ವಡೋಧರಾದಲ್ಲಿ ನಡೆದ ವಿಜಯ್ ಹಜಾರೆ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ವಿದರ್ಭ, ಮಹಾರಾಷ್ಟ್ರ ತಂಡವನ್ನು 69 ರನ್‌ಗಳಿಂದ ಮಣಿಸಿ ಫೈನಲ್‌ಗೆ ಪ್ರವೇಶಿಸಿದೆ. ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ ವಿದರ್ಭ ಸೆಮಿಫೈನಲ್‌ನಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿ ಅಬ್ಬರಿಸಿದೆ. ಈ ಮೂಲಕ ಟೂರ್ನಿಯ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದಿದೆ. ಫೈನಲ್ ಪಂದ್ಯದಲ್ಲಿ ವಿದರ್ಭ ಕರ್ನಾಟಕ ತಂಡದ ವಿರುದ್ಧ ಕಾದಾಟ ನಡೆಸಲಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ವಿದರ್ಭ 50 ಓವರ್‌ಗಳಲ್ಲಿ 3 ವಿಕೆಟ್‌ಗೆ 380 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಮಹಾರಾಷ್ಟ್ರ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 311 ರನ್ ಸೇರಿಸಿ ಸೋಲು ಕಂಡಿತು.

ಮೊದಲು ಬ್ಯಾಟ್ ಮಾಡಿದ ವಿದರ್ಭ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಧ್ರುವ್ ಶೋರೆ ಹಾಗೂ ಯಶ್ ರಾಥೋಡ್ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿಯನ್ನು ಬೇರ್ಪಡಿಸಲು ಮಹಾರಾಷ್ಟ್ರ ಬೌಲರ್‌ಗಳ ವಿಫಲರಾದರು. ಈ ಜೋಡಿ ಮಹಾರಾಷ್ಟ್ರ ನಾಯಕ ನಿರ್ಧಾರವನ್ನು ತಪ್ಪು ಎಂದು ಸಾಬೀತು ಮಾಡಿತು. ಹಂತ ಹಂತವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಆರಂಭಿಕ ಜೋಡಿ ರುತುರಾಜ್ ಗಾಯಕ್ವಾಡ್ ಅವರ ಮುಖದಲ್ಲಿ ಚಿಂತೆಯ ಗೆರೆಗಳನ್ನು ಮೂಡುವಂತೆ ಮಾಡಿತು.
ಮೊದಲ ಪವರ್ ಪ್ಲೇನಲ್ಲಿ ಪವರ್ ಫುಲ್ ಆಟವನ್ನು ಆಡಿದ ಧ್ರುವ್ ಶೋರೆ, ಯಶ್ ರಾಥೋಡ್ ಸೊಗಸಾದ ಆಟವನ್ನು ಆಡಿತು. ಈ ಜೋಡಿ ಮಿಡ್ಲ್ ಓವರ್‌ನಲ್ಲೂ ವಿಕೆಟ್ ಬೀಳದಂತೆ ಕಾಯ್ದುಕೊಂಡರು. ಈ ಜೋಡಿ ಮೊದಲ ವಿಕೆಟ್‌ಗೆ 34.4 ಓವರ್‌ಗಳಲ್ಲಿ 224 ರನ್ ಜೊತೆಯಾಟದ ಕಾಣಿಕೆ ನೀಡಿತು. ಯಶ್ ರಾಥೋಡ್ 14 ಬೌಂಡರಿ, 1 ಸಿಕ್ಸರ್ ಸಹಾಯದಿಂದ 116 ರನ್ ಬಾರಿಸಿ ಔಟ್ ಆದರು. ಇನ್ನೋಬ್ಬ ಆರಂಭಿಕ ಆಟಗಾರ ಧ್ರುವ್ ಶೋರೆ 114 ರನ್ ಸಿಡಿಸಿ ಔಟ್ ಆದರು. ಇವರು 14 ಬೌಂಡರಿ, 1 ಸಿಕ್ಸರ್ ಸಿಡಿಸಿದರು.
ಟೂರ್ನಿಯುದ್ದಕ್ಕೂ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಕರುಣ್ ನಾಯರ್ 44 ಎಸೆತಗಳಲ್ಲಿ ಅಜೇಯ 88 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಇವರ ಇನಿಂಗ್ಸ್‌ನಲ್ಲಿ 9 ಬೌಂಡರಿ, 5 ಸಿಕ್ಸರ್ ಸೇರಿವೆ. ಇನ್ನು ಆರ್‌ಸಿಬಿ ತಂಡವನ್ನು ಸೇರಿರುವ ಜಿತೇಶ್ ಶರ್ಮಾ 33 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಸಹಾಯದಿಂದ 51 ರನ್ ಸಿಡಿಸಿದರು.
ಮಹಾರಾಷ್ಟ್ರ ಪರ ಸ್ಟಾರ್ ಆಟಗಾರ ಸ್ಥಿರ ಪ್ರದರ್ಶನ ನೀಡಲಿಲ್ಲ. ಅರ್ಶಿನ್ ಕುಲ್ಕರ್ಣಿ 90, ಅಂಕಿತ್ ಭಾವನೆ 50 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಉಳಿದಂತೆ ಸ್ಟಾರ್ ಆಟಗಾರರಾದ ರುತುರಾಜ್ ಗಾಯಕ್ವಾಡ್, ರಾಹುಲ್ ತ್ರಿಪಾಠಿ, ರನ್ ಕಲೆ ಹಾಕುವಲ್ಲಿ ವಿಫಲರಾದರು. ವಿದರ್ಭ ಪರ ದರ್ಶನ್ ನಲ್ಕಂಡೆ, ನಚಿಕೇತ್ ಭೂತೆ ತಲಾ ಮೂರು ವಿಕೆಟ್ ಕಬಳಿಸಿದರು. ಈ ಮೂಲಕ ವಿದರ್ಭ ಮೊದಲ ಬಾರಿಗೆ ಟೂರ್ನಿಯ ಫೈನಲ್ ಪ್ರವೇಶಿಸಿದೆ.