ಆಸ್ಟ್ರೇಲಿಯಾ ಪ್ರವಾಸದಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾದ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಮೇಲೆ ಪ್ರಶ್ನೆಗಳು ಎದ್ದಿದ್ದವು. ಇವರು ದೇಶೀಯ ಟೂರ್ನಿಗಳಲ್ಲಿ ಆಡಿ ಫಾರ್ಮ್ ಕಂಡುಕೊಳ್ಳಬೇಕು ಎಂಬ ಚರ್ಚೆಗಳು ಆರಂಭವಾಗಿದ್ದವು. ಆರಂಭದಲ್ಲಿ ಮನಸ್ಸು ಮಾಡದ ಸ್ಟಾರ್ ಕೊನೆಗೆ ಬಿಸಿಸಿಐ ಒತ್ತಡಕ್ಕೆ ಮಣಿದು, ದೆಹಲಿ ಪರ ರಣಜಿ ಆಡಲು ಸಜ್ಜಾದರು. ದಶಕದ ಬಳಿಕ ದೆಹಲಿ ತಂಡವನ್ನು ಪ್ರತಿನಿಧಿಸುವ ಅವಕಾಶ ಅವರದ್ದಾಗಿತ್ತು. ಅಂತೆಯೇ ದೆಹಲಿ ಕ್ಯಾಂಪ್‌ನಲ್ಲಿ ಅತಿ ಉತ್ಸಾಹ ಕಾಣಿಸಿಕೊಂಡಿತು. ಈಗ ವಿರಾಟ್ ಕೊಹ್ಲಿ ದೇಶೀಯ ಟೂರ್ನಿಯಲ್ಲೂ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.
ದೆಹಲಿಯ ಅರುಣ್ ಜೇಟ್ಲಿ ಅಂಗಳದಲ್ಲಿ ನಡೆಯುತ್ತಿರುವ ದೆಹಲಿ ಹಾಗೂ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಶುಕ್ರವಾರ ಬ್ಯಾಟ್ ಮಾಡಲು ಕ್ರೀಸ್‌ಗೆ ಬಂದರು. ರಾಷ್ಟ್ರೀಯ ತಂಡದಲ್ಲಿ ಆಡುವಂತೆ ವಿರಾಟ್, ದೇಶೀಯ ಸರ್ಕಿಟ್‌ನಲ್ಲೂ ನಾಲ್ಕನೇ ಕ್ರಮಾಂಕದಲ್ಲೇ ಬ್ಯಾಟ್ ಮಾಡಿದರು. ಆದರೆ ಅವರಿಗೆ ಈ ಟೂರ್ನಿಯಲ್ಲೂ ನಿರಾಸೆ ಬಹುವಾಗಿ ಕಾಡಿತು. ಇವರ ಆಟವನ್ನು ನೋಡಲು ದೆಹಲಿಯ ಮೈದಾನಕ್ಕೆ ಬಂದಿದ್ದ ಅಭಿಮಾನಿಗಳಿಗೂ ಭಾರೀ ನಿರಾಸೆ. ವಿರಾಟ್ ಕೊಹ್ಲಿ ಸಿಂಗಲ್ ಡಿಜಿಟ್‌ನಲ್ಲಿ ಆಟ ಮುಗಿಸಿದರು.

ತಾನು ಆಡಿ ಬೆಳೆದ ಅಂಗಳದಲ್ಲಿ ದೇಶೀಯ ತಂಡವನ್ನು ದಶಕಗಳ ಬಳಿಕ ಪ್ರತಿನಿಧಿಸುವ ಅವಕಾಶ ವಿರಾಟ್ ಅವರದ್ದಾಗಿತ್ತು. 12 ವರ್ಷದ ಹಿಂದೆ ದೇಶೀಯ ತಂಡದ ಪರ ಆಡಿದ್ದಾಗ, ವಿರಾಟ್ ಉದಯೋನ್ಮುಖ ಆಟಗಾರ. ಇನ್ನು ವಿಶ್ವ ಕ್ರಿಕೆಟ್‌ನಲ್ಲಿ ಅಂಬೇಗಾಲು ಇಡುತ್ತಿದ್ದರು. ಆದರೆ ಈಗ 12 ವರ್ಷಗಳು ಕಳೆದಿವೆ. ವಿರಾಟ್ ವಿಶ್ವ ಕ್ರಿಕೆಟ್‌ನಲ್ಲಿ ತಮ್ಮದೇ ಛಾರ್ಮ್ ಹೊಂದಿದ್ದಾರೆ. ಇವರನ್ನು ನೋಡಲು ಕ್ರೀಡಾಂಗಣದಲ್ಲಿ ಅಭಿಮಾನಿಗಳು ನೆರೆದಿದ್ದರು. ಆದರೆ ಇವರ ಆಟ ಆರು ರನ್‌ಗಳಿಗೆ ಮಾತ್ರ ಸೀಮಿತವಾಯಿತು. ಇದೇ ವೇಳೆ ಒಂದು ಬೌಂಡರಿ ಸಹ ಬಾರಿಸಿದ್ದಾರೆ.
ವಿರಾಟ್ ಕೊಹ್ಲಿಯನ್ನು ಔಟ್ ಮಾಡುವಲ್ಲಿ ಯಶಸ್ವಿಯಾದ ಬೌಲರ್ ಹಿಮಾಂಶು ಸಂಗ್ವಾನ್. ಎಲ್ಲ ಬೌಲರ್‌ಗಳು ಒಂದು ಕನಸು ಈಗಿನ ಕ್ರಿಕೆಟ್ ಲೋಕದಲ್ಲಿ ಹೊಂದಿರುತ್ತಾರೆ. ಅದೆನೆಂದರೆ ವಿರಾಟ್ ಅವರನ್ನು ಔಟ್ ಮಾಡುವುದು. ವಿರಾಟ್ ಎದುರಿಸಿದ 15 ಎಸೆತದಲ್ಲಿ ಅವರಿಗೆ ಪೆವಿಲಿಯನ್ ಹಾದಿ ತೋರಿಸುವಲ್ಲಿ ಹಿಮಾಂಶು ಸಂಗ್ವಾನ್ ಯಶಸ್ವಿಯಾದರು. ಈ ಮೂಲಕ ಹಿಮಾಂಶು ತಮ್ಮ ದೇಶೀಯ ಟೂರ್ನಿಯ ಅತಿ ದೊಡ್ಡ ವಿಕೆಟ್ ಪಡೆದು ಬೀಗಿದರು.

ದೆಹಲಿ ವಿರುದ್ಧ ರೈಲ್ವೇಸ್ ಪರ ಆಡುತ್ತಿರುವ ಹಿಮಾಂಶು ಸಂಗ್ವಾನ್, ಮೂಲತಃ ದೆಹಲಿ ನಿವಾಸಿ. ಸದ್ಯ ಇವರಿಗೆ 29 ವಯಸ್ಸು. ಇವರು ರಣಜಿ ಟೂರ್ನಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಒಟ್ಟು 23 ಪ್ರಥಮ ದರ್ಜೆ ಪಂದ್ಯಗಳಲ್ಲಿ 77 ವಿಕೆಟ್‌ಗಳನ್ನು ಪಡೆದಿದ್ದಾರೆ. ಇವರು ರೈಲ್ವೇಸ್ ಪರ 2019ರ ಡಿಸೆಂಬರ್ ನಲ್ಲಿ ಪದಾರ್ಪಣೆ ಮಾಡಿದರು. ಇನ್ನು ಇವರು ಲೀಸ್ಟ್ ಎ ಪಂದ್ಯಗಳನ್ನು ಸಹ ಆಡಿದ್ದು. 21 ವಿಕೆಟ್ ಪಡೆದಿದ್ದಾರೆ. ಅಲ್ಲದೆ ಇನ್ನೊಂದು ಇಂಟ್ರಸ್ಟಿಂಗ್ ವಿಚಾರ ಏನಪ್ಪಾ ಅಂದರೆ ಇವರು ದೆಹಲಿ ಅಂಟರ 19 ಪರ ಸಹ ಆಡಿ ಸೈ ಎನಿಸಿಕೊಂಡಿದ್ದಾರೆ.