
ಚೆನ್ನೈ: ಟೀಮ್ ಇಂಡಿಯಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಏಪ್ರಿಲ್ 1ರ ಗುರುವಾರ ಚೆನ್ನೈಗೆ ಬಂದಿಳಿದಿದ್ದಾರೆ. 2021ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಲುವಾಗಿ ಕೊಹ್ಲಿ, ಆರ್‌ಸಿಬಿ ಕ್ಯಾಂಪ್ ನಡೆಯುತ್ತಿರುವ ಚೆನ್ನೈಗೆ ತಲುಪಿದ್ದಾರೆ.
ಭಾರತ-ಇಂಗ್ಲೆಂಡ್ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ 2-1ರಿಂದ ಗೆದ್ದಿತ್ತು. ಮಾರ್ಚ್ 28ರಂದು ಏಕದಿನ ಸರಣಿ ಮುಕ್ತಾಯದ ಬಳಿಕ ಕೊಹ್ಲಿ ಎರಡು ದಿನ ಬಿಡುವು ಪಡೆದುಕೊಂಡಿದ್ದರು. ಏಪ್ರಿಲ್ 1ರಿಂದ ಕೊಹ್ಲಿ ಅಭ್ಯಾಸ ಆರಂಭಿಸಲಿದ್ದಾರೆ. ಆರ್‌ಸಿಬಿ ಮತ್ತೊಬ್ಬ ಆಟಗಾರ, ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ ಕೂಡ ಈಗಾಗಲೇ ಚೆನ್ನೈ ತಲುಪಿದ್ದಾರೆ.
ಏಪ್ರಿಲ್ 9ರಂದು 14ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಡಲಿವೆ. ಚೆನ್ನೈನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿರುವುದರಿಂದ ಎರಡೂ ತಂಡಗಳೂ ಸದ್ಯ ಚೆನ್ನೈನಲ್ಲಿವೆ.
ಚೆನ್ನೈಗೆ ಕೊಹ್ಲಿ ಬಂದಿರುವ ವಿಚಾರವನ್ನು ಆರ್‌ಸಿಬಿ ತನ್ನ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ. ಫೋಟೋ ಹಂಚಿಕೊಂಡಿದೆ. ಏಪ್ರಿಲ್ 9ರಂದು ಆರಂಭಗೊಳ್ಳುವ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೇ 30ರಂದು ಕೊನೆಗೊಳ್ಳಲಿದೆ. ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಚೆನ್ನೈ, ಬೆಂಗಳೂರು ಮತ್ತು ಮುಂಬೈ ತಾಣಗಳಲ್ಲಿ ಈ ಐಪಿಎಲ್ ಸೀಸನ್‌ನ ಪಂದ್ಯಗಳು ನಡೆಯಲಿವೆ.