
ತಿರುನೆಲ್ವೇಲಿ, ಆಗಸ್ಟ್ 10: ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ನಡೆದ ಐಸಿಸಿ ವಿಶ್ವಕಪ್‌ನಲ್ಲಿ ಗಾಯಗೊಂಡ ಬಳಿಕ ಭಾರತದ ಆಲ್ ರೌಂಡರ್ ವಿಜಯ್ ಶಂಕರ್, ತಮಿಳ್‌ನಾಡ್ ಪ್ರೀಮಿಯರ್ ಲೀಗ್ (ಟಿಎನ್‌ಪಿಎಲ್) ಮೂಲಕ ಮತ್ತೆ ಮೈದಾನಕ್ಕಿಳಿದಿದ್ದಾರೆ. ಟಿಎನ್‌ಪಿಎಲ್ ನಾಲ್ಕನೇ ಸೀಸನ್‌ನಲ್ಲಿ ವಿಜಯ್ ಪಾದಾರ್ಪಣೆ ಮಾಡಿದ್ದಾರೆ.
ತಿರುನೆಲ್ವೇಲಿಯಲ್ಲಿ ಶುಕ್ರವಾರ (ಆಗಸ್ಟ್ 9) ನಡೆದ ಟಿಎನ್‌ಪಿಎಲ್‌ನಲ್ಲಿ ಮಾಜಿ ಚಾಂಪಿಯನ್ ಚೆಪಕ್ ಸೂಪರ್ ಗಿಲ್ಲೀಸ್ ಪರ ಟೂಟಿ ಪ್ಯಾಟ್ರಿಯೋಟ್ಸ್ ವಿರುದ್ಧದ ಪಂದ್ಯದ ಮೂಲಕ ವಿಜಯ್ ಶಂಕರ್ ಟಿಎನ್‌ಪಿಎಲ್‌ಗೆ ಪಾದಾರ್ಪಣೆ ಮಾಡಿದ್ದಾರೆ. ವಿಶೇಷವೆಂದರೆ ಪಂದ್ಯದಲ್ಲಿ ಮೊದಲ ಎಸೆತಕ್ಕೇ ವಿಜಯ್‌ಗೆ ವಿಕೆಟ್ ಲಭಿಸಿತು.
ಇಂಡಿಯಾ 'ಎ'ಯಲ್ಲಿ ತೊಡಗಿಕೊಳ್ಳುತ್ತಿದ್ದರಿಂದ ಮತ್ತು ಗಾಯದ ಸಮಸ್ಯೆಯ ಕಾರಣಕ್ಕಾಗಿ ಶಂಕರ್‌ಗೆ ಹಿಂದಿನ ಮೂರು ಟಿಎನ್‌ಪಿಎಲ್ ಸೀಸನ್‌ಗಳಲ್ಲಿ ಪಾಲ್ಗೊಳ್ಳಲಾಗಿರಲಿಲ್ಲ. ಶುಕ್ರವಾರದ ಪಂದ್ಯದಲ್ಲಿ ವಿಜಯ್ ಬ್ಯಾಟಿಂಗ್‌ನಲ್ಲಿ ಮಿಂಚದಿದ್ದರೂ (3 ರನ್, 7 ಎಸೆತ) 15 ರನ್‌ಗೆ 2 ವಿಕೆಟ್ ಪಡೆದು ಗಮನ ಸೆಳೆದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಚೆಪಕ್ ಸೂಪರ್ ಗಿಲ್ಲೀಸ್, ಗೋಪಿನಾಥ್ 53, ಉತಿರಸಾಮಿ ಸಸಿದೇವ್ 27 ರನ್‌ನೊಂದಿಗೆ 19.3 ಓವರ್‌ನಲ್ಲಿ ಸರ್ವ ಪತನ ಕಂಡು 127 ರನ್ ಮಾಡಿತು. ಗುರಿ ಬೆಂಬತ್ತಿದ ಟೂಟಿ ಪ್ಯಾಟ್ರಿಯೋಟ್ಸ್ 18.5 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 95 ರನ್ ಪೇರಿಸಲಷ್ಟೇ ಶಕ್ತವಾಯ್ತು.