Vijay Hazare Trophy: ಮುಂಬೈ ಮಣಿಸಿದ ಕರ್ನಾಟಕ ಸೆಮಿಫೈನಲ್‌ಗೆ
ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಕರ್ನಾಟಕ ಸೆಮಿಫೈನಲ್ ಪ್ರವೇಶಿಸಿದೆ. ಸೋಮವಾರ ಬೆಂಗಳೂರಿನ ಹೊರವಲಯದಲ್ಲಿರುವ ಬಿಸಿಸಿಐ ಶ್ರೇಷ್ಠತಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮಯಾಂಕ್ ಅಗರ್‌ವಾಲ್ ಪಡೆ ವಿಜೆಡಿ ವಿಧಾನದಿಂದ 55 ರನ್‌ಗಳಿಂದ ಮುಂಬೈ ತಂಡವನ್ನು ಮಣಿಸಿತು. ಕರ್ನಾಟಕದ ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್ ಅವರಿಗೆ ಪಂದ್ಯ ಶ್ರೇಷ್ಠ ಗರಿ ಸಂದಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕರಾದ ಆಂಗ್ಕ್ರಿಶ್ ರಘುವಂಶಿ (27), ಇಶಾನ್ ಮುಲ್ಚಂದಾನಿ (20) ರನ್ ಕಲೆ ಹಾಕಲು ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಮುಶೀರ್ ಖಾನ್ (9), ಹಾರ್ದಿಕ್ ತೋಮರ್ (1) ಸಿಂಗಲ್ ಡಿಜಿಟ್‌ನಲ್ಲಿ ಆಟ ಮುಗಿಸಿದರು. 60 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಸಿದ್ದೇಶ್ ಲಾಡ್ ಹಾಗೂ ಶಾಮ್ಸ್ ಮುಲಾನಿ ಜೋಡಿ ಆಧಾರವಾಯಿತು.

5ನೇ ವಿಕೆಟ್‌ಗೆ ಸಿದ್ದೇಶ್ ಲಾಡ್ ಹಾಗೂ ಶಾಮ್ಸ್ ಮುಲಾನಿ ಜೋಡಿ ಮುಂಬೈ ತಂಡ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕುವಲ್ಲಿ ನೆರವಾದರು. ಈ ಜೋಡಿ 97 ಎಸೆತಗಳಲ್ಲಿ 76 ರನ್ ಸಿಡಿಸಿತು. ಈ ಹಂತದಲ್ಲಿ ಸಿದ್ಧೇಶ್ ಲಾಡ್ 4 ಬೌಂಡರಿ ನೆರವಿನಿಂದ 38 ರನ್ ಬಾರಿಸಿದರು. ಕೆಳಕ್ರಮಾಂಕದಲ್ಲಿ ಸಿರಾಜ್ ಪಟೇಲ್ ಅಜೇಯ 33 ರನ್ ಸಿಡಿಸಿದರು.
ಅನುಭವಿ ಬ್ಯಾಟರ್ ಶಾಮ್ಸ್ ಮುಲಾನಿ 91 ಎಸೆತಗಳಲ್ಲಿ 8 ಬೌಂಡರಿ ನೆರವಿನಿಂದ 86 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಅಂತಿಮವಾಗಿ ಮುಂಬೈ ತಂಡ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 254 ರನ್ ಸಿಡಿಸಿತು. ಕರ್ನಾಟಕದ ಪರ ವಿದ್ಯಾಧರ್ ಪಾಟೀಲ್ 3, ವಿದ್ವತ್ ಕಾವೇರಪ್ಪಾ ಹಾಗೂ ಅಭಿಲಾಷ್ ಶೆಟ್ಟಿ ತಲಾ 2 ವಿಕೆಟ್ ಉರುಳಿಸಿದರು.
ಪಡಿಕ್ಕಲ್, ಕರುಣ್ ಭರ್ಜರಿ ಜೊತೆಯಾಟ
ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ತಂಡದ ಪರ ಇನಿಂಗ್ಸ್ ಆರಂಭಿಸಿದ ನಾಯಕ ಮಯಾಂಕ್ ಅಗರ್‌ವಾಲ್ ಹಾಗೂ ದೇವದತ್ ಪಡಿಕ್ಕಲ್ ಜೋಡಿ ಮೊದಲ ವಿಕೆಟ್‌ಗೆ 44 ರನ್ ಸೇರಿಸಿತು. ಮಯಾಂಕ್ 12 ರನ್ ಬಾರಿಸಿ ಔಟ್ ಆದರು. ಎರಡನೇ ವಿಕೆಟ್‌ಗೆ ದೇವದತ್ ಪಡಿಕ್ಕಲ್ ಹಾಗೂ ಕರುಣ್ ನಾಯರ್ ಜೋಡಿ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಶತಕದ ಜೊತೆಯಾಟವನ್ನು ನೀಡಿತು. ದೇವದತ್ ಪಡಿಕ್ಕಲ್ 95 ಎಸೆತಗಳಲ್ಲಿ 11 ಬೌಂಡರಿ ನೆರವಿನಿಂದ ಅಜೇಯ 81 ರನ್ ಸಿಡಿಸಿದರು. ಕರುಣ್ ನಾಯರ್ 11 ಬೌಂಡರಿ ಸಹಾಯದಿಂದ ಅಜೇಯ 74 ರನ್ ಬಾರಿಸಿದರು. ಕರ್ನಾಟಕ 33 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 187 ರನ್ ಕಲೆ ಹಾಕಿದ್ದಾಗ ಮಳೆ ಆರಂಭವಾಯಿತು. ಬಳಿಕ ಪಂದ್ಯ ನಡೆಯಲು ಆಗದೇ ಇದ್ದಾಗ ವಿಜೆಡಿ ವಿಧಾನದಿಂದ ಕರ್ನಾಟಕವನ್ನು ವಿಜೇತ ಎಂದು ಘೋಷಿಸಲಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications