕಾಲ ಕ್ರೀಸ್ ನಲ್ಲಿ ನಿಲ್ಲಲಿಲ್ಲ.
ಅಕ್ಷತ್ ಮತ್ತು ಸುಮಂತ್ ಕ್ರಮವಾಗಿ ಸ್ಟುವರ್ಟ್ ಬಿನ್ನಿ ಮತ್ತು ಎಸ್. ಅರವಿಂದ್‌ಗೆ ವಿಕೆಟ್ ಒಪ್ಪಿಸಿದರೆ, ಸಂದೀಪ್ ರನ್ ಔಟ್ ಆದರು. ಆಗ ತಂಡದ ಮೊತ್ತ 22 ಓವರ್‌ಗಳಲ್ಲಿ 48ರನ್ ಆಗಿತ್ತು.
ಪಿಚ್ ಬೌಲರ್‌ಗಳಿಗೆ ಹೆಚ್ಚು ನೆರವು ನೀಡುತ್ತಿರುವುದನ್ನು ಮನಗಂಡ ನಾಯಕ ಎಸ್. ಬದರೀನಾಥ್ (18) ಮತ್ತು ಆಕಾಶ್ ಭಂಡಾರಿ (17) ವಿಕೆಟ್ ಬೀಳದಂತೆ ಎಚ್ಚರಿಕೆ ವಹಿಸಿದರು.
ಐದನೇ ವಿಕೆಟ್‌ಗೆ 21ರನ್ ಗಳಿಸಿದ್ದ ಇವರನ್ನು ಕೆ. ಗೌತಮ್ ತಮ್ಮ ಸ್ಪಿನ್ ಬಲೆಯಲ್ಲಿ ಸಿಲುಕಿಸಿ ಮನೀಷ್ ಬಳಗಕ್ಕೆ ಮೇಲುಗೈ ತಂದುಕೊಟ್ಟರು.
ಆ ಬಳಿಕವೂ ಆಫ್ ಸ್ಪಿನ್ನರ್ ಗೌತಮ್ ಅವರು ಮೆಹದಿ ಹಸನ್ (9), ಮೊಹಮ್ಮದ್ ಸಿರಾಜ್ (5) ಮತ್ತು ರವಿ ಕಿರಣ್ (4) ಅವರ ವಿಕೆಟ್ ಕಬಳಿಸಿ ಹೈದರಾಬಾದ್ ಇನಿಂಗ್ಸ್‌ಗೆ ಅಂತ್ಯ ಹಾಡಿದರು.
ಸಂಕಷ್ಟ: ಗುರಿ ಬೆನ್ನಟ್ಟುವ ಹಾದಿಯಲ್ಲಿ ಕರ್ನಾಟಕ ತಂಡವೂ ಆರಂಭಿಕ ಸಂಕಷ್ಟ ಅನುಭವಿಸಿತು. ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ (4) ಮತ್ತು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಆರ್. ಸಮರ್ಥ್ (1) ತಮ್ಮ ಮೇಲಿನ ನಿರೀಕ್ಷೆ ಹುಸಿಗೊಳಿಸಿದರು.
ಈ ಹಂತದಲ್ಲಿ ಒಂದಾದ ಮಯಂಕ್ ಅಗರವಾಲ್ (26) ಮತ್ತು ಕೆ. ಗೌತಮ್ (16) ಎಚ್ಚರಿಕೆಯ ಇನಿಂಗ್ಸ್ ಕಟ್ಟಿದರು. 8ನೇ ಓವರ್ ಬೌಲ್ ಮಾಡಿದ ಚಾಮಾ ಮಿಲಿಂದ್ ಐದನೇ ಎಸೆತದಲ್ಲಿ ಗೌತಮ್ ಪಡೆದರು.
ಆ ನಂತರ ಬಂದ ನಾಯಕ ಮನೀಷ್, ಅನಿರುದ್ಧ್ ಜೋಶಿ ಮತ್ತು ಪವನ್ ದೇಶಪಾಂಡೆ ಖಾತೆ ತೆರೆಯದೆ ಪೆವಿಲಿಯನ್ ಹಾದಿ ಹಿಡಿದರು. ಇದರ ಬೆನ್ನಲ್ಲೇ ಮಯಂಕ್ ಕೂಡ ಮೆಹದಿ ಹಸನ್ ಗೆ ವಿಕೆಟ್ ಒಪ್ಪಿಸಿದರು.
ಕ್ರೀಸ್ ನಲ್ಲಿ ವಿನಯ್ ಕುಮಾರ್ ಮತ್ತು ಎಂ. ಪ್ರಸಿದ್ಧ ಕೃಷ್ಣ ಇದ್ದಿದ್ದರಿಂದ ಹೈದರಾಬಾದ್ ತಂಡ ಸುಲಭ ಗೆಲುವಿನ ಕನಸು ಕಂಡಿತ್ತು.
ಎದುರಾಳಿ ತಂಡದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ವಿನಯ್ ಒತ್ತಡದ ಹಂತದಲ್ಲೂ ಲೀಲಾಜಾಲವಾಗಿ ರನ್ ಪೇರಿಸಿ ಕರ್ನಾಟಕದ ಆಟಗಾರರ ಮೊಗದಲ್ಲಿ ಸಂತಸ ಅರಳುವಂತೆ ಮಾಡಿದರು.
ಸಂಕ್ಷಿಪ್ತ ಸ್ಕೋರ್: ಹೈದರಾಬಾದ್: 44 ಓವರ್‌ಗಳಲ್ಲಿ 108 ರನ್. ಕರ್ನಾಟಕ: 29.2 ಓವರ್‌ಗಳಲ್ಲಿ 9 ವಿಕೆಟ್‌ಗೆ 109.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications