ಕೊಹ್ಲಿ ಈಗಲೂ ನಾಯಕನೇ, ಆತ ನಾಯಕನಲ್ಲ ಎಂದು ಈ ಐವರು ಹೇಳಬೇಕಷ್ಟೇ ಎಂದ ಜಡೇಜಾ

ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಹಾಗೂ ಏಕದಿನ ಎರಡೂ ಸರಣಿಗಳಲ್ಲಿಯೂ ಸೋಲುವುದರ ಮೂಲಕ ಮುಖಭಂಗಕ್ಕೊಳಗಾಗಿದ್ದ ಟೀಮ್ ಇಂಡಿಯಾ ಸದ್ಯ ತವರಿನಲ್ಲಿ ಕೆರಿಬಿಯನ್ನರ ವಿರುದ್ಧದ ಸೀಮಿತ ಓವರ್ ಸರಣಿಗಳಲ್ಲಿ ಭಾಗವಹಿಸುತ್ತಿದೆ. ಇತ್ತಂಡಗಳ ನಡುವೆ ಮೊದಲಿಗೆ ಏಕದಿನ ಸರಣಿ ನಡೆಯುತ್ತಿದ್ದು ಪ್ರಥಮ ಏಕದಿನ ಪಂದ್ಯ ಕಳೆದ ಭಾನುವಾರದಂದು ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು.
ಈ ಪಂದ್ಯದಲ್ಲಿ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ 6 ವಿಕೆಟ್‍ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಸರಣಿಯಲ್ಲಿ 1-0 ಅಂತರದ ಮುನ್ನಡೆಯನ್ನು ಸಾಧಿಸಿದೆ. ಇನ್ನು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಅಲಭ್ಯರಾಗಿದ್ದ ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ವಿರುದ್ಧದ ಈ ಸರಣಿಯ ಮೂಲಕ ಭಾರತ ಏಕದಿನ ತಂಡದ ಪೂರ್ಣಾವಧಿ ನಾಯಕನಾಗಿ ಅಧಿಕಾರವನ್ನು ಸ್ವೀಕರಿಸಿದ್ದಾರೆ. ಹೀಗೆ ನಾಯಕತ್ವ ಸ್ವೀಕರಿಸಿದ ಪ್ರಥಮ ಪಂದ್ಯದಲ್ಲಿಯೇ ರೋಹಿತ್ ಶರ್ಮಾ ಗೆಲುವಿನ ರುಚಿ ನೋಡಿದ್ದಾರೆ. ಇನ್ನು ಈ ಪಂದ್ಯದಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲರಾದರೂ ಕೂಡ ಟೀಮ್ ಇಂಡಿಯಾದ ಫೀಲ್ಡಿಂಗ್ ವೇಳೆ ಮೈದಾನದಲ್ಲಿ ತಂಡದ ಇತರೆ ಆಟಗಾರರಿಗೆ ಸಲಹೆಗಳನ್ನು ನೀಡುವುದರ ಮೂಲಕ ಎಲ್ಲರ ಗಮನ ಸೆಳೆದರು.
ವಿರಾಟ್ ಕೊಹ್ಲಿ ಹೀಗೆ ಸಲಹೆಗಳನ್ನು ನೀಡುತ್ತಿರುವುದನ್ನು ಕಂಡ ಕೆಲ ನೆಟ್ಟಿಗರು ವಿರಾಟ್ ಕೊಹ್ಲಿ ನಾಯಕ ಸ್ಥಾನದಿಂದ ಕೆಳಗಿಳಿದಿರಬಹುದು ಆದರೆ ಈಗಲೂ ಸಹ ಈ ರೀತಿ ಸಲಹೆಗಳನ್ನು ನೀಡುತ್ತಾ ತಂಡವನ್ನು ಮುನ್ನಡೆಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರೆ, ಇನ್ನೂ ಕೆಲ ಮಂದಿ ವಿರಾಟ್ ಕೊಹ್ಲಿ ತಾನು ನಾಯಕನಲ್ಲ ಎಂಬುದನ್ನು ಮರೆತು ಎಂದಿನಂತೆ ಮೈದಾನದಲ್ಲಿ ನಾಯಕತ್ವದ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ. ಹೀಗೆ ನಾಯಕ ರೋಹಿತ್ ಶರ್ಮಾ ಜತೆ ಸೇರಿ ಟೀಮ್ ಇಂಡಿಯಾದ ಫೀಲ್ಡಿಂಗ್ ಮತ್ತು ಬೌಲಿಂಗ್ ವಿಭಾಗಕ್ಕೆ ವಿರಾಟ್ ಕೊಹ್ಲಿ ಸಲಹೆಗಳನ್ನು ನೀಡಿದ್ದರ ಕುರಿತು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ಈ ಕುರಿತಾಗಿ ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಕೂಡ ಮಾತನಾಡಿದ್ದು ಈ ಕೆಳಕಂಡಂತೆ ಹೇಳಿಕೆಗಳನ್ನು ನೀಡಿದ್ದಾರೆ.

ನಾಯಕತ್ವ ನಿರ್ವಹಿಸಿದವರು ಸ್ಥಾನ ಕಳೆದುಕೊಂಡ ನಂತರವೂ ಅದೇ ರೀತಿ ವರ್ತಿಸುತ್ತಾರೆ
ನೀವು ಟೀಮ್ ಇಂಡಿಯಾವನ್ನು ಹಲವಾರು ವರ್ಷಗಳ ಕಾಲ ನಾಯಕನಾಗಿ ಮುನ್ನಡೆಸಿ, ತಂಡದ ಏಳಿಗೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿ ನಂತರ ನಾಯಕತ್ವ ಕಳೆದುಕೊಂಡು ಮತ್ತೆ ಮೈದಾನಕ್ಕಿಳಿದರೆ ಈ ಹಿಂದೆ ನೀವು ನಾಯಕನಾಗಿ ಹೇಗೆ ನಡೆದುಕೊಂಡಿದ್ದೆರೋ ಅದೇ ರೀತಿ ಈ ಸಂದರ್ಭದಲ್ಲಿಯೂ ಕೂಡ ನಡೆದುಕೊಳ್ಳುತ್ತೀರ ಎಂದು ಅಜಯ್ ಜಡೇಜಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವ ಪಡೆದುಕೊಂಡ ಬ್ಯಾಕ್ ಬೆಂಚರ್ ಅಲ್ಲ, ಆತ ನಾಯಕನಾಗಿ ಆಯ್ಕೆಯಾಗುವುದಕ್ಕೂ ಮುನ್ನವೇ ತಂಡವನ್ನು ಮುನ್ನೆಡೆಸುವ ಲಕ್ಷಣವನ್ನು ಹೊಂದಿದ್ದಂತಹ ಆಟಗಾರನಾಗಿದ್ದರು ಎಂದು ಅಜಯ್ ಜಡೇಜಾ ಹೊಗಳಿದ್ದಾರೆ. 2011 ವಿಶ್ವಕಪ್ ಗೆಲುವಿನ ನಂತರ ಸಚಿನ್ ತೆಂಡೂಲ್ಕರ್ ಅವರನ್ನು ಹೆಗಲಿನ ಮೇಲೆ ಹೊತ್ತುಕೊಳ್ಳಲು ವಿರಾಟ್ ಕೊಹ್ಲಿ ಅವರಿಗೆ ಯಾರೂ ಹೇಳಲಿಲ್ಲ ಬದಲಾಗಿ ಅವರೇ ಮುಂದಾಲೋಚನೆಯನ್ನು ನಡೆಸಿ ಎತ್ತಿಕೊಂಡರು ಎಂದು ಇದೇ ಸಮಯದಲ್ಲಿ ಅಜಯ್ ಜಡೇಜಾ ಹೇಳಿದ್ದಾರೆ.

ಕೊಹ್ಲಿ ನಾಯಕನಲ್ಲ ಎಂದು ಈ ಐವರು ಹೇಳಬೇಕು ಅಷ್ಟೇ
ವಿರಾಟ್ ಕೊಹ್ಲಿ ಯಾವಾಗಲೂ ನಾಯಕನೇ ಎಂದು ಹೇಳಿಕೆ ನೀಡಿರುವ ಅಜಯ್ ಜಡೇಜಾ ಕೊಹ್ಲಿಯ ಶಕ್ತಿ ಮತ್ತು ಮನಸ್ಥಿತಿಗಳು ಆತನನ್ನು ನಾಯಕ ಸ್ಥಾನಕ್ಕೇರುವಂತೆ ಮಾಡಿದವು ಹಾಗೂ ಆತ ನಾಯಕನಲ್ಲ ಎಂದು ಇತ್ತೀಚೆಗಷ್ಟೇ ಇತರರಿಂದ ಆಯ್ಕೆಯಾದ ಐವರು ಭಾವಿಸಿಕೊಳ್ಳಬೇಕಷ್ಟೇ ಎಂದು ಹೇಳಿಕೆ ನೀಡಿದ್ದಾರೆ. ಆಟಗಾರರು ಮತ್ತು ಆಯ್ಕೆಗಾರರು ಇಂದು ಬರುತ್ತಾರೆ ನಾಳೆ ಹೋಗುತ್ತಾರೆ, ಆದರೆ ಲೀಡರ್ ಯಾವತ್ತಿದ್ದರೂ ಒಬ್ಬನೇ ಎಂದ ಅಜಯ್ ಜಡೇಜಾ ಕೊಹ್ಲಿ ನಾಯಕನಲ್ಲ ಎನ್ನುವವರಿಗೆ ಟಾಂಗ್ ನೀಡಿದ್ದಾರೆ.

ಡಿಆರ್‌ಎಸ್ ಆಯ್ಕೆ ಮಾಡಿಕೊಳ್ಳಲೆಂದು ರೋಹಿತ್ ಶರ್ಮಾಗೆ ಸಲಹೆ ನೀಡಿದ್ದ ಕೊಹ್ಲಿ
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪ್ರಥಮ ಏಕದಿನ ಪಂದ್ಯದ 21ನೇ ಓವರ್ ಬೌಲಿಂಗ್ ಮಾಡಿದ ಯುಜ್ವೇಂದ್ರ ಚಹಲ್ ಎಸೆತವನ್ನು ಬಾರಿಸಲು ಹೋದ ಬ್ರೂಕ್ಸ್ ಯಶಸ್ವಿಯಾಗಲಿಲ್ಲ. ಈ ಸಂದರ್ಭದಲ್ಲಿ ಬ್ಯಾಟ್ ತಾಕಿದ್ದ ಬಾಲ್ ನೇರವಾಗಿ ವಿಕೆಟ್ ಕೀಪರ್ ಕೈ ಸೇರಿತ್ತು. ಆದರೆ ಅಂಪೈರ್ ಇದಕ್ಕೆ ನಾಟ್ಔಟ್ ಎಂದು ತೀರ್ಪನ್ನು ನೀಡಿದ್ದರು. ಈ ಸಂದರ್ಭದಲ್ಲಿ ಯುಜ್ವೇಂದ್ರ ಚಹಲ್ ನಾಯಕ ರೋಹಿತ್ ಶರ್ಮಾಗೆ ಡಿಆರ್‌ಎಸ್ ತೆಗೆದುಕೊಳ್ಳುವಂತೆ ಒತ್ತಾಯ ಮಾಡಿದ್ದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ವಿರಾಟ್ ಕೊಹ್ಲಿ ಡಿಆರ್‌ಎಸ್ ತೆಗೆದುಕೊಳ್ಳುವಂತೆ ರೋಹಿತ್ ಶರ್ಮಾಗೆ ಸಲಹೆ ನೀಡಿದರು ಮತ್ತು ಇದರಂತೆ ಡಿಆರ್‌ಎಸ್ ಮೊರೆ ಹೋದ ಟೀಮ್ ಇಂಡಿಯಾಗೆ ಮುನ್ನಡೆ ದೊರೆಯಿತು. ಹೀಗೆ ವಿರಾಟ್ ಕೊಹ್ಲಿ ಮೈದಾನದಲ್ಲಿ ರೋಹಿತ್ ಶರ್ಮಾಗೆ ಸಲಹೆಗಳನ್ನು ನೀಡುತ್ತಾ ಈಗಲೂ ಪರೋಕ್ಷವಾಗಿ ನಾಯಕನಾಗಿಯೇ ತಂಡದಲ್ಲಿ ಉಳಿದುಕೊಂಡಿದ್ದಾರೆ ಎಂದು ಹಲವಾರು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications