ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಮವಾರ ವಿಶಾಖಪಟ್ಟಣಂನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯವನ್ನು ಗೆದ್ದು ಪೂರ್ಣ ಎರಡು ಅಂಕ ಕಲೆ ಹಾಕಿದೆ ಎಂದ್ರೆ ಅದಕ್ಕೆ ಕಾರಣ, ಆ ಇಬ್ಬರು ಆಟಗಾರರು. ಒಬ್ಬ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಲ್‌ರೌಂಡರ್ ಆಗಿ ಎಂಟ್ರಿ ಕೊಟ್ಟ ಪ್ಲೇಯರ್. ಇನ್ನೋಬ್ಬ ಮ್ಯಾಚ್ ಫಿನಿಷರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವ ಪ್ಲೇಯರ್. ಇಬ್ಬರು ಆಟಗಾರರ ಕೆಚ್ಚೆದೆಯ ಆಟದಿಂದ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ನಗೆ ಬೀರಿದೆ. ಇದ್ರಲ್ಲಿ ಮ್ಯಾಚ್ ಫಿನಿಷರ್ ಪಾತ್ರದಲ್ಲಿ ಕಾಣಿಸಿಕೊಂಡ ಆಶುತೋಷ್ ಶರ್ಮಾ ಬಗ್ಗೆ ಹಲವರಿಗೆ ಪರಿಚಯ ಇರಬಹುದು. ಆದ್ರೆ ಇನ್ನೊಬ್ಬ ಆಲ್‌ರೌಂಡರ್ ಯಾರು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಎಲ್‌ಎಸ್‌ಜಿ ನೀಡಿದ್ದ 210 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಆಗ ಡೆಲ್ಲಿ ಟ್ರಿಸ್ಟಾನ್ ಸ್ಟಬ್ಸ್ ರೂಪದಲ್ಲಿ ಆರನೇ ವಿಕೆಟ್ ಕಳೆದುಕೊಂಡಿತ್ತು. 12.3 ಓವರ್‌ಗಳು ಮುಕ್ತಾಯವಾಗಿತ್ತು. ಆಗಲೇ ಕ್ರೀಸ್‌ಗೆ ಬಂದವರೇ 20 ವರ್ಷದ ಯುವ ಆಲ್‌ರೌಂಡರ್ ವಿಪ್ರಜ್ ನಿಗಮ್. ಇವರು ಬ್ಯಾಟಿಂಗ್‌ಗೆ ಬಂದಾಗ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ಚಾನ್ಸ್ ಜಸ್ಟ್ 1.6 ಇತ್ತು. ಇವರು ಬ್ಯಾಟ್ ಮಾಡಲು ಬಂದಾಗ ಡೆಲ್ಲಿ ತಂಡಕ್ಕೆ 42 ಎಸೆತಗಳಲ್ಲಿ 97 ರನ್ ಅವಶ್ಯಕತೆ ಇತ್ತು.

ಸ್ಟಾರ್ ಆಟಗಾರರೇ ಔಟ್ ಆಗಿದ್ದಾರೇ, ಯುವ ಆಟಗಾರರು ಬಂದು ಹೋಗುವ ಸಂಪ್ರದಾಯ ಮುಗಿಸ್ತಾರೆ ಎಂದು ಟಿವಿ ಆರಿಸಿದ್ದ ಅಭಿಮಾನಿಗಳಿಗೆ ಶಾಕ್ ಕಾದಿತ್ತು. ವಿಪ್ರಜ್ ನಿಗಮ್, ಆಶುತೋಷ್ ಶರ್ಮಾ ಜೊತೆಗೂಡಿ 7ನೇ ವಿಕೆಟ್‌ಗೆ 22 ಎಸೆತಗಳಲ್ಲಿ 55 ರನ್ ಸೇರಿಸಿದರು. ಈ ಜೊತೆಯಾಟದಲ್ಲಿ ಬಹುಪಾಲು ಕೊಡುಗೆ ವಿಪ್ರಜ್ ಅವರದ್ದಾಗಿದೆ. ಇವರು ಜಸ್ಟ್ 15 ಎಸೆತಗಳಲ್ಲಿ 5 ಬೌಂಡರಿ 2 ಸಿಕ್ಸರ್ ಸಹಾಯದಿಂದ 39 ರನ್ ಬಾರಿಸಿದರು. ಈ ವೇಳೆ ಇವರ ಸ್ಟ್ರೈಕ್ ರೇಟ್ 260 ಇತ್ತು. ಇದು ಡೆಲ್ಲಿ ಗೆಲುವಿನ ಆಸೆಯನ್ನು ಹೆಚ್ಚಿಸಿತು. ಇವರು ಬೌಲಿಂಗ್‌ನಲ್ಲೂ ಮೋಡಿ ಮಾಡಿದರು. ವಿಪ್ರಜ್ 2 ಓವರ್ ಬೌಲ್ ಮಾಡಿ 35 ರನ್ ನೀಡಿ ಆರಂಭಿಕ ಐಡೆನ್ ಮಾರ್ಕ್ರಾಮ್ ಅವರಿಗೆ ಖೆಡ್ಡಾ ತೋಡಿದರು.
ಅಂದಹಾಗೆ ವಿಪ್ರಜ್ ನಿಗಮ್ ಯಾರು ಎಂಬುದನ್ನು ದೇಶೀಯ ಕ್ರಿಕೆಟ್ ಫಾಲೋ ಮಾಡುವರಿಗೆ ಹೇಳುವ ಅವಶ್ಯಕತೆ ಇಲ್ಲ. ಪ್ರಸಕ್ತ ವರ್ಷ ವಿಪ್ರಜ್ ಉತ್ತರ ಪ್ರದೇಶ ತಂಡದ ಪರ ಆಡಿ ಸೈ ಎನಿಸಿಕೊಂಡ ಆಲ್‌ರೌಂಡರ್. ಇವರು ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಆಡಿದ 7 ಪಂದ್ಯಗಳ 5 ಇನಿಂಗ್ಸ್‌ಗಳಲ್ಲಿ 64 ರನ್ ಬಾರಿಸಿದ್ದಾರೆ. ಅಲ್ಲದೆ 8 ವಿಕೆಟ್ ಪಡೆದು ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಿದ್ದರು. ಅಲ್ಲದೆ ಯುಪಿಟಿ20 ಲೀಗ್‌ನಲ್ಲಿ 12 ಪಂದ್ಯಗಳನ್ನು ಆಡಿ 20 ವಿಕೆಟ್ ಕಬಳಿಸಿದ್ದಾರೆ. ಇವರ ಆಟವನ್ನು ನೋಡಿದ ಡೆಲ್ಲಿ ಮೆಗಾ ಹರಾಜಿನಲ್ಲಿ 50 ಲಕ್ಷ ನೀಡಿ ತಂಡಕ್ಕೆ ಬರ ಮಾಡಿ ಕೊಂಡಿತು.
ವಿಪ್ರಜ್ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ಕುಲ್‌ದೀಪ್ ಯಾದವ್, "ಅವರು ಅಂಡರ್ 19 ದಿನಗಳಲ್ಲಿ ಒಬ್ಬ ಬ್ಯಾಟರ್ ಆಗಿದ್ದರು. ಬಳಿಕ ಅವರು ಲೆಗ್ ಸ್ಪಿನ್ ಮಾಡಲು ಆರಂಭಿಸಿದರು. ನಾನು ಅವರು ದೊಡ್ಡ ಹೊಡೆತಗಳನ್ನು ಬಾರಿಸುವುದನ್ನು ನೋಡಿದ್ದೇನೆ. ಅಲ್ಲದೆ ಭಯವಿಲ್ಲದೆ ಆಡುತ್ತಾರೆ. ವಿಪ್ರಜ್ ಬೌಲಿಂಗ್ ಬಗ್ಗೆಯೂ ಗಮನ ಹರಿಸಿದ್ದಾರೆ ಎಂದು ಯುವ ಆಟಗಾರನ ಬೆನ್ನು ತಟ್ಟಿದರು.

ನಿಜಕ್ಕೂ ವಿಪ್ರಜ್ ಒಬ್ಬ ಟ್ಯಾಲೆಂಟೆಡ್ ಆಟಗಾರ. ಯುಪಿ ಪ್ರೀಮಿಯರ್ ಲೀಗ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ರಣಜಿಯಲ್ಲೂ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ವಿಪ್ರಜ್ ಈ ರೀತಿಯ ಹೊಡೆತಗಳನ್ನು ನಾನು ಈ ಮೊದಲು ನೋಡಿರಲಿಲ್ಲ. ನನಗೆ ವಿಶ್ವಾಸವಿದೆ ಅವರು ದೊಡ್ಡ ಯಶಸ್ಸನ್ನು ಸಾಧಿಸುತ್ತಾರೆ ಎಂದು ಚೈನಾ ಮೆನ್ ಬೌಲರ್ ಕುಲ್‌ದೀಪ್ ಹೇಳಿದ್ರು.