ವಿರಾಟ್ ಕೊಹ್ಲಿ, ಭಾರತ ಕ್ರಿಕೆಟ್ ತಂಡಕ್ಕೆ ಭಯೋತ್ಪಾದನಾ ಬೆದರಿಕೆ!

ನವದೆಹಲಿ, ಅಕ್ಟೋಬರ್ 29: ನವೆಂಬರ್ 3ರಿಂದ ಆರಂಭಗೊಳ್ಳಲಿರುವ ಬಾಂಗ್ಲಾ vs ಭಾರತ ಟಿ20 ಸರಣಿಗಾಗಿ ಸಜ್ಜಾಗಿರುವ ಟೀಮ್ ಇಂಡಿಯಾಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಲಾಗಿದೆ. ಭಾರತ ಕ್ರಿಕೆಟ್ ತಂಡಕ್ಕೆ ಭಯೋತ್ಪಾದನಾ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿಗೆ(ಎನ್‌ಐಎ) ಒಂದು ಅನಾಮಧೇಯ ಪತ್ರ ಬಂದಿದೆ. ಅದರಲ್ಲಿ ಭಾರತ ತಂಡಕ್ಕೆ ಮುಖ್ಯವಾಗಿ ತಂಡದ ನಾಯಕ ವಿರಾಟ್ ಕೊಹ್ಲಿಗೆ ಬೆದರಿಕೆ ಇರುವುದಾಗಿ ಹೇಳಲಾಗಿತ್ತು ಎಂದು ಮೂಲವೊಂದು ಮಂಗಳವಾರ ತಿಳಿಸಿದೆ.
ಭಯೋತ್ಪಾದನಾ ಬೆದರಿಕೆ ಸುಳಿವು ದೊರೆತ ಕೂಡಲೇ ಆ ಪತ್ರವನ್ನು ಎನ್‌ಐಎ. ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾಕ್ಕೆ (ಬಿಸಿಸಿಐ) ರವಾನಿಸಿದೆ.

ರಾಜಕಾರಣಿಗಳು ಟಾರ್ಗೆಟ್
ಪೊಲೀಸ್ ಮೂಲಗಳ ಪ್ರಕಾರ ಭಾರತದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್, ಗೃಹಮಂತ್ರಿ ಅಮಿತ್ ಶಾ, ಭಾರತೀಯ ಜನತಾ ಪಾರ್ಟಿಯ ಹಿರಿಯ ಮುಖಂಡ ಲಾಲ್ ಕೃಷ್ಣ ಅಡ್ವಾಣಿ, ಬಿಜೆಪಿ ವರ್ಕಿಂಗ್ ಪ್ರೆಸಿಡೆಂಟ್ ಜೆಪಿ ನಡ್ಡ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಇವರ ಹೆಸರೂ ಪತ್ರದಲ್ಲಿನ ಬೆದರಿಕೆ ಪಟ್ಟಿಯಲ್ಲಿದೆ.

ಯಾವ ಸಂಘಟನೆ ಕೃತ್ಯ
ಬೆದರಿಕೆ ಒಡ್ಡಿರುವ ಸಂಘಟನೆ ತನ್ನ ಸುಳಿವೂ ಕೂಡ ನೀಡಿದೆ ಎನ್ನಲಾಗಿದೆ. ಆ ಅನಾಮಧೇಯ ಪತ್ರದಲ್ಲಿ ತಮ್ಮನ್ನು ತಾವು ಕೇರಳದ ಕೋಝಿಕೊಡೆಯಲ್ಲಿರುವ ಆಲ್ ಇಂಡಿಯಾ ಲಷ್ಕರ್ ಸಂಘಟನೆ ಎಂದು ಹೇಳಿದೆ. ಕೊಹ್ಲಿ ಮತ್ತು ಕೆಲ ಪ್ರಮುಖ ರಾಜಕಾರಣಿಗಳನ್ನು ತಾವು ಗುರಿಯಾಗಿಸಿಕೊಂಡಿರುವುದಾಗಿ ಪತ್ರದಲ್ಲಿ ಬರೆಯಲಾಗಿದೆ ಎಂದು ತಿಳಿದು ಬಂದಿದೆ.

ಬಾಂಗ್ಲಾ ಪ್ರವಾಸ ಸರಣಿ
ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ಬಾಂಗ್ಲಾದೇಶ, ನವೆಂಬರ್ 3ರಿಂದ ದೆಹಲಿ, ರಾಜ್‌ಕೋಟ್, ನಾಗ್ಪುರ್ ನಲ್ಲಿ 3 ಟಿ20 ಪಂದ್ಯಗಳನ್ನು, ನವೆಂಬರ್ 14ರಿಂದ ಇಂದೋರ್, ಕೋಲ್ಕತ್ತಾದಲ್ಲಿ 2 ಟೆಸ್ಟ್ ಪಂದ್ಯಗಳನ್ನಾಡಲಿದೆ. ಟಿ20 ಪಂದ್ಯಗಳು 7 pmಗೆ ಆರಂಭವಾಗಲಿವೆ.

ಬಿಗಿ ಭದ್ರತೆ
ಬೆದರಿಕೆ ಸುಳ್ಳಿರಲೂಬಹುದು. ಆದರೆ ಜಾಗೃತರಾಗಿರುವುದರಲ್ಲಿ ಎರಡು ಮಾತಿಲ್ಲ. ಬಾಂಗ್ಲಾ-ಭಾರತ ಸರಣಿಗಳು ನಡೆಯುವ ತಾಣಗಳಲ್ಲಿ ಬಿಗಿ ಭದ್ರತೆ ಒದಗಿಸುವ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎಂದೂ ಕೂಡ ಪೊಲೀಸ್ ಮೂಲಗಳು ತಿಳಿಸಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications