ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ನಿರ್ಣಾಯಕ ಮೂರನೇ ಏಕದಿನ ಪಂದ್ಯ ಭಾನುವಾರ ನಡೆಯಲಿದೆ. ಈ ಪಂದ್ಯಕ್ಕಾಗಿ ಎರಡೂ ತಂಡಗಳ ಆಟಗಾರರು ಇಂದೋರ್ ತಲುಪಿದ್ದಾರೆ. ಭಾರತ ಸಹ ಈ ಪಂದ್ಯದಲ್ಲಿ ಜಯ ಸಾಧಿಸಿ, ತವರಿನಲ್ಲಿ ಮತ್ತೊಂದು ಸರಣಿ ಗೆಲುವಿನ ನಗೆ ಬೀರಲು ಪ್ಲ್ಯಾನ್ ಮಾಡಿಕೊಂಡಿದೆ. ಈ ನಡುವೆ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಉಜ್ಜಯಿನಿ ಮಹಾಕಾಳೇಶ್ವರ ದರ್ಶನ ಪಡೆದಿದ್ದಾರೆ.
ವಿರಾಟ್ ಕೊಹ್ಲಿ ಅವರೊಂದಿಗೆ ಚೈನಾ ಮನ್ ಬೌಲರ್ ಕುಲ್‌ದೀಪ್ ಯಾದವ್, ಫೀಲ್ಡಿಂಗ್ ಕೋಚ್ ದಿಲೀಪ್ ಶನಿವಾರ ಮಹಾಕಾಳೇಶ್ವರ ದರ್ಶನ ಪಡೆದರು. ಇದೇ ವೇಳೆ ಆಟಗಾರರು ಭಸ್ಮ ಆರತಿಯಲ್ಲೂ ಸಹ ಭಾಗವಹಿಸಿದ್ದರು. ದೇವಸ್ಥಾನ ಆಡಳಿತ ಮಂಡಳಿ ವಿರಾಟ್ ಕೊಹ್ಲಿ ಅವರನ್ನು ಸನ್ಮಾನಿಸಿತು. ವಿರಾಟ್, ಕುಲ್‌ದೀಪ್ ಅವರಿಗಿಂತಲೂ ಮೊದಲು ಶುಕ್ರವಾರ ಟೀಮ್ ಇಂಡಿಯಾದ ಹೆಡ್ ಕೋಚ್ ಗೌತಮ್ ಗಂಭೀರ್, ಕನ್ನಡಿಗ ಕೆಎಲ್ ರಾಹುಲ್ ಸಹ ಮಹಾಕಾಳೇಶ್ವರನ ದರ್ಶನ ಪಡೆದರು.

ದರ್ಶನ ಪಡೆದ ಬಳಿಕ ಮಾತನಾಡಿದ ಕುಲ್‌ದೀಪ್ ಯಾದವ್, ಇಲ್ಲಿಗೆ ಭೇಟಿ ನೀಡಿದ್ದು ಒಳ್ಳೆಯ ಅನುಭವ. ಮಹಾಕಾಲೇಶ್ವರನ ದರ್ಶನ ಪಡೆಯುವುದು ಯಾವಾಗಲೂ ಆನಂದ ತರುತ್ತದೆ. ಅವರ ಅನುಗ್ರಹದಿಂದ ಎಲ್ಲವೂ ಸರಿಯಾಗಿ ನಡೆಯುತ್ತಿದೆ. ನನಗೆ ನಂಬಿಕೆ ಇದೆ, ದೇವರು ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಮೂರು ಪಂದ್ಯಗಳ ಸರಣಿಯ ಎರಡು ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದಿವೆ. ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದ್ದರೆ, ಎರಡನೇ ಪಂದ್ಯದಲ್ಲಿ ಪ್ರವಾಸಿ ಕಿವೀಸ್ ತಂಡ ಭರ್ಜರಿ ಜಯ ಸಾಧಿಸಿತ್ತು. ಹೀಗಾಗಿ ಮೂರನೇ ಏಕದಿನ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಅಬ್ಬರಿಸಲು ಪ್ಲ್ಯಾನ್ ಮಾಡಿಕೊಂಡಿದೆ.
ವಿರಾಟ್ ಕೊಹ್ಲಿ ಎರಡನೇ ಏಕದಿನ ಪಂದ್ಯದಲ್ಲಿ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾಗಿದ್ದರು. ಆದರೆ ಇವರು ಸತತ 5 ಅರ್ಧಶತಕಗಳನ್ನು ಏಕದಿನ ಫಾರ್ಮೆಟ್‌ನಲ್ಲಿ ಬಾರಿಸಿದ್ದಾರೆ. ಹೀಗಾಗಿ ಇವರ ಆತ್ಮವಿಶ್ವಾಸ ಭರ್ಜರಿಯಾಗಿದೆ. ಇಂದೋರ್‌ನಲ್ಲೂ ವಿರಾಟ್ ತಮ್ಮ ಸ್ಥಿರ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಗೆಲುವಿನಲ್ಲಿ ಅಮೂಲ್ಯ ಕಾಣಿಕೆ ನೀಡುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇನ್ನು ಕನ್ನಡಿಗ ಕೆಎಲ್ ರಾಹುಲ್ ಅವರ ಮೇಲೂ ಎಲ್ಲರ ಕಣ್ಣುಗಳು ನೆಟ್ಟಿವೆ. ಇವರು ರಾಜ್‌ಕೋಟ್‌ನಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಶತಕ ಬಾರಿಸಿದ್ದರು. ಇದೇ ಪ್ರದರ್ಶನವನ್ನು ಇವರು ಮೂರನೇ ಪಂದ್ಯದಲ್ಲೂ ನೀಡುವ ವಿಶ್ವಾಸ ಹೊಂದಿದ್ದಾರೆ.
ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಮಹಾಕಾಲೇಶ್ವರನ ದರ್ಶನ ಪಡೆದಿದ್ದು, ಭಾನುವಾರ ಬಿಗ್ ಇನಿಂಗ್ಸ್ ಮೂಡಿ ಬರುತ್ತದಾ ಎಂದು ಅಭಿಮಾನಿಗಳು ಕಾದು ಕುಳಿತಿದ್ದಾರೆ.