ಮಾರ್ಚ್ 28 ರಿಂದ 19ನೇ ಆವೃತ್ತಿಯ ಐಪಿಎಲ್ ಆರಂಭವಾಗಲಿದೆ. ಈ ಬಾರಿಯ ಉದ್ಘಾಟನಾ ಪಂದ್ಯ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತವರು ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಈ ಶ್ರೀಮಂತ ಲೀಗ್‌ಗಾಗಿ ಆಟಗಾರರು ತಮ್ಮ ತಮ್ಮ ತಯಾರಿಯನ್ನು ಆರಂಭಿಸಿದ್ದಾರೆ. ಆರ್‌ಸಿಬಿ ತಂಡವನ್ನು ಸೇರಿಕೊಳ್ಳಲು ತಂಡದ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ. ವಿರಾಟ್ ಬೆಂಗಳೂರಿಗೆ ಬಂದಿರುವ ವಿಡಿಯೋವನ್ನು ಆರ್‌ಸಿಬಿ ಫ್ರಾಂಚೈಸಿ ತನ್ನ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದೆ.
ಈ ವೀಡಿಯೊವನ್ನು ತುಂಬಾ ಸಿನಿಮೀಯ ಶೈಲಿಯಲ್ಲಿ ಚಿತ್ರೀಕರಿಸಲಾಗಿದೆ. ವೀಡಿಯೋವನ್ನು ಹಂಚಿಕೊಂಡಿರುವ ಆರ್‌ಸಿಬಿ, ಅವರನ್ನು ನೋಡಲು ನೀವು ಬರುವ ಅಗತ್ಯವಿಲ್ಲ. ಅವರೇ ಬರುತ್ತಿದ್ದಾರೆ. ಕ್ಯಾಲೆಂಡರ್ ಒಮ್ಮೆ ಪರಿಶೀಲಿಸಿದರೆ ನಿಮಗೆ ಉತ್ತರ ಸಿಗುತ್ತದೆ ಎಂದು ಬರೆದುಕೊಂಡಿದೆ. ಕೊಹ್ಲಿ ತೊಡುವ ಜೆರ್ಸಿ ನಂಬರ್ 18 ಆಗಿದ್ದು, ಬುಧವಾರವೇ (ಮಾರ್ಚ್ 18) ರಂದು ಆಗಮಿಸಿದ್ದಾರೆ. ಚೇಸಿಂಗ್ ಮಾಸ್ಟರ್ ಅವರನ್ನು ನೋಡಲು ಬಹುದಿನಗಳಿಂದ ಕಾಯುತ್ತಿದ್ದರು. ಈಗ ಅವರು ಬೆಂಗಳೂರಿನಲ್ಲಿ ನಡೆಯುತ್ತಿರುವ ಆರ್‌ಸಿಬಿ ಶಿಬಿರವನ್ನು ಸೇರಿಕೊಂಡಿದ್ದಾರೆ.

ಆರ್‌ಸಿಬಿ ತಂಡ ತನ್ನ ಮೊದಲ ಪಂದ್ಯವನ್ನು ಮಾರ್ಚ್ 28 ರಂದು ಆಡಲಿದೆ. ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ, ಎಸ್‌ಆರ್‌ಎಚ್ ತಂಡಕ್ಕೆ ಸವಾಲು ನೀಡಲಿದೆ. ಈ ಪಂದ್ಯದಲ್ಲಿ ವಿರಾಟ್ ಬ್ಯಾಟ್ ಮಾಡುವುದನ್ನು ನೋಡಬಹುದಾಗಿದೆ. ಮೊದಲ ಪಂದ್ಯದಲ್ಲೇ ವಿರಾಟ್ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣಬಡಿಸಲಿದ್ದಾರೆ.
ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ವಿರಾಟ್ ಅಮೋಘ ಪ್ರದರ್ಶನ ನೀಡಿದ್ದಾರೆ. ಇವರು ಆಡಿದ 15 ಇನಿಂಗ್ಸ್‌ಗಳಲ್ಲಿ 657 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 8 ಅರ್ಧಶತಕಗಳು ಸೇರಿವೆ. ಕಳೆದ ಬಾರಿ ಅಜೇಯ 73 ರನ್ ಬಾರಿಸಿದ್ದು ವಿರಾಟ್ ಶ್ರೇಷ್ಠ ಸಾಧನೆಯಾಗಿತ್ತು. ಇವರು 54.75ರ ಸರಾಸರಿಯಲ್ಲಿ ರನ್ ಕಲೆ ಹಾಕಿದ್ದು, 144ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಇವರು ಈ ವರೆಗೆ ಆಡಿದ 267 ಪಂದ್ಯಗಳ 259 ಇನಿಂಗ್ಸ್‌ಗಳಲ್ಲಿ 39.54 ಸರಾಸರಿ ಮತ್ತು 132.85 ಸ್ಟ್ರೈಕ್ ರೇಟ್‌ನಲ್ಲಿ 8661 ರನ್ ಗಳಿಸಿದ್ದಾರೆ. ಈ ವೇಳೆ 8 ಶತಕ, 63 ಅರ್ಧಶತಕಗಳು ಸೇರಿವೆ. ಕೊಹ್ಲಿ 2008 ರಿಂದಲೂ ಆರ್‌ಸಿಬಿ ತಂಡದ ಪರವೇ ಆಡುತ್ತಿದ್ದಾರೆ.
ಆರ್‌ಸಿಬಿ ತಂಡ ತನ್ನ ಮೊದಲ ಪಂದ್ಯದಲ್ಲಿ ಎಸ್‌ಆರ್‌ಎಚ್ ತಂಡವನ್ನು ಎದುರಿಸಲಿದ್ದು, ಈ ಪಂದ್ಯ ಮಾರ್ಚ್ 28 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಆರ್‌ಸಿಬಿ ತನ್ನ ಎರಡನೇ ಪಂದ್ಯವನ್ನು ತವರಿನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಏಪ್ರಿಲ್ 5 ರಂದು ಆಡಲಿದೆ. ಮೂರನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಏಪ್ರಿಲ್ 10 ರಂದು ಗುವಾಹಟಿಯಲ್ಲಿ ಎದುರಿಸಲಿದೆ. ಮುಂಬೈನ ವಾಂಖೆಡೆ ಅಂಗಳದಲ್ಲಿ ಏಪ್ರಿಲ್ 12 ರಂದು ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಕಾದಾಟ ನಡೆಸಲಿದೆ.