ನವದೆಹಲಿ, ಅಕ್ಟೋಬರ್ 14: ತಮ್ಮ ನಾಯಕತ್ವದ ಐವತ್ತನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಗಳಿಸುವ ಜೊತೆಗೆ ಭರ್ಜರಿ ಗೆಲವು ಸಂಪಾದಿಸಿದ ವಿರಾಟ್ ಕೊಹ್ಲಿಗೆ ಈ ಟೆಸ್ಟ್ ಗೆಲುವು ಮತ್ತೊಂದು ಗರಿಯನ್ನು ತಂದುಕೊಟ್ಟಿದೆ.
ಪುಣೆಯಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಸಿಕ್ಕ ಟೆಸ್ಟ್ ಗೆಲುವು ವಿರಾಟ್ ಕೊಹ್ಲಿ ಅವರನ್ನು ವಿಶ್ವ ಕ್ರಿಕೆಟ್ನ ಅತ್ಯಂತ ಯಶಸ್ವಿ ಟೆಸ್ಟ್ ನಾಯಕರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ನಿಲ್ಲಿಸಿದೆ.
ಐಸಿಸಿ ಟೆಸ್ಟ್ Ranking: ಮೊದಲ ಸ್ಥಾನದ ಸಮೀಪ ವಿರಾಟ್ ಕೊಹ್ಲಿ
ನಾಯಕನಾಗಿ ಆಡಿದ ಮೊದಲ ಐವತ್ತು ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ಜಯಗಳಿಸಿದ ನಾಯಕರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಸ್ಟೀವ್ ವಾ ಇದ್ದರೆ, ಎರಡರಲ್ಲಿ ರಿಕಿ ಪಾಂಟಿಂಗ್ ಇದ್ದಾರೆ.
ವಿರಾಟ್ ಕೊಹ್ಲಿ ಟೆಸ್ಟ್ ನಾಯಕನಾಗಿ ತಂಡವನ್ನು 50 ಮ್ಯಾಚುಗಳಲ್ಲಿ ಮುನ್ನಡೆಸಿದ್ದು, ಇದರಲ್ಲಿ 30 ಪಂದ್ಯಗಳಲ್ಲಿ ಗೆಲುವು ಕಂಡಿದ್ದಾರೆ. ಸ್ವದೇಶಿ ಪಿಚ್ನಲ್ಲಿ ಆಡಿದ 23 ಪಂದ್ಯಗಳಲ್ಲಿ 17 ರಲ್ಲಿ ಜಯಗಳಿಸಿದ್ದರೆ. ವಿದೇಶದಲ್ಲಿ ಆಡಿರುವ 27 ಟೆಸ್ಟ್ ಪಂದ್ಯದಲ್ಲಿ 13 ರಲ್ಲಿ ಜಯಗಳಿಸಿದ್ದಾರೆ.
ಆಸ್ಟ್ರೇಲಿಯಾದ ಸ್ಟೀವ್ ವಾ ನಾಯಕನಾಗಿ ಆಡಿದ ಮೊದಲ 50 ಟೆಸ್ಟ್ ಪಂದ್ಯದಲ್ಲಿ 37 ಗೆಲುವು ಕಂಡು ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎನಿಸಿಕೊಂಡಿದ್ದರು. ಎರಡನೇ ಸ್ಥಾನದಲ್ಲಿರುವ ರಿಕಿ ಪಾಂಟಿಂಗ್ ಮೊದಲ 50 ಟೆಸ್ಟ್ ಪಂದ್ಯದಲ್ಲಿ 35 ರಲ್ಲಿ ಗೆಲುವು ಕಂಡಿದ್ದರು.
ಪುಣೆಯಲ್ಲಿ ಟೆಸ್ಟ್ ಗೆಲ್ಲುವ ಮೂಲಕ ಭಾರತ ತಂಡ ಮತ್ತೊಂದು ದಾಖಲೆ ಬರೆದಿದ್ದು, ಆಸ್ಟ್ರೇಲಿಯಾದ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕಿತ್ತುಕೊಂಡಿದೆ. ಆಸ್ಟ್ರೇಲಿಯಾ ಟೆಸ್ಟ್ ತಂಡವು ಸತತವಾಗಿ 10 ಸರಣಿಗಳನ್ನು ಗೆದ್ದಿತ್ತು, ಆದರೆ ಭಾರತ ತಂಡವು ಪುಣೆ ಟೆಸ್ಟ್ ಗೆಲ್ಲುವ ಮೂಲಕ ಸತತ 11 ಟೆಸ್ಟ್ ಗೆದ್ದ ಸಾಧನೆ ಮಾಡಿದೆ.