
ಬೆಂಗಳೂರು, ಸೆಪ್ಟೆಂಬರ್ 19: ಬೆಂಗಳೂರಿನ ಆಲೂರು ಸ್ಟೇಡಿಯಂನಲ್ಲಿ ಬುಧವಾರ (ಸೆ. 19) ನಡೆದ ವಿಜಯ್ ಹಜಾರೆ ಟ್ರೋಫಿ ಎಲೈಟ್ ಗ್ರೂಪ್ ಎಯ ಬರೋಡಾ-ಮುಂಬೈ ಪಂದ್ಯದಲ್ಲಿ ಮುಂಬೈ 9 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ. ಪೃಥ್ವಿ ಶಾ, ನಾಯಕ ಅಜಿಂಕ್ಯ ರಹಾನೆ ಮತ್ತು ಶ್ರೇಯಸ್ ಐಯರ್ ಅವರ ಅರ್ಧಶತಕ ನೆರವಿನಿಂದ ಮುಂಬೈ ಸುಲಭ ಜಯ ಸಾಧಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಬರೋಡ ತಂಡ 49.5 ಓವರ್ ಗೆ ಎಲ್ಲಾ ವಿಕೆಟ್ ಕಳೆದು 238 ರನ್ ಪೇರಿಸಿತ್ತು. ಕೇದಾರ್ ದೇವಧಾರ್ 39, ಕೃನಾಲ್ ಪಾಂಡ್ಯ 85, ಯೂಸೂಫ್ ಪಠಾಣ್ 40, ಪಿನಾಲ್ ಶಾ 32 ರನ್ ಪೇರಿಸಿ ತಂಡದ ಮೊತ್ತ ಹೆಚ್ಚಳಕ್ಕೆ ಕಾರಣರಾದರು.
ಗುರಿ ಬೆನ್ನಟ್ಟಿದ ಮುಂಬೈಗೆ ಬ್ಯಾಟ್ಸ್ಮನ್ ಗಳ ಭರ್ಜರಿ ಬೆಂಬಲ ದೊರೆಯಿತು. ಆರಂಭಿಕರಾದ ಪೃಥ್ವಿ ಶಾ 98, ರಹಾನೆ 79, ಶ್ರೇಯಸ್ ಐಯ್ಯರ್ 56 ರನ್ ನೀಡಿದ್ದು ಮುಂಬೈಗೆ ಸುಲಭ ಗೆಲುವು ದಾಖಲಿಸಲು ನೆರವಾಯ್ತು. ಮುಂಬೈ 41.3 ಓವರ್ ಗೆ 1 ವಿಕೆಟ್ (ಶಾ) ಕಳೆದು 239 ರನ್ ಪೇರಿಸಿತು.